ಚಿತ್ರದುರ್ಗ,ನಿತ್ಯವಾಣಿ,ಏ.5 : ಯುವಕರು ಉತ್ಸಾಹದ ಖನಿಜ. ಯುವ ಮನಸ್ಸಿನ ಉತ್ಸಾಹಕ್ಕೆ ಪ್ರೋತ್ಸಾಹ ನೀಡಿದರೆ ಕ್ರೀಡೋತ್ಸವ ಜರುಗುತ್ತದೆ. ಉತ್ಸಾಹಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಅದ್ಭುತ ಪ್ರತಿಭಾವಂತರಾಗಿ ಹೊರಹೊಮ್ಮುತ್ತಾರೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರು ಚಿತ್ರದುರ್ಗದ ಹಳೆ ಪ್ರಾರ್ಥಮಿಕ ಶಾಲಾ ಮೈದಾನದಲ್ಲಿ ನಡೆದ ಭೋವಿ ಪ್ರೇಮಿಯ ಪ್ರೀಮಿಯರ್ ಲೀಗಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿದರು.
ರಾಜ್ಯ ಮಟ್ಟದ ಭೋವಿ ಪ್ರೀಮಿಯರ್ ಲೀಗ್ 2021ರ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ನಕಾರಾತ್ಮಕ ಭಾವನೆಗಳಿಂದ ಹೊರಬಂದು ಸಕಾರಾತ್ಮಕ ಕಾರ್ಯದ ಮುಖ ಮಾಡಿದರೆ ವಿಜಯಮಾಲೆ ನಮ್ಮ ವಶವಾಗುತ್ತದೆ. ಸತತ ಅಭ್ಯಾಸದಿಂದ ಪರಿಪಕ್ವತೆ ಪಡಿಯುವಂತೆ. ಸತತ ಸಮಾಜಮುಖಿ ಕಾರ್ಯಗಳಿಂದ ಸಮಾಜ ಸುಧಾರಣೆ ಸಾಧ್ಯ. ಯುವಕರು ವಾಮಮಾರ್ಗಿಗಳಾಗದೆ ಸನ್ಮಾರ್ಗಿಗಳಾಗಿ ದುಶ್ಛಟಗಳಿಂದ ದೂರವಿರಿ. ಸಮಾಜ ಋಣ ತೀರಿಸಲು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕು. ಯುವಕರು ನಿರಾಶಾವಾದ, ನಿರುತ್ಸಾಹ, ನಿರಾಸಕ್ತಿ, ನಿಂತ ನೀರಾಗದೆ, ಸಂತೋಷ, ಆಶಾವಾದ, ಉತ್ಸಾಹ, ಛಲ, ಹರಿಯುವ ನೀರಿನಂತೆ, ಜನೋಪಯೋಗಿಯಾಗಬೇಕು ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಕೆ.ಮಂಜುನಾಥ ಮಾತನಾಡಿ ಕರ್ನಾಟಕ ಮೂಲೆ ಮೂಲೆಗಳಲ್ಲಿ ಸಂಘಟನೆ ಸಶಕ್ತಗೊಳಿಸಲು ಯುವಕರನ್ನು ಜಾಗೃತಗೊಳಿಸುವ ಉದ್ದೇಶ ಸಫಲವಾಗುತ್ತಿದೆ. ಯುವಕರ ಆಸಕ್ತಿದಾಯಕ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಿ ಆ ದಾರಿಯಲ್ಲೇ ಸಾಗಿ, ಅವರನ್ನು ಸಮಾಜದ ಶಕ್ತಿಯಾಗಿ ನಿರ್ಮಾಣ ಮಾಡುವುದು ಕ್ರೀಡೆಯ ಉದ್ದೇಶವಾಗಿದೆ. ಯುವಕರು ಸಮಾಜದ ದಿಕ್ಕು ಬದಲಾಯಿಸುವ ಶಕ್ತಿ ಹೊಂದಿದ್ದಾರೆ ಅದು ಸದುಪಯೋಗಬೇಕು. ಭವ್ಯ ಭವಿಷ್ಯ ನಿರ್ಮಾಣ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.

ಭಾಜಪ ಯುವ ಮುಖಂಡ ಡಾ.ಸಿದ್ದಾರ್ಥ ಮಾತನಾಡಿ ಕ್ರೀಡಾಕೂಟ ನಡೆಸಿದವರ ಶ್ರಮ ಶ್ಲಾಘನೀಯ. ಮುಂದಿನ ಕ್ರೀಡಾಕೂಟಕ್ಕೆ ನಮ್ಮ ಸಹಕಾರ ಇರುತ್ತದೆ ಎಂದು ತಿಳಿಸಿದರು.
