ಮಾಲೀಕನನ್ನೇ ಕುತ್ತಿಗೆ ಕೊಯ್ದು ಕೊಂದ ಕೋಳಿ….!

ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಕಾಳಗದಲ್ಲಿ ಪಾಲ್ಗೊಳ್ಳುತ್ತಿದ್ದ ಹುಂಜವೊಂದು ಕಾಲಿಗೆ ಹಾಕಿದ್ದ ಹರಿತವಾದ ಚಾಕುವಿನಿಂದ ಮಾಲೀಕನ ಕುತ್ತಿಗೆ ಕೊಯ್ದು ಕೊಲೆ ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಶನಿವಾರ ಈ ಘಟನೆ ನಡೆದಿದ್ದು, ಜಗಳಕ್ಕೆ ಸಿದ್ಧವಾಗಿದ್ದ ಕೋಳಿಯ ಕಾಲುಗಳಿಗೆ ಹರಿತವಾದ ಚಾಕು ಕಟ್ಟಲಾಗಿತ್ತು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಕೋಳಿಯ ಕಾಲುಗಳಿಗೆ ಹಾಕಿದ್ದ ಚೂಪಾದ ಚಾಕು ಮಾಲೀಕನ ಕುತ್ತಿಗೆ ಕೊಯ್ದಿದೆ.

ತೆಲಂಗಾಣದ ಕರೀಂನಗರ ಜಿಲ್ಲೆಯ ಲೋಥನೂರ್ ನಲ್ಲಿ 16 ಜನರ ಗುಂಪು ಅಕ್ರಮವಾಗಿ ಕೋಳಿ ಜಗಳದ ಜೂಜು ಆಯೋಜಿಸಿದ್ದರು. ಗಾಯಗೊಂಡ ಮಾಲೀಕನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ತೀವ್ರ ರಕ್ತಸ್ರಾವದಿಂದ ಮಾಲೀಕ ರಸ್ತೆ ಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋಳಿಯನ್ನು ವಶಕ್ಕೆ ಪಡೆದ ಪೊಲೀಸರು ಕೋಳಿ ಫಾರಂಗೆ ಬಿಟ್ಟಿದ್ದು, ಅಕ್ರಮವಾಗಿ ಕೋಳಿ ಜಗಳದ ಜೂಜು ಆಯೋಜಿಸಿದ್ದ ಇತರ 15 ಮಂದಿ ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.

Leave a Reply

Your email address will not be published.