ಚಿತ್ರದುರ್ಗ ನಿತ್ಯವಾಣಿ ಮಾ 28 : ತಾಂತ್ರಿಕ ಯುಗದಲ್ಲೂ ಮುದ್ರಣ ಮಾಧ್ಯಮವನ್ನು ಎಂದಿಗೂ ಅಳಿಸಲಾಗುವುದಿಲ್ಲ. ಅದಕ್ಕಾಗಿ ದಿನಕ್ಕೆ ಎರಡು ಪತ್ರಿಕೆಗಳನ್ನು ಓದುವ ಹವ್ಯಾಸಿ ಬೆಳೆಸಿಕೊಳ್ಳಿ ಎಂದು ರಾಜ್ಯ ಬಿಜೆಪಿ.ವಕ್ತಾರ ಮಾಜಿ ಶಾಸಕ ನಟ ಜಗ್ಗೇಶ್ ಮೂರು ಜಿಲ್ಲೆಗಳ ಮಾಧ್ಯಮ ಸಂಚಾಲಕರು ಹಾಗೂ ಸಹ ಸಂಚಾಲಕರುಗಳಿಗೆ ಕಿವಿಮಾತು ಹೇಳಿದರು.
ಭಾರತೀಯ ಜನತಾಪಾರ್ಟಿ ದಾವಣಗೆರೆ ವಿಭಾಗದ ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳ ತಾಲ್ಲೂಕು ಬಿಜೆಪಿ.ಮಾಧ್ಯಮ ಸಂಚಾಲಕರು ಹಾಗೂ ಸಹ ಸಂಚಾಲಕರುಗಳಿಗೆ ಅಮೋಘ ಹೋಟೆಲ್‍ನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮಾಧ್ಯಮ ಮಂಥನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರಲ್ಲಿಯೂ ಒಂದೊಂದು ರೀತಿಯ ಕನಸು ಇದ್ದೇ ಇರುತ್ತದೆ. ಆ ಕನಸುಗಳು ಸಾಕಾರಗೊಳ್ಳಬೇಕಾದರೆ ಮಾಧ್ಯಮ ಅತಿ ಮುಖ್ಯ. ಶರವೇಗದಲ್ಲಿ ಸುಳ್ಳು ಸುದ್ದಿಗಳನ್ನು ಬಿತ್ತರಿಸುತ್ತಿರುವ ಸಾಮಾಜಿಕ ಜಾಲತಾಣದಿಂದ ಮುದ್ರಣ ಮಾಧ್ಯಮ ಸಂಕಷ್ಟಕ್ಕೊಳಗಾಗಿದೆ. ಆದರೆ ತನ್ನ ಶಕ್ತಿಯನ್ನು ಕಳೆದುಕೊಂಡಿಲ್ಲ. ಸಾಮಾಜಿಕ ಜಾಲತಾಣವನ್ನು ಸರಿಯಾಗಿ ಬಳಿಸಿಕೊಂಡಿರುವುದೆಂದರೆ ನಮ್ಮ ದೇಶದ ಪ್ರಧಾನಿ ನರೇಂದ್ರಮೋದಿ ಒಬ್ಬರೆ. ಇದು ಸ್ಪರ್ಧಾತ್ಮಕ ಯುಗ, ಆದರೆ ಯಾವುದೇ ಕಾರಣಕ್ಕೂ ಉದ್ವೇಗ, ಸೇಡಿನ ಮನೋಭಾವನೆ, ಉತ್ಪೇಕ್ಷೆ, ಅಣಕ ಮಾಡಬಾರದು. ಬಿಜೆಪಿ.ಯೆಂದರೆ ಶ್ರದ್ದೆಯಿಂದ ಕಟ್ಟಿದ ಪಕ್ಷ. ಇಲ್ಲಿ ಕಲಿಯುವ ಆಸಕ್ತಿ ಮತ್ತು ಶ್ರದ್ದೆಯಿದ್ದರೆ ಜ್ಞಾನ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.
