ಪ್ರತಿ ತಿಂಗಳು ಬ್ಯಾಂಕ್‌ಗೆ ಇಂತಿಷ್ಟು ರಜಾ ದಿನಗಳೆಂದು ಘೋಷಿಸಲಾಗುತ್ತದೆ. ಆದರೆ, ಒಮ್ಮೊಮ್ಮೆ ಎಲ್ಲ ರಜೆಗಳು ಒಂದೇ ವೇಳೆಯಲ್ಲಿ ಬರುತ್ತದೆ. ಸತತವಾಗಿ 2 – 3 ದಿನಗಳ ಕಾಲ ರಜಾ ಇದ್ದರೆ ಬ್ಯಾಂಕ್ ಗ್ರಾಹಕರಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಎಲ್ಲರಿಗೂ ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರದ ಬಗ್ಗೆ ಹೆಚ್ಚಿನ ಅರಿವಿಲ್ಲದ ಕಾರಣ ಇನ್ನೂ ಹಲವರು ಬ್ಯಾಂಕ್‌ಗೆ ಹೋಗುತ್ತಾರೆ. ಇದೇ ರೀತಿ, ಮಾರ್ಚ್ ತಿಂಗಳಲ್ಲಿ ಮುಂಬರುವ 9 ದಿನಗಳಲ್ಲಿ ಐದು ದಿನಗಳು ಬ್ಯಾಂಕ್ ಬಂದ್ ಆಗಲಿದೆ. ಇದರಿಂದ ಬ್ಯಾಂಕ್ ಕೆಲಸವಿರುವ ಗ್ರಾಹಕರಿಗೆ ತೊಂದರೆಯಾಗಬಹುದು.
ಈ ವಾರ, ಗುರುವಾರ ಮಾ. 11 ಮಹಾಶಿವರಾತ್ರಿಯ ರಜಾದಿನವಾಗಿದ್ದು, ಮಾರ್ಚ್ 12ರ ಶುಕ್ರವಾರದಂದು ಮಾತ್ರ ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತವೆ. ನಂತರ ಎರಡನೇ ಶನಿವಾರ ಮತ್ತು ಭಾನುವಾರದ ರಜಾ ದಿನದಿಂದಾಗಿ ಬ್ಯಾಂಕುಗಳು ಕ್ಲೋಸ್ ಆಗಿರುತ್ತದೆ.
ಈ ವಾರ ಆಗಲಿಲ್ಲವೆಂದರೆ, ಮುಂದಿನ ವಾರ ಹೋಗುತ್ತೇವೆ ಅಂತೀರಾ…? ಇಲ್ಲಿ ಗಮನಿಸಿ.. ಮಾರ್ಚ್ 15, ಸೋಮವಾರ ಮತ್ತು ಮಾರ್ಚ್ 16 ರ ಮಂಗಳವಾರದಂದು ಹಲವು ಬ್ಯಾಂಕ್ ಯೂನಿಯನ್‌ಗಳು ಮುಷ್ಕರಕ್ಕೆ ಕರೆ ನೀಡಿದ್ದು, ಈ ಹಿನ್ನೆಲೆ ಹಲವು ಬ್ಯಾಂಕ್‌ಗಳು ಬಂದ್ ಆಗುತ್ತೆ ಎನ್ನಲಾಗಿದೆ. ಇನ್ನು, ದೀರ್ಘ ರಜಾದಿನಗಳಿಂದಾಗಿ ಅನೇಕ ಬ್ಯಾಂಕ್ ಉದ್ಯೋಗಿಗಳು ಸಹ ರಜೆಯಲ್ಲಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಬ್ಯಾಂಕ್ ರಜೆ ಮತ್ತು ಮುಷ್ಕರ ನಡುವೆ ಕೇವಲ ಒಂದು ದಿನ ಮಾತ್ರ ಬ್ಯಾಂಕ್ ತೆರೆಯುವುದರಿಂದ ಬ್ಯಾಂಕ್ ಶಾಖೆಯಲ್ಲಿ ಶುಕ್ರವಾರ ಹೆಚ್ಚು ಕ್ಯೂ ಇರುತ್ತದೆ. ಈ ಹಿನ್ನೆಲೆ ನಿಮ್ಮ ಬ್ಯಾಂಕ್ ಕೆಲಸ ಇದ್ದರೆ, ಇಂದೇ ಹೋಗಿ. ಇವತ್ತು ಸಾಧ್ಯವಾಗದಿದ್ದರೆ, ನಾಳೆಯಾದರೂ ನಿಮ್ಮ ಬ್ಯಾಂಕ್ ಕೆಲಸಗಳನ್ನು ಪೂರೈಸಿಕೊಳ್ಳಿ.
