ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠದಲ್ಲಿರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆ

ನಿತ್ಯವಾಣಿ, ಚಿತ್ರದುರ್ಗ (ಜೂ. 4) : “ಸರ್ವೇ ಜನಾಃ ಸುಖಿನೋ ಭವಂತು” ಧ್ಯೇಯ ವಾಕ್ಯವನ್ನು ಅಕ್ಷರಶಃ ಪರಿಪಾಲಿಸಿದ, ಪ್ರಜಾಪ್ರತಿನಿಧಿ ಸಭಾ ಸ್ಥಾಪಿಸಿ ಪ್ರಜಾಪ್ರಭುತ್ವಕ್ಕೆ ಮುನ್ನುಡಿ ಬರೆದ
ಪ್ರಜಾಪರ ಪ್ರಭುಗಳಾದವರು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್. ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು

ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠದಲ್ಲಿ ಹಮ್ಮಿಕೊಂಡಿದ್ದ
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಜಾಪ್ರತಿನಿಧಿ ಸಭಾ ಮೂಲಕ ಸಂಸ್ಥಾನ ಪ್ರಜೆಗಳನ್ನು ಮುಖ್ಯವಾಗಿರಿಸಿಕೊಂಡು ತಮ್ಮ ವ್ಯಾಪಾರ, ಚಟುವಟಿಕೆಗಳಲ್ಲಿನ ಕಷ್ಟ ನಷ್ಟ ವಿವರಗಳನ್ನು ಸರಕಾರಕ್ಕೆ ನೇರವಾಗಿ ಹೇಳಿಕೊಳ್ಳುವ ಅವಕಾಶ ಮತ್ತು ಆಡಳಿತ ಯಂತ್ರ ನಡೆಯುವ ರೀತಿಯನ್ನು ಅರ್ಥೈಸಿಕೊಳ್ಳಲು ತಿಳಿದುಕೊಳ್ಳುವ ಅವಕಾಶವನ್ನು ಕಲ್ಪಿಸುವ ಉದ್ದೇಶದಿಂದ, ಶ್ರಮಿಕ ವರ್ಗ, ರೈತ ವರ್ಗ, ವಿದ್ಯಾವಂತರನ್ನು ಹಾಗೂ ಮುಂತಾದ ಎಲ್ಲ ಬಗೆಯ ವ್ಯಾಪಾರ ವಹಿವಾಟಿನ ಜನಗಳ ಮುಖವಾಣಿಯಾಗುವುದಕ್ಕೆ ಸಭೆಗಳನ್ನು ನಡೆಸುತ್ತಾ ಮತ್ತು ಅವರ ಅಭಿಪ್ರಾಯಗಳನ್ನು ಶೇಖರಿಸುತ್ತಾ ಆಡಳಿತವನ್ನು ಧರ್ಮದ ಹಾದಿಯಲ್ಲಿ ನಡೆಯುವಂತೆ ಮಾಡಲು ಮೊದಲು ಹೆಜ್ಜೆಯಿಟ್ಟಿತು ಎನ್ನುವುದು ಇತಿಹಾಸದಲ್ಲಿ ಬರೆದಿಡಬಹುದಾದ ಸುವರ್ಣಾಕ್ಷರಗಳು. ಭಾರತ ಉಪಖಂಡದಲ್ಲೇ ಮೊದಲ ಬಾರಿಗೆ ಪ್ರಜಾಪ್ರತಿನಿಧಿ ಸಭಾವನ್ನು ಆಯೋಜನೆ ಮಾಡಿ ನಡೆಯಿಸಿದ ಕೀರ್ತಿ ಮೈಸೂರು ಸಂಸ್ಥಾನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರದ್ದು.

ಸಾಮಾಜಿಕ ಕಾನೂನುಗಳ ಹರಿಕಾರ, ಶೈಕ್ಷಣಿಕ ಪ್ರೋತ್ಸಾಹ, ಔದ್ಯೋಗಿಕ ಸೃಜಕ, ನೀರಾವರಿ ತಜ್ಞ, ಮೀಸಲಾತಿ ಜನಕ, ಆರೋಗ್ಯ ಸುಧಾರಕ, ಸ್ತ್ರೀ ಕುಲೋದ್ಧಾರಕ, ದಲಿತೋದ್ದಾರಕ ನಾಲ್ವಡಿ ಕೃಷ್ಣರಾಜ ಒಡೆಯರ್ ಆಗಿದ್ದರು.

