ಪಾಠ ಮಾಡಬೇಕಾದ ಶಿಕ್ಷಕರು ಶಾಸಕರ ಕಾಲಿಗೆ ಬಿದ್ದು ಉರುಳಾಡಿದರು: ಕಾರಣವೇನು ಗೊತ್ತಾ….?

ಕಲಬುರ್ಗಿ: ಗುರುಗಳಿಗೆ ಸಮಾಜದಲ್ಲಿ ತನ್ನದೇ ಆದ ಗೌರವ ಸ್ಥಾನವಿದೆ. ಪಾಠ ಮಾಡುವ ಮೂಲಕ, ವಿದ್ಯಾರ್ಥಿಗಳನ್ನು ತಿದ್ದಿ ತೀಡಿ ಮಕ್ಕಳ ಭವಿಷ್ಯ ರೂಪಿಸುವ ಶಕ್ತಿ ಶಿಕ್ಷಕರಿಗಿದೆ. ಕೈಯಲ್ಲಿ ಪೆನ್ನು, ಪೆನ್ಸಿಲ್, ಚಾಕ್ ಪೀಸ್ ಹಿಡಿದು ಪಾಠ ಮಾಡುತ್ತ ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಕರು ಶಾಸಕರ ಕಾಲಿಗೆ ಬಿದ್ದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ತಮ್ಮ ಬೇಡಿಕೆಗಳ ಈಡೇರಿಕೆಗೆಗಾಗಿ, ನ್ಯಾಯಕ್ಕಾಗಿ ಜನಪ್ರತಿನಿಧಿಗಳ ಮನೆ ಮುಂದೆ ಗಂಟೆ ಬಾರಿಸಿ, ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿ, ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಿದ್ದಾರೆ ಶಿಕ್ಷಕರು.
ಜನಪ್ರತಿನಿಧಿಗಳ ಮನೆ ಮುಂದೆ ಕುಳಿತು ಒಮ್ಮೆ ಬೇಕೆ ಬೇಕು ನ್ಯಾಯ ಬೇಕು ಅಂತಿರೋ ಶಿಕ್ಷಕರು. ಮತ್ತೊಮ್ಮೆ ಗಂಟೆ ಬಾರಿಸಿ, ಬೊಬ್ಬೆ ಹೊಡೆದು, ಕಾಲು ಮುಗಿದು ಬೇಡಿಕೆಗಳ ಈಡೇರಿಕೆ ಒತ್ತಾಯ. ಮಗದೊಮ್ಮೆ ರಾಜ್ಯ ಸರ್ಕಾರ, ಸಿಎಂ ಯಡಿಯೂರಪ್ಪ ಮತ್ತು ಜನಪ್ರತಿನಿಧಿಗಳಿಗೆ ಧಿಕ್ಕಾರ ಹಾಕ್ತಿರುವ ಶಿಕ್ಷಣ ಸಂಸ್ಥೆಯವರು. ಈ ದೃಶ್ಯ ಕಂಡು ಬಂದಿರೋದು ಕಲಬುರ್ಗಿಯ ಜನಪ್ರತಿನಿಧಿಗಳ ಮನೆಗಳ ಮುಂದೆ. ಕೊರೋನಾ ಹಾವಳಿಯ ಲಾಕ್ ಡೌನ್ ಸಂದರ್ಭದಲ್ಲಿ ಶಾಲೆಗಳು ಬಂದ್ ಆಗಿರೋದ್ರಿಂದ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿವೆ. ಹೀಗಾಗಿ ಅನುದಾನ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾಲು ಸಾಲು ಹೋರಾಟ ಮಾಡಿದರೂ ಯಾವುದೇ ಪ್ರಯೋಜನ ಆಗದಿದ್ದಕ್ಕೆ ಇಂದು ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಯ ಮಾಲೀಕರು, ಸದಸ್ಯರು, ಶಿಕ್ಷಕರು ಎಲ್ಲರೂ ಸೇರಿಕೊಂಡು ಜನಪ್ರತಿನಿಧಿಗಳ ಮನೆಗಳ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಜನಪ್ರತಿನಿಧಿಗಳು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ನಮ್ಮ ಪರವಾಗಿ ಧ್ಬನಿ ಎತ್ತುತ್ತಿಲ್ಲ ಅಂತಾ ಇಂದು ಶಾಸಕರು, ಸಂಸದರ ಮನೆಗಳ ಮುಂದೆ ಗಂಟೆ ಬಾರಿಸಿ, ಬೊಬ್ಬೆ ಹೊಡೆದು ವಿಭಿನ್ನವಾಗಿ ಪ್ರತಿಭಟನೆ ನಡೆಸಿ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಿದರು.

