ಹಿರಿಯೂರು: ‘ಪಂಚಮಸಾಲಿ ಸಮುದಾಯಕ್ಕೆ 2 ‘ಎ’ ಮೀಸಲಾತಿಗೆ ಆಗ್ರಹಿಸಿ ಪಾದಯಾತ್ರೆ ನಡೆಯುತ್ತಿರುವ ಸಮಯದಲ್ಲಿ ಸರ್ಕಾರ ಸಚಿವರ ಮೂಲಕ ಸಂಧಾನಕ್ಕೆ ಮುಂದಾಗಿರುವುದು ಸಂತಸದ ವಿಚಾರ. ಆದರೆ ಮೀಸಲಾತಿ ಕುರಿರು ಗೆಜೆಟ್‌ನಲ್ಲಿ ಪ್ರಕಟ ಆಗುವವರೆಗೆ ಹೋರಾಟ ನಿಲ್ಲದು’ ಎಂದು ಲಿಂಗಾಯತ ಪಂಚಮಸಾಲಿ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು.
ನಗರದ ಪ್ರವಾಸಿ ಮಂದಿರದ ಸಮೀಪದ ಅಂಬೇಡ್ಕರ್ ವೃತ್ತಕ್ಕೆ ಗುರುವಾರ ರಾತ್ರಿ ಪಾದಯಾತ್ರೆ ಬಂದಾಗ, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
‘2009ರಲ್ಲಿ ಯಡಿಯೂರಪ್ಪ ಅವರು ಪಂಚಮಸಾಲಿಗಳನ್ನು 3 ‘ಬಿ’ ಸೇರಿಸಿದ್ದರು. ಅಂದೇ ‘2ಎ’ಗೆ ಸೇರಿಸಬೇಕಿತ್ತು. ತಾಂತ್ರಿಕ ಕಾರಣ ಹೇಳಿ ನಮ್ಮ ಹಕ್ಕೊತ್ತಾಯವನ್ನು ಕೈಬಿಡಲಾಯಿತು. ಈಗ ನಮ್ಮ ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ನಮಗೆ ಭರವಸೆ, ಸಂಧಾನದ ಮಾತುಗಳು ಬೇಕಿಲ್ಲ. ನಮ್ಮ ಸಮುದಾಯದ ಮಕ್ಕಳ ಭವಿಷ್ಯಕ್ಕೆ ಮೀಸಲಾತಿ ಬೇಕೇಬೇಕು. ಸರ್ಕಾರದ ಆದೇಶ ಹೊರ ಬೀಳುವವರೆಗೆ ಹೋರಾಟದಿಂದ ಹಿಂದೆ ಸರಿಯುವ ಮಾತಿಲ್ಲ’ ಎಂದು ಹೇಳಿದರು.
‘ಹಿಂದೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ್ದೆವು. ಉಪವಾಸ ಸತ್ಯಾಗ್ರಹ ಮಾಡಿದ್ದೆವು. ಫಲ ಸಿಗದ ಕಾರಣಕ್ಕೆ 700 ಕಿ.ಮೀ. ದೂರದ ಪಾದಯಾತ್ರೆ ನಡೆಸುತ್ತಿದ್ದೇವೆ. ಫೆ. 15 ರಂದು ಬೆಂಗಳೂರು ತಲುಪುವುದರ ಒಳಗೆ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಬೇಕು. ನಾವು ಭಿಕ್ಷೆ ಕೇಳುತ್ತಿಲ್ಲ, ಬದಲಿಗೆ ನಮ್ಮ ಹಕ್ಕು ಕೇಳುತ್ತಿದ್ದೇವೆ’ ಎಂದರು.
ಹರಿಹರ ಪೀಠದ ವಚನಾನಂದ ಸ್ವಾಮೀಜಿ, ‘ಮೀಸಲಾತಿಗಾಗಿ ಬ್ಲಾಕ್‌ಮೇಲ್ ಮಾಡುತ್ತಿಲ್ಲ. ನಮ್ಮ ಸಮುದಾಯದ 17 ಶಾಸಕರಿದ್ದಾರೆ ಎಂಬ ಕಾರಣಕ್ಕೆ ಬಲಪ್ರದರ್ಶನ ಮಾಡುವುದು ಉದ್ದೇಶವಲ್ಲ. ಪಾದಯಾತ್ರೆ ಮೂಲಕ ನಮ್ಮ ಸಮುದಾಯದ ಸಂಕಷ್ಟಗಳನ್ನು ಸಾರ್ವಜನಿಕರಿಗೆ ತಿಳಿಸುವ ಮೂಲಕ ಮೀಸಲಾತಿಯ ಅನಿವಾರ್ಯತೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ’ ಎಂದು ಹೇಳಿದರು.
ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಸ್ಥಳೀಯ ವೀರಶೈವ ಸಮುದಾಯದ ಮುಖಂಡರು ಇದ್ದರು.