ಬೆಂಗಳೂರು, ಫೆ.4- ವೆಬ್‍ಸೈಟ್ ಮುಖಾಂತರ ಹುಡುಗಿಯರನ್ನು ವೇಶ್ಯಾವಾಟಿಕೆಗೆ ಕಳುಹಿಸಿ ಹನಿಟ್ರ್ಯಾಪ್ ಮೂಲಕ ಸಾರ್ವಜನಿಕರಿಂದ ಹಣ ಮತ್ತು ಚಿನ್ನಾಭರಣಗಳನ್ನು ದೋಚುತ್ತಿದ್ದ ದಂಪತಿಯನ್ನು ವೈಟ್‍ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಭಾಸ್ವತಿ ದತ್ತಾ (26) ಮತ್ತು ಕಿರಣ್‍ರಾಜ್ (33) ಬಂಧಿತ ದಂಪತಿ.
ಈ ದಂಪತಿ ತಮ್ಮ ಸಹಚರರೊಂದಿಗೆ ಪೂರ್ವಯೋಜಿತವಾಗಿ ವೆಬ್‍ಸೈಟ್‍ವೊಂದರ ಮೂಲಕ ಬುಕ್ ಮಾಡಲಾಗಿದ್ದ ವೈಟ್‍ಫೀಲ್ಡ್ ನಿವಾಸಿಯೊಬ್ಬರ ಮನೆಗೆ ಕಾಲ್‍ಗರ್ಲ್ ಕಳುಹಿಸಿದ್ದಾರೆ. ವೇಶ್ಯಾವಾಟಿಕೆ ನಂತರ ಆ ಕಾಲ್‍ಗರ್ಲ್ ತನ್ನನ್ನು ಬಲಾತ್ಕಾರ ಮಾಡಿರುವುದಾಗಿ ನಿನ್ನ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ, ನಿನ್ನ ಮಾನ-ಮರ್ಯಾದೆ ಕಳೆಯುತ್ತೇನೆಂದು ಬೆದರಿಸಿ 94 ಸಾವಿರ ಹಣವನ್ನು ಗೂಗಲ್ ಪೇ ಮೂಲಕ ಆರೋಪಿತರ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದಾಳೆ.
ನಂತರ ಇತರರನ್ನು ಕರೆಸಿ, ಹೆದರಿಸಿ ಮನೆಯಲ್ಲಿದ್ದ ಸುಮಾರು 150 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿದ್ದಾರೆ. ಈ ಬಗ್ಗೆ ವೈಟ್‍ಫೀಲ್ಡ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ದಂಪತಿಯನ್ನು ಬಂಧಿಸಿದ್ದಾರೆ.
ಆರೋಪಿ ದಂಪತಿ ವೈಟ್‍ಫೀಲ್ಡ್ ಠಾಣೆ ಸರಹದ್ದಿನಲ್ಲಿ ಎಸಗಿರುವ ಕೃತ್ಯಗಳ ಸಂಬಂಧ ಎರಡು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.
ಇದೇ ರೀತಿ 2018 ರಿಂದ ಇದುವರೆಗೂ ಹಲವಾರು ಕೃತ್ಯಗಳಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಿಂದ ಕಂಡುಬಂದಿದ್ದು, ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ವೈಟ್‍ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತ ಡಿ.ದೇವರಾಜ ಮಾರ್ಗದರ್ಶನದಲ್ಲಿ, ಸಹಾಯಕ ಪೊಲೀಸ್ ಆಯುಕ್ತರಾದ ಮನೋಜ್‍ಕುಮಾರ್, ಇನ್‍ಸ್ಪೆಕ್ಟರ್ ಗಿರೀಶ್ ಅವರನ್ನೊಳಗೊಂಡ ತಂಡ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಈ ತಂಡದ ಕಾರ್ಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.