ತುಮಕೂರು ವಿವಿ ಪ್ರೋ. ಪಾಲಕ್ಷ ಮೂರ್ತಿ ಬಿ.ಎಸ್ ಮಾತನಾಡಿ ಅಸಂಘಟಿತ ಸಮಾಜ ಸಂಘಟನೆ ಬಹು ಕ್ಲಿಷ್ಟ. ಯುವಕರ ಸಮಾಗಮಕ್ಕೆ ಕ್ರೀಡೆ ಸಹಕಾರವಾಗಿದೆ. ಕ್ರೀಡೆಯ ಮೂಲಕ ಸಮಾಜದ ಕನಸುಗಳಿಗೆ ಜೀವ ತುಂಬುವ ಕಾರ್ಯವನ್ನು ಮಾಡೋಣ ಎಂದು ತಿಳಿಸಿದರು
ಭೋವಿ ಯುವ ಮುಖಂಡ ವಿ.ಆರ್ ನಾಗರಾಜು, ಗಂಧರ್ವ ಮಂಜು ಮಾತನಾಡಿದರು. ಭೋವಿ ಸಂಘದ ನಿರ್ದೇಶಕ ತಿಮ್ಮಣ್ಣ, ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷರಾದ ನಂಜುಂಡಪ್ಪ, ಪ್ರಾವೀಣ ಮಹಾಂತೇಶ ಗೋಡೆಮನೆ, ಅಜಯ ಶಿರಾ, ಗ್ರಾ.ಪಂ ಸದಸ್ಯ ಉಮೇಶ, ರಘು, ವೈ.ಟಿ.ಕುಮಾರ್, ರವಿರಾಜ್, ,ಅರುಣ ಕೋಲಕರ್, ಉಪಸ್ಥಿತಿಯಿದ್ದರು. ಕಾಶಿ ಕಾರ್ಯಕ್ರಮ ನಿರೂಪಿಸಿದರು.
ನಾಲ್ಕನೇ ಪ್ರಶಸ್ತಿ ಎಂ.ಪಿ.ಸಿ.ಸಿ ಶಿರಾ ತಂಡ ಪಡೆಯಿತು. ಬ್ಲಾಸ್ಟರ್ಸ್ ತುಮಕೂರು ಮೂರನೇ ಪ್ರಶಸ್ತಿ ಪಡೆಯಿತು. ಶ್ರೀ ಫೈಟರ್ಸ್ ಚಿತ್ರದುರ್ಗ ರನ್ನರ್ ಅಪ್ ಪ್ರಶಸ್ತಿ ಪಡೆಯಿತು. ರಾಜ್ಯ ಮಟ್ಟದ ಭೋವಿ ಪ್ರೀಮಿಯರ್ ಲೀಗ್ 2021ರ ವಿಜೇತ ತಂಡವಾಗಿ ಜಯ ಕರ್ನಾಟಕ ಅರಸೀಕೆರೆ ಹೊರಹೊಮ್ಮಿತು. ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮ ಮನು ಪ್ರಶಸ್ತಿಗೆ ಭಾಜನರಾದರು. ಸರಣಿಯ ಉತ್ತಮ ಬೌಲರ್ ಪ್ರಶಸ್ತಿಗೆ ಬ್ಲಾಸ್ಟರ್ಸ್ ತುಮಕೂರು ತಂಡದ ಭರತ್ ಭಾಜನರಾದರು. ಇಮ್ಮಡಿ ಶ್ರೀ ಕ್ರಿಕೆಟರ್ಸ್ ತಂಡದ ಯಲ್ಲಪ್ಪ ಸರಣಿ ಉತ್ತಮ ಬ್ಯಾಟ್ಸಮನ್ ಪ್ರಶಸ್ತಿಗೆ ಭಾಜನರಾದರು. ಸರಣಿ ಶ್ರೇಷ್ಠ ಪ್ರಶಸ್ತಿಗೆ ಜಯಕರ್ನಾಟಕ ಅರಸೀಕೆರೆ ತಂಡದ ಮೀನಕ್ಷ ಪಡೆದರು. ವಿಜೇತ ತಂಡಕ್ಕೆ ಒಂದು ಲಕ್ಷ ರನ್ನರ್ ಅಪ್ ತಂಡಕ್ಕೆ ಐವತ್ತು ಸಾವಿರ ,ಮೂರನೇ ಪ್ರಶಸ್ತಿ ತಂಡಕ್ಕೆ ಇಪ್ಪತ್ತೈದು ಸಾವಿರ ನಗದು ಸಮೇತ ಪಾರಿತೋಷಕ ನೀಡಿದರು.
Attachments area