ಫೆ.26ರಂದು ಸಾರಿಗೆ ಸಂಘಟನೆಯಿಂದ ಭಾರತ್ ಬಂದ್‌ಗೆ ಕರೆ

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ವಿರುದ್ಧ ಕಾನ್ಫಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್(ಸಿಎಐಟಿ) ಈ ತಿಂಗಳ 26ರಂದು ಕರೆ ನೀಡಿರುವ ಭಾರತ ಬಂದ್ ಗೆ ಭಾರತದ ರಸ್ತೆ ಸಾರಿಗೆ ವಲಯದ ಅತ್ಯುನ್ನತ ಸಂಸ್ಥೆಗಳಲ್ಲೊಂದಾದ ಆಲ್ ಇಂಡಿಯಾ ಟ್ರಾನ್ಸ್ಪೋರ್ಟರ್ಸ್ ವೆಲ್ಫೇರ್ ಅಸೋಸಿಯೇಶನ್(ಎಐಟಿಡಬ್ಲ್ಯುಎ) ಬೆಂಬಲ ಫೋಷಿಸಿದೆ. ಅದೇ ದಿನ ಛಕ್ಕಾ ಜಾಮ್ ಅಥವಾ ರಸ್ತೆ ತಡೆ ನಡೆಸಲು ನಿರ್ಧರಿಸಿದೆ.

“ಇಂಧನ ದರ ಏರಿಕೆ ಮತ್ತು ಭಾರತ ಸರ್ಕಾರ ಜಾರಿಗೆ ತಂದಿರುವ ಹೊಸ ಇ-ವೇ ಬಿಲ್ ಕಾನೂನುಗಳ ವಿರುದ್ಧ ಎಐಟಿಡಬ್ಲ್ಯುಎ ಕರೆ ನೀಡಿರುವ ಒಂದು ದಿನದ ಸಾರಿಗೆ ಅಸಹಕಾರಕ್ಕೆ ಎಲ್ಲ ರಾಜ್ಯಮಟ್ಟದ ಸಾರಿಗೆ ಸಂಘಗಳು ಬೆಂಬಲ ದೃಢಪಡಿಸಿವೆ.

ಪ್ರತಿಭಟನೆಯ ಸ್ವರೂಪ ಎಲ್ಲ ಬುಕ್ಕಿಂಗ್ ತಿರಸ್ಕರಿಸುವುದು ಮತ್ತು ಇ-ವೇ ಬಿಲ್ ಕೇಂದ್ರಿತ ಸರಕುಗಳ ಸಾಗಾಣಿಕೆಯನ್ನು ಒಂದು ದಿನ ತಿರಸ್ಕರಿಸಲು ತೀರ್ಮಾನಿಸಲಾಗಿದೆ. ಎಲ್ಲ ಸಾರಿಗೆ ಕಂಪನಿಗಳು ಸಾಂಕೇತಿಕ ಪ್ರತಿಭಟನಾರ್ಥವಾಗಿ ಬೆಳಿಗ್ಗೆ 6ರಿಂದ ರಾತ್ರಿ 8ರವರೆಗೆ ಟ್ರಕ್ ಗಳನ್ನು ನಿಲ್ಲಿಸಲು ಕೋರಲಾಗಿದೆ. ಎಲ್ಲ ಸಾರಿಗೆ ಗೋದಾಮುಗಳು ಪ್ರತಿಭಟನೆ ಬ್ಯಾನರ್ ಗಳನ್ನು ಪ್ರದರ್ಶಿಸಲಿವೆ.

2021ರ ಫೆಬ್ರುವರಿ 26ರಂದು ಯಾವುದೇ ಸರಕು ಸಾಗಾಣಿಕೆ ಬುಕ್ಕಿಂಗ್ ಮಾಡದಂತೆ ಅಥವಾ ಲೋಡ್ ಮಾಡದಂತೆ ಎಲ್ಲ ಗ್ರಾಹಕರಿಗೆ ಸಾರಿಗೆ ಕಂಪನಿಗಳು ಮನವಿ ಮಾಡಿಕೊಳ್ಳಲಿವೆ” ಎಂದು ಎಐಟಿಡಬ್ಲ್ಯುಎ ರಾಷ್ಟ್ರೀಯ ಅಧ್ಯಕ್ಷ ಮಹೇಂದ್ರ ಆರ್ಯ ಹೇಳಿದ್ದಾರೆ.

Leave a Reply

Your email address will not be published.