ಏನೋ ಮಾಡಲು ಹೋಗಿ ಮತ್ತೇನೋ ಆಯ್ತು, ಅಂದುಕೊಂಡದ್ದೇ ಒಂದು ಆದದ್ದೇ ಬೇರೆ, ಕೆಲವೊಮ್ಮೆ ನಿರೀಕ್ಷೆಗೂ ಮೀರಿ ಲಕ್ ಖುಲಾಯಿಸುತ್ತೆ… ಎಂಬ ಮಾತು ಅಕ್ಷರಶಃ ಈ ಘಟನೆ ಅನ್ವಯಿಸುತ್ತೆ.
ಹೌದು, ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಇಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಪುರ ಗ್ರಾಮದಲ್ಲಿ ಇಂತಹದ್ದೊಂದು ಅಪರೂಪದ ಘಟನೆ ಸಂಭವಿಸಿದೆ. ಮುಂಗುಸಿ ಕಾಟ ತಾಳಲಾರದೆ ಅದನ್ನು ಹಿಡಿಯಲೆಂದು ಗ್ರಾಮಸ್ಥರೊಬ್ಬರು ಬೋನು ಇಟ್ಟಿದ್ದರು. ನಿರೀಕ್ಷೆಯಂತೆ ಅದರಲ್ಲಿ ಮುಂಗುಸಿ ಬೀಳಬೇಕಿತ್ತು. ಆದರೆ, ಸರೆಯಾಗಿದ್ದು ಮಾತ್ರ ಚಿರತೆ!
ಬಸವನಪುರ ಗ್ರಾಮದಲ್ಲಿ ಮುಂಗುಸಿಗಳ ಕಾಟ ಹೆಚ್ಚಾಗಿದೆ. ಎಷ್ಟೇ ಎಚ್ಚರ ವಹಿಸುತ್ತಿದ್ದರೂ ನೋಡನೋಡುತ್ತಿದ್ದಂತೆಯೇ ಕೋಳಿಗಳನ್ನು ಮುಂಗಿಸಿ ಹಿಡಿದುಕೊಂಡು ಮರೆಯಾಗುತ್ತಿತ್ತು. ಕೋಳಿಗಳನ್ನು ಉಳಿಯಬೇಕಿದ್ದರೆ ಮುಂಗಿಸಿಯನ್ನ ಸರೆ ಹಿಡಿದು ಬೇರೆಡೆಗೆ ಬಿಡುವ ಯೋಜನೆ ರೂಪಿಸಿದ ಗ್ರಾಮದ ಕುಮಾರ ಎಂಬಾತ, ಬೋನು ಇಟ್ಟಿದ್ದರು.ಆದರೆ, ಸೋಮವಾರ ರಾತ್ರಿ ಮುಂಗುಸಿ ಬದಲು ಒಂದು ವರ್ಷದ ಗಂಡು ಚಿರತೆ ಸೆರೆಯಾಗಿದೆ. ಸುಮಾರು 8 ಗಂಟೆ ಸಮಯದಲ್ಲಿ ಚಿರತೆ ಬೋನಿಗೆ ಬಿದ್ದಿದ್ದು, ಭಯಗೊಂಡ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಆರ್ಎಫ್ಒ ಮಂಜುನಾಥ್ ನೇತೃತ್ವದ ಸಿಬ್ಬಂದಿ ಚಿರತೆಯನ್ನ ಹಿಡಿದುಕೊಂಡು ಹೋದರು.
ಇನ್ನು ಇಪ್ಪಾಡಿ ಅರಣ್ಯ ವಲಯದ ಸುತ್ತಮುತ್ತಲ ಗ್ರಾಮದಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು, ಮೂರ್ನಾಲ್ಕು ತಿಂಗಳ ಹಿಂದಷ್ಟೇ ಮನೆ ಮುಂದೆ ಆಟವಾಡುತ್ತಿದ್ದ ಬಾಲಕನನ್ನು ಹೊತ್ತೊಯ್ದು ಕೊಂದುಹಾಕಿದ್ದ ಕಹಿಘಟನೆ ಇನ್ನೂ ಹಸಿಯಾಗೇ ಇದೆ. ಸದ್ಯ ಮುಂಗುಸಿ ಹಿಡಿಯುವ ನೆಪದಲ್ಲಿ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ನಿಟ್ಟುಸಿರುಬಿಟ್ಟಿದ್ದಾರೆ.