ಚಿತ್ರರಂಗದಲ್ಲಿ ನನ್ನ ಮೇಲೆ ದೊಡ್ಡ ಜವಾಬ್ದಾರಿಯಿದೆ. ಗ್ರಾಮೀಣ ಭಾಗದಿಂದ ಹೆಜ್ಜೆ ಹಾಕಿ ರಾಕ್ಷಸರ ಮಧ್ಯೆ ಹೋರಾಟ ಮಾಡಿಕೊಂಡು ಬಂದವನು. ಅಪಮಾನವೇ ನನಗೆ ಆಹ್ವಾನ. ಜೀವನದಲ್ಲಿ ಪ್ರಾಮಾಣಿಕವಾದ ಕನಸು ಕಾಣುವವನು ದೊಡ್ಡ ಸಾಧಕನಾಗುತ್ತಾನೆ. ಆಗ ಮೌಲ್ಯ, ಬೆಲೆ, ಸಹಕಾರ ಸಿಗುತ್ತದೆ. ಕನಸನ್ನು ಸಾಕಾರ ಮಾಡಿಕೊಳ್ಳಲು ಮಾಧ್ಯಮ ಮಂಥನ ಕಾರ್ಯಾಗಾರ ಸಹಕಾರಿಯಾಗಲಿದೆ. ಮಾಧ್ಯಮ ನನ್ನನ್ನು ಬುಜತಟ್ಟಿ ಪ್ರೋತ್ಸಾಹಿಸಿದೆ. ಅಭಿಮಾನಿಗಳನ್ನು ಖುಷಿ ಪಡಿಸಲು ಸಿನಿಮಾದಲ್ಲಿ ನಟಿಸುತ್ತೇವೆ. ಅದು ಎರಡು ಗಂಟೆ ನಿಮ್ಮನ್ನು ರಂಜಿಸುತ್ತದೆ. ಆದರೆ ನಿಜವಾಗಿಯೂ ನಾವು ಸ್ವಾರ್ಥಿಗಳು. ಹೊಟ್ಟೆಪಾಡು ನಮಗೂ ಇದೆ. ಸಿನಿಮಾ ನೋಡುವುದನ್ನು ಬಿಡಿ. ತಲೆ ಮೇಲೆ ಕೂರಿಸಿಕೊಂಡು ನಮ್ಮನ್ನು ದೇವರಂತೆ ಮೆರೆಸಿ ಕಟೌಟ್‍ಗೆ ಹಾಲು ಹಾಕಿ ಮೂರ್ಖರಾಗಬೇಡಿ. ಮನೆ, ಸಮಾಜ, ತಂದೆ ತಾಯಿಗಳ ಬಗ್ಗೆ ಒಮ್ಮೆ ಯೋಚಿಸಿ ಯುವ ಆತ್ಮಗಳನ್ನು ಬದಲಾವಣೆ ಮಾಡಿ ದೇಶದ ಅಭಿವೃದ್ದಿ ಕಡೆ ತೊಡಗಿಸುವ ಕೆಲಸ ಮಾಧ್ಯಮ ಮಂಥನ ಕಾರ್ಯಾಗಾರದ ಮೂಲಕ ಆಗಬೇಕಿದೆ ಸಂಚಾಲಕ, ಸಹ ಸಂಚಾಲಕರುಗಳಲ್ಲಿ ಮನವಿ ಮಾಡಿದರು.
ನಡೆ-ನುಡಿ ಸರಿಯಿದ್ದರೆ ದೇವರು ಕೈಹಿಡಿದು ನಡೆಸುತ್ತಾನೆ. ಆರಂಭದಲ್ಲಿ ಏನು ಅರಿವಿಲ್ಲದೆ ಕಾಂಗ್ರೆಸ್ ಸೇರಿ ಇದ್ದ ಎಲ್ಲವನ್ನು ಕಳೆದುಕೊಂಡು ಕೊನೆಗೆ ಮಂತ್ರಾಲಯದ ರಾಘವೇಂದ್ರಸ್ವಾಮಿ ಸನ್ನಿಧಿಗೆ ಹೋಗಿ ಮೊರೆಯಿಟ್ಟು ಕಣ್ಣೀರು ಸುರಿಸಿದೆ. ಅಲ್ಲಿಂದ ಲಕ್ಷಾಂತರ ಅಭಿಮಾನಿಗಳು ನನ್ನನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಸ್ಪರ್ಧಿಸುವಂತೆ ಬೆಂಬಲಿಸಿ ಗೆಲ್ಲಿಸಿಕೊಂಡರು. ಕಾರ್ಯಕರ್ತ ಎನ್ನುವ ತಾಕತ್ತು ಯಾವ ಎಂ.ಎಲ್.ಗೂ ಇಲ್ಲ. ಅಂತಹ ಪಕ್ಷ ಬಿಜೆಪಿ. ದೇಶ ಕಟ್ಟುವ ಪಕ್ಷ ಬಿಜೆಪಿ.