ಅಫಜಲಪುರ ಶಾಸಕ ಎಂ ವೈ ಪಾಟೀಲ್ ಅವರ ಮನೆ ಮುಂದೆ ಹೋರಾಟ ಮಾಡುವಾಗ ಖಾಸಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಾರಂಪಳ್ಳಿ ಅನ್ನೋರು ಶಾಸಕರ ಕಾಲಿಗೆ ಬಿದ್ದು, ನೆಲದ ಮೇಲೆ ಹೊರಳಾಡಿ ತಮ್ಮ ಕಷ್ಡವನ್ನು ತೋಡಿಕೊಂಡಿದ್ದಾರೆ. ನಿನ್ನೆ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದಾಗ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸದ ಡಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನಿಷ್ಠ ನೀವಾದರೂ ನಮ್ಮ ಮನವಿ ಸ್ವೀಕರಿಸಲು ಬಂದಿದ್ದೀರಿ ಎಂದು ಎಂ.ವೈ.ಪಾಟೀಲರ ಕಾಲಿಗೆರಗಿ, ರಸ್ತೆಯ ಮೇಲೆಯೇ ಉರುಳಾಡಿದ್ದಾರೆ. ಇವರ ಹೋರಾಟಕ್ಕೆ ಸ್ಪಂದಿಸಿದ ಶಾಸಕ ಎಂವೈ ಪಾಟೀಲ್ ಅವರು, ಸರ್ಕಾರದ ಗಮನಕ್ಕೆ ತಂದು ಬೇಡಿಕೆಗಳ ಈಡೇರಿಕೆಗೆ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ.
ಮೊನ್ನೆ ಶಿಕ್ಷಣ ಸಂಸ್ಥೆಯೊಂದರ ಮಾಲೀಕ ಶಂಕರ್ ಬಿರಾದಾರ ಎಂಬುವವರು ಸಾಲಕ್ಕೆ ಅಂಜಿ ಆತ್ಮಹತ್ಯೆಗೆ ಶರಣಾದ ನಂತರ ಹೋರಾಟ ತೀವ್ರಗೊಳಿಸಲಾಗಿದೆ. 1995-2015 ರ ವರೆಗಿನ ಕನ್ನಡ, ಉರ್ದು ಸೇರಿ ಇತರೆ ಮಾತೃಭಾಷೆ ಮಾಧ್ಯಮ ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸಬೇಕೆಂದು ಹಲವು ದಿನಗಳಿಂದ ಹೋರಾಟ ಮಾಡಲಾಗುತ್ತಿದೆ. 371(ಜೆ) ಅಡಿ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಬೇಕು. ಪ್ರಸಕ್ತ ಸಾಲಿನ ಆರ್.ಟಿ.ಇ ಹಣವನ್ನು ತಕ್ಷಣ ಬಿಡುಗಡೆ ಮಾಡಿ ಶಾಲೆಗಳಿಗೆ ನೀಡಬೇಕು. ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಶಾಲೆಗಳ ನವೀಕರಣಕ್ಕೆ ಶಿಕ್ಷಣ ಇಲಾಖೆ ವಿಧಿಸಿರುವ ನಿಯಮಗಳನ್ನು ರದ್ದುಪಡಿಸಬೇಕು. ಸಾಲಗಾರರ ಕಿರುಕುಳ ತಾಳದೆ ಆತ್ಮಹತ್ಯೆ ಮಾಡಿಕೊಂಡಿರುವ ಖಾಸಗಿ ಶಿಕ್ಷಣ ಸಂಸ್ಥೆಯ ಮಾಲೀಕ ಶಂಕರ್ ಬಿರಾದಾರ್ ಅವರ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕು ಹೀಗೆ 15 ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸುತ್ತಿದ್ದಾರೆ.
