ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದಲ್ಲಿ ಸರಳ ಬಸವ ಜಯಂತಿ ಆಚರಣೆ

ನಿತ್ಯವಾಣಿ, ಚಿತ್ರದುರ್ಗ, (ಮೇ. 14) : ಮುಂದಿನ ಯುಗ ಜ್ಞಾನ ವಿಜ್ಞಾನಗಳ ಯುಗ ಅಲ್ಲಿ ಕೇವಲ ವೈಜ್ಞಾನಿಕ ವೈಚಾರಿಕತೆಗೆ ಅವಕಾಶವಿದೆ. ಎಲ್ಲಾ ಜ್ಞಾನಿಗಳ, ವಿಜ್ಞಾನಿಗಳ ಹಾಗೂ ಪ್ರಜ್ಞಾವಂತರ ಗುರುವಾಗಿ ಬಸವಣ್ಣನವರು ಹೊರಹೊಮ್ಮುತ್ತಾರೆ. ಭವಿಷ್ಯದ ವಿಜ್ಞಾನ ಜಗತ್ತಿನ ವೈಜ್ಞಾನಿಕ ಧರ್ಮವಾಗಿ ಬಸವಧರ್ಮ ರಾರಾಜಿಸುತ್ತದೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು

ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದಲ್ಲಿ ಸರಳ ಬಸವ ಜಯಂತಿ ಆಚರಿಸಿ ಮಾತನಾಡಿದ ಅವರು
ಬಸವಣ್ಣನವರ ಪ್ರತಿಪಾದಿಸುವ ವಚನಗಳಲ್ಲಿ ಅನೇಕ ಅಡಗಿದೆ. ಔದ್ಯೋಗಿಕ ಧರ್ಮ, ದಾಸೋಹ ಧರ್ಮ, ಮನಃಶಾಸ್ತ್ರ ಧರ್ಮ, ಸಾಮಾಜಿಕ ಧರ್ಮ, ಧಾರ್ಮಿಕ ಧರ್ಮ, ಅಕ್ಷರ ಧರ್ಮ, ಸ್ತ್ರೀ ಧರ್ಮ, ಕೃಷಿ ಧರ್ಮ, ಜೀವಸಂಕುಲ ಧರ್ಮ, ವೈಜ್ಞಾನಿಕ ವೈಚಾರಿಕತೆಯ ಧರ್ಮ ಒಟ್ಟಾರೆ ಬಸವಧರ್ಮ ವಿಶ್ವಧರ್ಮವಾಗಿದೆ.

ಜಗತ್ತಿನ ಎಲ್ಲಾ ಧರ್ಮಗಳ ಸಾರ ಬಸವಣ್ಣನವರ ವಚನಗಳಲ್ಲಿ ಅರಳಿದೆ. ಭೂಮಂಡಲದ  ಮಾನವೀಯತೆಯ ಮಹಾಮೂರ್ತಿ ಬಸವಣ್ಣನವರು. ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ಲಿಂಗಧಾರಣೆ ಮಾಡುವುದರ ಮೂಲಕ ಸಮಸಮಾಜದ ನಿರ್ಮಾಪಕ. ಗುಡಿ ಸಂಸ್ಕೃತಿ ಹಾಗೂ ಪುರೋಹಿತಶಾಹಿ ವಿರುದ್ಧ, ಜಾತಿಯ ನಿರಾಕರಣೆ, ವೃತ್ತಿ ಸಮಾನತೆ, ಅಂತರಜಾತಿಯ ವಿವಾಹ, ಮತಾಂತರ, ಸ್ತ್ರೀ ಸಮಾನತೆ, ಜನಪರ ಸರಳ ಮತಾಚರಣೆ, ಮಾತೃಭಾಷೆಗೆ ಪ್ರಾಮುಖ್ಯತೆ ಮುಂತಾದವುಗಳು ಬಸವ ಚಿಂತನೆಯಲ್ಲಿ ಕಾಣಬಹುದು. ಅಷ್ಟೇ ಅಲ್ಲದೆ ಬಸವಣ್ಣನವರಲ್ಲಿ ವಚನಕಾರರು, ಪರಿಸರವಾದಿ, ನ್ಯಾಯವಾದಿ, ವ್ಯಕ್ತಿತ್ವ ವಿಕಾಸಕರನ್ನು ಕಾಣಬಹುದು. ಶೋಷಿತರ ಅಸ್ಮಿತೆ ಬಸವಣ್ಣ. ಬಸವಣ್ಣನವರ ಧರ್ಮ, ಶ್ರಮಿಕರ ಧರ್ಮವಾಗಿದೆ. ಬಸವಣ್ಣನವರು ಸಮಾಜೋ-ಧಾರ್ಮಿಕ ಸುಧಾರಕರು ಎಂದು ಹೇಳಿದರು.

Leave a Reply

Your email address will not be published.