ಚೆನ್ನಾಗಿರಬೇಕು. ನನ್ನ ಬದುಕಿನ ಓಂಕಾರ ಬಾ.ಜ.ಪ.ದಿಂದ ಶುರವಾಗಬೇಕಿತ್ತು. ರಾಜ್ಯ ರಾಜಕಾರಣದಲ್ಲಿ ಏನೇನೋ ಆಗುತ್ತಿದೆ. ಏಟಿಗೆ ಎದಿರೇಟು ಇದ್ದೇ ಇದೆ. ಉಪ್ಪು ತಿಂದವನು ನೀರು ಕುಡಿಯುತ್ತಾನೆ ಎಂದು ನೇರವಾಗಿ ಹೇಳದಿದ್ದರೂ ಸಿಡಿ ಹಗರಣ ಕುರಿತು ಸೂಕ್ಷ್ಮವಾಗಿ ನುಡಿದರು. ಕೊರೋನಾ ವ್ಯವಸ್ಥೆ ವಿಶ್ವಕ್ಕೆ ಹೊಡೆತ ಕೊಟ್ಟಿದೆ. ಆಗ ನಾನು ಕೂಡ ರಾಜಕೀಯದಿಂದ ಹಿಂದಕ್ಕೆ ಸರಿದಿದ್ದುಂಟು. ಆಗ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೆ ಮತ್ತೆ ನನ್ನನ್ನು ಆಹ್ವಾನಿಸಿ ಪಕ್ಷದಲ್ಲಿ ರಾಜ್ಯ ವಕ್ತಾರ ಹುದ್ದೆಯನ್ನು ನೀಡಿದ್ದಾರೆಂದು ಸ್ಮರಿಸಿಕೊಂಡರು.
ವಿಧಾನಪರಿಷತ್ ಸದಸ್ಯೆ ರಾಜ್ಯ ವಕ್ತಾರರಾದ ಶ್ರೀಮತಿ ತೇಜಸ್ವಿನಿಗೌಡ ಮಾತನಾಡಿ ಮಾಧ್ಯಮ ಮತ್ತು ರಾಜಕೀಯದ ನಡುವೆ ಸಂಘರ್ಷ-ಸಾಮರಸ್ಯದ ಸಂಬಂಧವಿದೆ. ತಾಜಾ ಸುದ್ದಿಗಳನ್ನು ಕೊಡುವುದು ಅನಿವಾರ್ಯವಾಗಿದೆ. ರಾಜಕಾರಣಿಗಳು ಒಳ್ಳೇದು ಮಾಡಿದಾಗ ಬೆನ್ನು ತಟ್ಟುವುದು, ಕೆಟ್ಟದ್ದು ಮಾಡಿದಾಗ ತಲೆಗೆ ತಟ್ಟಲೇಬೇಕೆ ವಿನಃ ಯಾವ ದುರುದ್ದೇಶವೂ ಇರುವುದಿಲ್ಲ. ಸಮಾಜದ ಹಿತಚಿಂತನೆ ಮಾಧ್ಯಮದ ಮೇಲಿದೆ. ಕಟ್ಟಕಡೆಯ ಮನುಷಷ್ಯನ ಪ್ರಸ್ತುತತೆ, ಸಾಧನೆ, ಲೋಪದೋಷಗಳನ್ನು ಸಮಾಜಕ್ಕೆ ಮುಟ್ಟಿಸುವುದು ಮಾಧ್ಯಮದ ಪಾತ್ರ ಎಂದು ಹೇಳಿದರು.
ಹಾಲಾಹಲ ರಾಜಕಾರಣದಲ್ಲಿ ಸತ್ಯ ತೋರಿಸಬೇಕು. ಮಿತ್ಯ ಹಲ್ಲಗಳೆಯಬೇಕು. ಬಿಜೆಪಿ. ನಿಮ್ಮನ್ನು ಸೈನಿಕರ ರೀತಿಯಲ್ಲಿ ಸಿದ್ದಗೊಳಿಸುತ್ತದೆ. ಪಕ್ಷದ ವಾಗ್ದಾನ ಜಾರಿಗೊಳಿಸಬೇಕಾದರೆ ಮಾಧ್ಯಮ ಸಂಚಾಲಕರು, ಸಹ ಸಂಚಾಲಕರು ಮಾಹಿತಿ ವಿನಿಮಯ ಮಾಡಿಕೊಳ್ಳುವಲ್ಲಿ ಮಾಧ್ಯಮದವರೊಡನೆ ಆರೋಗ್ಯಪೂರ್ಣ ಸಂಬಂಧವಿಟ್ಟುಕೊಂಡು ಸಮಾಜಮುಖಿಯಾಗಿ ಕೆಲಸ ಮಾಡಬೇಕೆಂದು ತಿಳಿಸಿದರು.