ಇದೇ ತಿಂಗಳು ಅನುದಾನಕ್ಕಾಗಿ ಕೆಕೆಆರ್ ಡಿಬಿ ಮುಂದೆ ಶಿಕ್ಷಕರು ಬಿಕ್ಷಾಟನೆ ಮಾಡಿ ಹೋರಾಟ ಮಾಡಿದರು. ಅಲ್ಲದೇ ಫೆಬ್ರವರಿ 15 ರಂದು ಒಂದು ದಿನ ಶಾಲೆಗಳನ್ನು ಬಂದ್ ಮಾಡಿ ಸಾಂಕೇತಿಕವಾಗಿ ಧರಣಿ ನಡೆಸಿದ್ದರು. ಅಷ್ಟರಲ್ಲೇ ಎರಡು ದಿನಗಳ ಹಿಂದೆ ಶಿಕ್ಷಣ ಸಂಸ್ಥೆಯ ಶಂಕರ್ ಬಿರಾದಾರ್ ಅನ್ನೋರು ಸಾಲಗಾರರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ಡಿಸಿ ಕಚೇರಿ ಎದುರೇ ಜಿಲ್ಲಾಧಿಕಾರಿ ಅವರು ನಮ್ಮ ಪ್ರತಿಭಟನೆಗೆ ಸ್ಪಂದಿಸಿಲ್ಲ ಅಂತಾ ಪ್ರಕಾಶ್ ಅನ್ನೋರು ಆತ್ಮಹತ್ಯೆ ಯತ್ನ ಮಾಡಿದ್ದರು. ಇಷ್ಟೆಲ್ಲಾ ಆದ್ರು ಸರ್ಕಾರ, ಈ ಭಾಗದ ಜನಪ್ರತಿನಿಧಿಗಳು ಯಾರು ಸ್ಪಂದಿಸುತ್ತಿಲ್ಲ ಅಂತಾ ಇವತ್ತು ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಜನಪ್ರತಿನಿಧಿಗಳ ಮನೆ ಎದುರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ನಮ್ಮ ಬೇಡಿಕೆಗಳನ್ನ ಈಡೇರಿಸದೇ ಹೋದರೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮತ್ತು ಸಿಎಂ ಯಡಿಯೂರಪ್ಪ ಅವರ ಮನೆ ಮುಂದೆ ಬೊಬ್ಬೆ ಹೊಡೆದು ಹೊರಾಟ ಮಾಡೋದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಒಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಯವರು ತಮ್ಮ ಬೇಡಿಕೆಗಳಿಗಾಗಿ ನಿರಂತರವಾಗಿ ವಿಭಿನ್ನವಾಗಿ ಹೋರಾಟ ಮಾಡುತ್ತಲೇ ಇದ್ದಾರೆ. ಆದರೂ ಈವರೆಗೂ ಸರ್ಕಾರದಿಂದ ಯಾವುದೇ ಸ್ಪಂದನೆ ಮಾತ್ರ ಸಿಕ್ಕಿಲ್ಲ‌. ಶಾಸಕರು ಮನವಿ ಸ್ವೀಕರಿಸಿದ್ದಾರೆಂದು ಅವರ ಕಾಲಿಗೆ ಬಿದ್ದು, ಉರುಳಾಡಿ ನೀವಾದರೂ ನಮ್ಮ ಅಳಲನ್ನು ವಿಧಾನಸೌಧಕ್ಕೆ ಮುಟ್ಟಿಸಿ ಅಂತ ಗೋಗರೆದಿದ್ದಾರೆ.

Leave a Reply

Your email address will not be published.