ಕನ್ನಡ ಭಾಷೆ ನನ್ನ ಪ್ರೀತಿಯ ತಾಯಿ ನುಡಿ’ ಎನ್ನುತ್ತಿದ್ದ ಕೃಷ್ಣರಾಜರಿಗೆ ಕನ್ನಡ ಭಾಷೆಯ ಮೇಲೆ ತುಂಬ ಮಮತೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಹಾಪೋಷಕರಾಗಿದ್ದರು. ಕನ್ನಡ ಸಾಹಿತ್ಯದ ಅಭಿವೃದ್ಧಿಗೆ,ಸಾಹಿತಿಗಳಿಗೆ ಪ್ರೋತ್ಸಾಹಕೊಟ್ಟು ಅವರಿಂದ ಕಾವ್ಯಗಳು, ನಾಟಕಗಳು, ಶಾಸ್ತ್ರಗ್ರಂಥಗಳನ್ನು ಬರೆಸಿದರು. ‘ಮಹಾರಾಜರು ಕನ್ನಡ ನಾಡಿನ ದೊರೆಯಾಗಿ, ಕನ್ನಡ ಸಾಹಿತ್ಯ ಪ್ರೇಮಿಯಾಗಿ, ಕನ್ನಡ ಕಲಾವಿದರಿಗೆ, ವಿದ್ವಾಂಸರಿಗೆ, ಸಂಗೀತ ಪ್ರೇಮಿಗಳಿಗೆ ಆಶ್ರಯವಾಗಿದ್ದರು.

ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿ, ಅಣೆಕಟ್ಟುಗಳನ್ನು ನಿರ್ಮಿಸಿದರು. ಗ್ರಾಮ ನಿರ್ಮಲೀಕರಣ, ವೈದ್ಯಕೀಯ ಸಹಾಯ, ವಿದ್ಯಾ ಪ್ರಚಾರ, ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಮಾಡಳಿತ ಸಂಸ್ಥೆಗಳಾದವು. ಹೊಸ ರೈಲು ದಾರಿಗಳ ನಿರ್ಮಾಣಗಳಾದವು.

ನಾಲ್ವಡಿ ಕೃಷ್ಣರಾಜ ಒಡೆಯರ್  ಕಾಲದಲ್ಲಿ ಪ್ರಾಜ್ಞರು ನಿಷ್ಠರಿಗೆ ಕಾರ್ಯದಕ್ಷತೆ ತೋರುವ ಅವಕಾಶ, ಸ್ವಾತಂತ್ರ್ಯ ಅಧಿಕಾರಗಳನ್ನು ನೀಡುವ ಮನೋಬಲ ಇದ್ದ ಕಾರಣ ಶೇಷಾದ್ರಿ ಅಯ್ಯರ್, ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅಂಥಹ ಸಮರ್ಥ ಆಡಳಿತಗಾರರನ್ನು ನಮ್ಮ ನಾಡು ನಿರಂತರವಾಗಿ  ಸ್ಮರಿಸುತ್ತಿದೆ.

ದಿವಾನರಾದ ಸರ್.ಎಂ.ವಿಶ್ವೇಶ್ವರಯ್ಯನವರ ವಿರೋಧದ ನಡುವೆ ನಿಮ್ನಾತಿ ನಿಮ್ನ ವರ್ಗ, ದೀನ ದಲಿತರಿಗೆ ಶೋಷಿತರಿಗೆ ಶಿಕ್ಷಣದ ಮೂಲಕ ಮುಖ್ಯವಾಹಿನಿ ಬರಲು ಮೀಸಲಾತಿ ನೀಡಿ ಅವರ ಅಭಿವೃದ್ಧಿಗೆ ಪಣತೊಟ್ಟರು. ಕನ್ನಡ ನಾಡಿನ ಮೀಸಲಾತಿ ಜನಕ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಹೇಳಿದರು.

Leave a Reply

Your email address will not be published.