ನಿತ್ಯವಾಣಿ,ಚಿತ್ರದುರ್ಗ ,(ಜು.19) : ಜೆಡಿಎಸ್.ಯುವ ಮೋರ್ಚ ರಾಜ್ಯ ಉಪಾಧ್ಯಕ್ಷ ವಿ.ಎಲ್.ಪ್ರಶಾಂತ್ ತಮ್ಮ ಕುಟುಂಬ ಹಾಗೂ ಬೆಂಬಲಿಗರೊಂದಿಗೆ ಸೋಮವಾರ ಚಳ್ಳಕೆರೆ ಟೋಲ್‍ಗೇಟ್‍ನಲ್ಲಿರುವ ಎಸ್.ಎಸ್.ಕೆ.ಎಸ್.ಸಮುದಾಯ ಭವನದಲ್ಲಿ ಬಿಜೆಪಿ.ಗೆ ಸೇರ್ಪಡೆಯಾದರು.
ವಿ.ಎಲ್.ಪ್ರಶಾಂತ್ ಮತ್ತು ಕುಟುಂಬದವರನ್ನು ಪಕ್ಷಕ್ಕೆ ಬರಮಾಡಿಕೊಂಡು ನಂತರ ಮಾತನಾಡಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ವಿ.ಎಲ್.ಪ್ರಶಾಂತ್‍ರವರ ತಂದೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ವೆಂಕಟೇಶ್ ಕಾಂಗ್ರೆಸ್ ವಿರುದ್ದ ಹೋರಾಡಿ ಸರಳ ಸಜ್ಜನ ರಾಜಕಾರಣಿ ಎನಿಸಿಕೊಂಡಿದ್ದರು. ಅವರ ಪುತ್ರ ವಿ.ಎಲ್.ಪ್ರಶಾಂತ್ ಕೂಡ ತಂದೆಯ ಮಾರ್ಗದರ್ಶನದಲ್ಲಿ ನಡೆದು ಬಂದು ಜೆಡಿಎಸ್.ನ ಕುಟುಂಬ ರಾಜಕಾರಣಕ್ಕೆ ಬೇಸತ್ತು ಪ್ರಧಾನಿ ಮೋದಿರವರಲ್ಲಿರುವ ದೇಶಾಭಿಮಾನ, ನಾಯಕತ್ವ, ರಾಜ್ಯದ ಮುