ಮಹಿಳಾ ಅಧಿಕಾರಿ ಎಸಿಬಿ ಬಲೆಗೆ

ಹೊರಗುತ್ತಿಗೆ ಮೇಲೆ ಬಾಂದು ಜವಾನ ಹುದ್ದೆ ನೇಮಕಾತಿಗೆ ಶಿಫಾರಸು ಮಾಡಲು ವ್ಯಕ್ತಿಯಿಂದ ಲಂಚ ಸ್ವೀಕರಿಸುತ್ತಿದ್ದ ಜಿಲ್ಲಾ ಭೂದಾಖಲೆಗಳ ಉಪನಿರ್ದೇಶಕಿ ವಿಜಯ ಅವರು ಎಸಿಬಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ.

ಮಂಡ್ಯತಾಲೂಕಿನ ಮಾರಸಿಂಗನಹಳ್ಳಿ ಮಹದೇವಯ್ಯ ಅವರಿಂದ 25 ಸಾವಿರ ರೂ. ಲಂಚವನ್ನು ಕಚೇರಿಯಲ್ಲಿ ಪಡೆಯುತ್ತಿದ್ದಾಗ ಎಸಿಬಿ ಪ್ರಭಾರ ಉಪಾಧೀಕ್ಷಕ ಎಚ್.ಪರಶುರಾಮಪ್ಪ ನೇತೃತ್ವದ ಅಧಿಕಾರಿಗಳ ತಂಡ ನಡೆಸಿ ಲಂಚದ ಸಮೇತ ಸಿಕ್ಕಿ ಬಿದ್ದಿದ್ದು, ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

ಮಹದೇವಯ್ಯ ಹಾಗೂ ಇತರೆ 6 ಮಂದಿ ಸರ್ವೆಯರ್‌ಗೆ ಬಾಂದು ಜವಾನ ಹುದ್ದೆಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಹೊರಗುತ್ತಿಗೆ ಟೆಂಡರ್ ಪಡೆದಿರುವ ಸಮರ್ಥ್ ಆಲೈಡ್ ಸರ್ವೀಸಸ್ ಏಜೆನ್ಸಿಗೆ ಶಿಫಾರಸು ಮಾಡುವಂತೆ ಜಿಲ್ಲಾ ಭೂದಾಖಲೆಗಳ ಉಪನಿರ್ದೇಶಕಿ ವಿಜಯ ಅವರಿಗೆ ಜ.6ರಂದು ಮನವಿ ಮಾಡಿದ್ದಾರೆ. ಅದರಂತೆ ಜ.7ರಂದು ಹೊರಗುತ್ತಿಗೆ ನೇಮಕ ಮಾಡಿಕೊಳ್ಳಲು ಶಿಫಾರಸು ಪತ್ರ ನೀಡಲು 30 ಸಾವಿರ ರೂ. ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಇದರ ವಿರುದ್ಧ ಜ.16ರಂದು ಮಂಡ್ಯ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರಿಗೆ ಮಹದೇವಯ್ಯ ದೂರು ನೀಡಿದ್ದಾರೆ. ಅದರಂತೆ ಲಂಚ ನೀಡುವಂತೆ ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಎಸಿಬಿ ಅಧಿಕಾರಿಗಳ ನಿರ್ದೇಶನದಂತೆ ಮಹದೇವಯ್ಯ ಸೋಮವಾರ ಅವರ ಕಚೇರಿಯಲ್ಲಿ 25 ಸಾವಿರ ರೂ. ಲಂಚ ನೀಡುತ್ತಿರುವಾಗ ದಾಳಿ ನಡೆಸಿದ ಎಸಿಬಿ ತಂಡ ಹಣ ಹಾಗೂ ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಜಯ ಅವರು ಜಿಲ್ಲಾಧಿಕಾರಿ ಕಚೇರಿಯ ಅಧೀಕ್ಷಕರಾಗಿದ್ದು, ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕಿಯಾಗಿಯೂ ಅಧಿಕಾರ ವಹಿಸಿಕೊಂಡಿದ್ದರು.
ದಾಳಿ ಸಂದರ್ಭದಲ್ಲಿ ಎಸಿಬಿ ಇನ್ಸ್ಪೆಕ್ಟರ್ ಸತೀಶ್ ಹಾಗೂ ಸಿಬ್ಬಂದಿಗಳು ಇದ್ದರು.

Leave a Reply

Your email address will not be published.