ಚೆನ್ನೈ : ಕೊರೋನ ವೈರಸ್‌ನ ಎರಡನೇ ಅಲೆ ದೇಶಾದ್ಯಂತ ವೇಗವಾಗಿ ಬೀಸುತ್ತಿರುವ ನಡುವೆ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ತಮಿಳುನಾಡಿನ ರಾಜಧಾನಿಯಲ್ಲಿ ಶುಕ್ರವಾರದಿಂದ ಆರಂಭವಾಗಲಿದೆ. ಕೇವಲ ಐದು ತಿಂಗಳ ಹಿಂದೆ ಮುಂಬೈ ಇಂಡಿಯನ್ಸ್ ತಂಡ ಐದನೇ ಬಾರಿ ಐಪಿಎಲ್ ಟ್ರೋಫಿ ಜಯಿಸಿದ್ದು,ಇದೀಗ ಮತ್ತೊಮ್ಮೆ ಐಪಿಎಲ್ ಕ್ರಿಕೆಟ್ ಕಲರವ ಆರಂಭವಾಗಲಿದೆ. 2020ರಲ್ಲಿ ಯುಎಇನಲ್ಲಿ ನಡೆದಿದ್ದ ಐಪಿಎಲ್ ಈ ಬಾರಿ ಭಾರತಕ್ಕೆ ವಾಪಸ್ ಆಗಿದೆ.
ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡ ಹ್ಯಾಟ್ರಿಕ್ ಪ್ರಶಸ್ತಿಯ ಮೇಲೆ ದೃಷ್ಟಿಹರಿಸಿದ್ದರೆ, ವಿರಾಟ್ ಕೊಹ್ಲಿ ಆರ್‌ಸಿಬಿಯ ಕಳಪೆ ಪ್ರದರ್ಶನ ಕೊಂಡಿಯನ್ನು ತುಂಡರಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಮ್ಮೆ ಪ್ರಶಸ್ತಿ ಎತ್ತಲು ನೆರವಾಗುವುದಕ್ಕೆ ಸಜ್ಜಾಗಿ ದ್ದಾರೆ.
ಐದು ತಿಂಗಳ ಅಂತರದಲ್ಲಿ ಐಪಿಎಲ್‌ನ ಎರಡು ಆವೃತ್ತಿಗಳು ನಡೆಯುತ್ತಿರುವುದು ಪಾಲುದಾರರಿಗೆ ಉತ್ತೇಜಿಸುವ ಸನ್ನಿವೇಶವಾಗಿ ಕಾಣುತ್ತಿಲ್ಲ. ಎಪ್ರಿಲ್ 4ರಿಂದ ಪ್ರತಿದಿನವೂ ಒಂದು ಲಕ್ಷಕ್ಕೂ ಅಧಿಕ ಕೊರೋನ ಕೇಸ್‌ಗಳು ದಾಖಲಾಗುತ್ತಿರುವ ಕಾರಣ ಕ್ರಿಕೆಟ್ ಅಭಿಮಾನಿಗಳು ಆತಂಕದಲ್ಲಿದ್ದಾರೆ. ಈ ನಡುವೆ ಏಳು ವಾರಗಳ ಕಾಲ ಐಪಿಎಲ್ ನಡೆಸಲು ಆಯೋಜಕರು ಸಜ್ಜಾಗಿದ್ದಾರೆ.
ಉದ್ಘಾಟನಾ ಪಂದ್ಯವು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಕೊರೋನದಿಂದಾಗಿ ಕ್ರಿಕೆಟ್ ಅಭಿಮಾನಿಗಳು ಸ್ಟೇಡಿಯಂನತ್ತ ಸುಳಿಯದಿದ್ದರೂ ಎರಡೂ ತಂಡಗಳ ಬಿಗ್-ಹಿಟ್ಟರ್‌ಗಳು ಸಿಡಿಲಬ್ಬರದ ಬ್ಯಾಟಿಂಗ್‌ಗೆ ಸಜ್ಜಾಗಿದ್ದಾರೆ.
ಲೀಗ್ ಆರಂಭವಾಗುವ ಮೊದಲೇ ಎರಡೂ ತಂಡಗಳ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೆ ಕೊರೋನ ಪಾಸಿಟಿವ್ ಆಗಿದೆ. ಆದರೆ ಪಂದ್ಯಕ್ಕೆ ಕಟ್ಟುನಿಟ್ಟಿನ ಬಯೋ-ಬಬಲ್ ನಿಯಮ ಜಾರಿಗೊಳಿಸಲಾಗಿದೆ. ಯುಎಇನಲ್ಲಿ ನಡೆದಂತೆ ಭಾರತದಲ್ಲೂ ಟೂರ್ನಿಯು ಸುಗಮವಾಗಿ ನಡೆಯಲಿದೆ ಎಂಬ ವಿಶ್ವಾಸದಲ್ಲಿ ಬಿಸಿಸಿಐ ಇದೆ.
14ನೇ ಆವೃತ್ತಿಯ ಐಪಿಎಲ್‌ಗೆ ಅತ್ಯಂತ ಹೆಚ್ಚು ಮಹತ್ವವಿದೆ. ಏಕೆಂದರೆ ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ 7ನೇ ಆವೃತ್ತಿಯ ಟ್ವೆಂಟಿ-20 ವಿಶ್ವಕಪ್ ನಿಗದಿಯಾಗಿದೆ.
ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ನಾಯಕನಾಗಿರುವ ರೋಹಿತ್ ಅಭೂತಪೂರ್ವ ಆರನೇ ಹಾಗೂ ಲೀಗ್‌ನಲ್ಲಿ ಮೊತ್ತ ಮೊದಲ ಬಾರಿ ಹ್ಯಾಟ್ರಿಕ್ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಒಂದು ವೇಳೆ ರೋಹಿತ್ ವಿಫಲವಾದರೆ, ಕ್ವಿಂಟನ್ ಡಿಕಾಕ್ ತಂಡವನ್ನು ಆಧರಿಸಬಹುದು. ಇಬ್ಬರೂ ವಿಫಲರಾದರೆ, ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಎದುರಾಳಿಗೆ ಭೀತಿ ಹುಟ್ಟಿಸಬಲ್ಲರು. ಅಗ್ರ ಸರದಿ ವಿಫಲವಾದರೆ, ಪಾಂಡ್ಯ ಸಹೋದರರಾದ ಹಾರ್ದಿಕ್ ಹಾಗೂ ಕೃನಾಲ್ ತಂಡವನ್ನು ಆಧರಿಸಲಿದ್ದಾರೆ.
ರಾಷ್ಟ್ರೀಯ ತಂಡದ ನಾಯಕ ಕೊಹ್ಲಿ ಐಪಿಎಲ್‌ನಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ತಯಾರಾಗಿದ್ದಾರೆ. ತಂಡದ ಸಂಯೋಜನೆ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಮತ್ತೊಮ್ಮೆ ಮಣೆ ಹಾಕಲಾಗಿದೆ. ಭಾರತ ನೆಲದಲ್ಲಿ ಹೆಚ್ಚು ಆಡದ ನ್ಯೂಝಿಲ್ಯಾಂಡ್‌ನ ಕೈಲ್ ಜಮೀಸನ್ ಈ ವರ್ಷ ನಡೆದ ಆಟಗಾರರ ಹರಾಜಿನಲ್ಲಿ ಆರ್‌ಸಿಬಿಯಿಂದ 15 ಕೋ.ರೂ.ಗೆ ಖರೀದಿಸಲ್ಪಟ್ಟು ಸುದ್ದಿಯಾಗಿದ್ದರು. ದೇವದತ್ತ ಪಡಿಕ್ಕಲ್ ಎರಡನೇ ವರ್ಷ ಆರ್‌ಸಿಬಿ ಪರ ಆಡಲಿದ್ದಾರೆ. ಈ ವರ್ಷಾರಂಭದಲ್ಲಿ ಆಸ್ಟ್ರೇಲಿಯದಲ್ಲಿ ಮಿಂಚಿರುವ ಮುಹಮ್ಮದ್ ಸಿರಾಜ್ ಹಾಗೂ ನವದೀಪ್ ಸೈನಿ ಐಪಿಎಲ್‌ನಲ್ಲಿ ಮಿಂಚುವ ವಿಶ್ವಾಸದಲ್ಲಿದ್ದಾರೆ.
ಮತ್ತೊಂದೆಡೆ ಧೋನಿ ನೇತೃತ್ವದ ಚೆನ್ನೈ ತಂಡ ಶನಿವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸವಾಲು ಎದುರಿಸಲಿದೆ.
ಸುರೇಶ್ ರೈನಾ ಅವರ ಪುನರಾಗಮನ, ಆಲ್‌ರೌಂಡರ್‌ಗಳಾದ ಮೊಯಿನ್ ಅಲಿ ಹಾಗೂ ಸ್ಯಾಮ್ ಕರ್ರನ್ ಉಪಸ್ಥಿತಿಯು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕಳೆದ ವರ್ಷಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿಸಿದೆ.
ಟೀಮ್ ನ್ಯೂಸ್
ಕ್ವಿಂಟನ್ ಡಿಕಾಕ್ ಹಾಗೂ ಆಡಮ್ ಮಿಲ್ನೆ ತಾವು ವಾಸ್ತವ್ಯವಿರುವ ಹೊಟೇಲ್‌ನಲ್ಲಿ 7 ದಿನಗಳ ಕ್ವಾರಂಟೈನ್‌ನಲ್ಲಿದ್ದಾರೆ. ಹೀಗಾಗಿ ಶುಕ್ರವಾರದ ಮೊದಲ ಪಂದ್ಯಕ್ಕೆ ಲಭ್ಯವಿರುವುದಿಲ್ಲ. ದೇವದತ್ತ ಪಡಿಕ್ಕಲ್ ಕೋವಿಡ್-19ರಿಂದ ಚೇತರಿಸಿಕೊಂಡು ಆರ್‌ಸಿಬಿ ತಂಡಕ್ಕೆ ಮರು ಸೇರ್ಪಡೆಯಾಗಿದ್ದಾರೆ. ಆರಂಭಿಕ ಆಟಗಾರ ಪಡಿಕ್ಕಲ್ ಬುಧವಾರ ತಮ್ಮ ಸಹ ಆಟಗಾರರೊಂದಿಗೆ ಅಭ್ಯಾಸ ನಡೆಸಿದರು. ಆರ್‌ಸಿಬಿಗೆ ಮೊದಲ ಪಂದ್ಯದಲ್ಲಿ ಫಿನ್ ಅಲ್ಲೆನ್ ಹಾಗೂ ಆಡಮ್ ಝಾಂಪ ಅವರ ಸೇವೆ ಲಭಿಸುವುದಿಲ್ಲ. ಈ ಇಬ್ಬರು ಇನ್ನಷ್ಟೇ ಕ್ವಾರಂಟೈನ್ ಪೂರೈಸಬೇಕಾಗಿದೆ.