ಆಳುವ ಸರ್ಕಾರಗಳು ಮದಗಜದಂತೆ. ಕಾಲ ಕಾಲಕ್ಕೆ ಅಂಕುಶ ಹಾಕಿ ಪಳಗಿಸುವ ಕೆಲಸ ಮಾಧ್ಯಮ ಮಾಡಬೇಕಿದೆ. ಪ್ರತಿಭೆ ಬದ್ದತೆಯಿದ್ದರೆ ಎಂತಹ ಕಠಿಣ ಹಾದಿಯಿದ್ದರೂ ಯಶಸ್ಸಿನ ತುತ್ತ ತುದಿ ಏರಬಹುದು. ಮಾಧ್ಯಮ ಮಂಥನ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಹೇಳುವ ವಿಚಾರಗಳನ್ನು ಗಮನಕೊಟ್ಟು ಕೇಳಿ ಸದುಪಯೋಗಪಡಿಸಿಕೊಳ್ಳಿ ಎಂದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ದೇಶದ ಹಾಗೂ ಪಕ್ಷದ ಕಾರ್ಯಕ್ರಮ ಮತ್ತು ಯೋಜನೆಗಳನ್ನು ಯಾವ ರೀತಿ ಜನರಿಗೆ ತಲುಪಿಸಬೇಕೆನ್ನುವ ಸಂಬಂಧ ಮಾಧ್ಯಮ ಮಂಥನ ಕಾರ್ಯಾಗಾರದಲ್ಲಿ ಮಾಧ್ಯಮ ಸಂಚಾಲಕರು ಹಾಗೂ ಸಹ ಸಂಚಾಲಕರುಗಳಿಗೆ ತಿಳಿಸುವುದೇ ಮಾಧ್ಯಮ ಮಂಥನ ಕಾರ್ಯಾಗಾರದ ಉದ್ದೇಶ ಎಂದು ಹೇಳಿದರು.
ಮಾಧ್ಯಮ ಮಂಥನ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ ಸಮಾಜಮುಖಿಯಾಗಿ ಕೆಲಸ ಮಾಡಲು ಮಾಧ್ಯಮ ಪ್ರಮುಖ ಅಂಗ. ಅದಕ್ಕಾಗಿ ಮಾಧ್ಯಮ ಮಂಥನ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ಮೂರು ಜಿಲ್ಲೆಗಳ ಸಂಚಾಲಕರು ಮತ್ತು ಸಹ ಸಂಚಾಲಕರುಗಳು ಇಲ್ಲಿ ಹೇಳುವ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು.
ವಿಭಾಗೀಯ ಪ್ರಭಾರಿ ಜಿ.ಎಂ.ಸುರೇಶ್, ರಾಜ್ಯ ಮಾಧ್ಯಮ ಸಂಚಾಲಕರುಗಳಾದ ಅವಿನಾಶ್, ಕೆಂಡೋಜಿ, ಚಿತ್ರದುರ್ಗ ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್ ವೇದಿಕೆಯಲ್ಲಿದ್ದರು.
ಡಿ.ಓ.ಮುರಾರ್ಜಿ ಪ್ರಾರ್ಥಿಸಿದರು. ಕೊಪ್ಪಳ ನಾಗರಾಜ್ ಸ್ವಾಗತಿಸಿದರು. ವಕ್ತಾರ ನಾಗರಾಜ್‍ಬೇದ್ರೆ ನಿರೂಪಿಸಿದರು.
ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್‍ಸಿದ್ದಾಪುರ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ರೈತ ಮೋರ್ಚ ಜಿಲ್ಲಾಧ್ಯಕ್ಷ ವೆಂಕಟೇಶ್‍ಯಾದವ್ ಸೇರಿದಂತೆ ವಿವಿಧ ಮೋರ್ಚಗಳ ಅಧ್ಯಕ್ಷರು ಮಾಧ್ಯಮ ಮಂಥನ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.