ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕೆಂದರೆ ಗುರಿ ಮುಖ್ಯ :: ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ

ಚಿತ್ರದುರ್ಗ: ಮೀಸಲಾತಿಯನ್ನೇ ನಂಬಿಕೊಂಡು ಕೂರುವ ಬದಲು ಮೀಸಲಾತಿಯನ್ನು ಮೀರಿ ಬೆಳೆದಾಗ ಮಾತ್ರ ಅಸ್ಪøಶ್ಯತೆ ಮೂಢನಂಬಿಕೆಯನ್ನು ಹೋಗಲಾಡಿಸಲು ಸಾಧ್ಯ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ದಲಿತರಿಗೆ ಕರೆ ನೀಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಜಿಲ್ಲಾ ಸಮಿತಿಯಿಂದ ಪತ್ರಕರ್ತರ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸಾವಿತ್ರಿಬಾಯಿ ಪುಲೆಯವರ 189 ನೇ ಜನ್ಮದಿನಾಚರಣೆಯನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಇವರುಗಳ ತತ್ವಾದರ್ಶ, ಮೌಲ್ಯಗಳನ್ನು ಜೀವನದಲ್ಲಿ ಅನುಕರಣೆ ಮಾಡಿಕೊಳ್ಳುವುದೇ ಅವರುಗಳಿಗೆ ನೀಡುವ ನಿಜವಾದ ಗೌರವ. ಪ್ರತಿ ಮನೆ ಮನೆಗಳಲ್ಲಿಯೂ ಹೆಣ್ಣು ಮಕ್ಕಳು ಶಿಕ್ಷಣವಂತರಾಗಬೇಕಿದೆ. ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಚುನಾವಣೆಗಳಲ್ಲಿ ಮಹಿಳೆಯರು ಸ್ಪರ್ಧಿಸಿ ಗೆಲ್ಲುವ ಸದಸ್ಯತ್ವ ಸ್ಥಾನಗಳನ್ನು ಬಹುತೇಕ ಅವರ ಪತಿಯಂದಿರೆ ಚಲಾಯಿಸುತ್ತಿದ್ದಾರೆ. ಇದಕ್ಕೆಲ್ಲಾ ಮಹಿಳೆಯರಲ್ಲಿರುವ ಅಕ್ಷರ ಜ್ಞಾನದ ಕೊರತೆ ಕಾರಣ. ಹಾಗಾಗಿ ಮಹಿಳೆಯರು ಶಿಕ್ಷಣವನ್ನು ಕಲಿತು ಜಾಗೃತರಾಗಬೇಕಿದೆ ಎಂದು ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪ್ರೊ.ಬಿ.ಕೃಷ್ಣಪ್ಪ ಅನೇಕ ಚಳುವಳಿ ಹೋರಾಟಗಳನ್ನು ಮಾಡದೆ ಹೋಗಿದ್ದರೆ ದಲಿತರ ಸ್ಥಿತಿ ಇನ್ನು ತುಂಬಾ ನಿಕೃಷ್ಟವಾಗಿರುತ್ತಿತ್ತು. ಯಾವುದೇ ಆಸೆ ಆಮಿಷ, ಅಧಿಕಾರಕ್ಕೆ ಬಲಿಯಾಗದ ಪರಿಣಾಮ ಇಂದು ನಮ್ಮ ನಿಮ್ಮೆಲ್ಲರ ಮನದಲ್ಲಿ ಉಳಿದುಕೊಂಡಿದ್ದಾರೆ. ಇನ್ನು ನೂರು ವರ್ಷವಾದರೂ ಮೀಸಲಾತಿಯನ್ನು ಯಾರು ರದ್ದು ಮಾಡಲು ಆಗುವುದಿಲ್ಲ. ಆದರೆ ಸ್ಪರ್ಧಾತ್ಮಕ ಯುಗವಾಗಿರುವುದರಿಂದ ಮೀಸಲಾತಿ ತನ್ನಿಂದ ತಾನೇ ದೂರವಾಗುತ್ತದೆ. ಅದಕ್ಕಾಗಿ ಶಿಕ್ಷಣದ ಜೊತೆಗೆ ಮಕ್ಕಳು ಹೆಚ್ಚಿನ ಅಂಕಗಳನ್ನು ಗಳಿಸುವಂತೆ ಅಣಿಗೊಳಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರುಗಳ ಮೇಲಿದೆ ಎಂದರು.
ಸರ್ಕಾರಿ ಸೌಮ್ಯದ ಎಲ್ಲಾ ಕಂಪನಿಗಳು ಖಾಸಗೀಕರಣವಾಗುತ್ತಿವೆ. ಕಾಲ ಬದಲಾಗುತ್ತಿದೆ. ಶಿಕ್ಷಣಕ್ಕೆ ಸರ್ಕಾರಗಳು ಅನೇಕ ಸವಲತ್ತುಗಳನ್ನು ಒದಗಿಸುತ್ತಿವೆ. ಅಜ್ಞಾನ ಮೂಢನಂಬಿಕೆಯಿಂದ ಹೊರಬರಬೇಕಾದರೆ ಸಾವಿತ್ರಿಬಾಯಿಪುಲೆ ಹಾಗೂ ಅಂಬೇಡ್ಕರ್ ಇವರುಗಳು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ಎಲ್ಲರೂ ನಡೆಯಬೇಕಿದೆ. ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕೆಂದರೆ ಗುರಿ ಮುಖ್ಯ ಎಂದು ಸ್ವಾಮೀಜಿ ತಿಳಿಸಿದರು.
ದಲಿತ ಮುಖಂಡ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಮಾತನಾಡುತ್ತ ಜ್ಞಾನ, ಬುದ್ದಿವಂತಿಕೆ ಇವರೆಡು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಇವರುಗಳಲ್ಲಿತ್ತು. ನಮ್ಮ ದೇಶಕ್ಕೆ ಬ್ರಿಟೀಷರು ಬಂದಿದ್ದರಿಂದ ಶಿಕ್ಷಣವನ್ನು ಕಲಿಯುವಂತಾಯಿತು. ಇಲ್ಲದಿದ್ದರೆ ಮನುವಾದಿಗಳ ಕಿರುಕುಳದಿಂದ ಹೊರಬರಲು ಆಗುತ್ತಿರಲಿಲ್ಲ. ಹೆಣ್ಣು ಮಕ್ಕಳು ಮನೆಯಿಂದಲೇ ಹೊರಬರದಂತ ಕೆಟ್ಟ ಪರಿಸ್ಥಿತಿ ಇದ್ದ ಕಾಲದಲ್ಲಿ ಸಾವಿತ್ರಿಬಾಯಿ ಪುಲೆ ಸಾವಿರಾರು ಮಹಿಳೆಯರಿಗೆ ಅಕ್ಷರ ಕಲಿಸಿದರು. ಜೀವನದಲ್ಲಿ ಅವರ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡು ಎಲ್ಲರೂ ಶಿಕ್ಷಣವಂತರಾಗಬೇಕೆಂದು ಹೇಳಿದರು.

Leave a Reply

Your email address will not be published.