ಬ್ಯಾಂಕ್ ಮುಷ್ಕರ ಯಾಕೆ..?
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಬ್ಯಾಂಕುಗಳು ಮಾರ್ಚ್ 15 ಹಾಗೂ ಮಾರ್ಚ್ 16ರಂದು ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣದ ವಿರುದ್ಧ ಹಲವು ಬ್ಯಾಂಕ್ ಒಕ್ಕೂಟಗಳು ಮುಷ್ಕರಕ್ಕೆ ಕರೆ ನೀಡಿವೆ.
ಮುಷ್ಕರಕ್ಕೆ ಬೆಂಬಲಿಸುವ ಸಂಘಟನೆಗಳು ಯಾವುವು..?
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (AIBEA), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (AIBOC), ಬ್ಯಾಂಕ್ ನೌಕರರ ರಾಷ್ಟ್ರೀಯ ಒಕ್ಕೂಟ (NCBE), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (AIBOA), ಬ್ಯಾಂಕ್ ನೌಕರರ ಒಕ್ಕೂಟ (BEFI), ಭಾರತೀಯ ರಾಷ್ಟ್ರೀಯ ಬ್ಯಾಂಕ್ ನೌಕರರ ಒಕ್ಕೂಟ (INBEF), ಕೆನರಾ ಬ್ಯಾಂಕ್ ನೌಕರರ ಕಾಂಗ್ರೆಸ್ ಫೆಡರೇಷನ್, ಭಾರತೀಯ ರಾಷ್ಟ್ರೀಯ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್ (INBOC), ಬ್ಯಾಂಕ್ ಕಾರ್ಮಿಕರ ರಾಷ್ಟ್ರೀಯ ಸಂಸ್ಥೆ (NOBW), ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಸಂಸ್ಥೆ (NOBO), ಅಖಿಲ ಭಾರತ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (AINBOF) ಸೇರಿ ಹಲವು ಯೂನಿಯನ್‌ಗಳು ಮುಷ್ಕರಕ್ಕೆ ಕರೆ ನೀಡಿವೆ.
ತಿಂಗಳಾಂತ್ಯದಲ್ಲೂ ಬ್ಯಾಂಕ್ ರಜೆಗಳು
ನಂತರ ಮಾರ್ಚ್ 27, 28ರಂದು ನಾಲ್ಕನೇ ಶನಿವಾರ ಹಾಗೂ ಭಾನುವಾರ ಬ್ಯಾಂಕ್ ರಜೆ ಇದ್ದರೆ, ಮಾರ್ಚ್ 29, 30ರಂದು ಸಹ ಹೋಳಿ ಆಚರಣೆಗೆ ಹಲವು ಬ್ಯಾಂಕ್‌ಗಳು ಬಂದ್ ಆಗಲಿದೆ. ಇದರಿಂದ ಬ್ಯಾಂಕ್ ಗ್ರಾಹಕರಿಗೆ ತೊಂದರೆಗೀಡಾಗುವ ಸಾಧ್ಯತೆಗಳಿರುತ್ತದೆ.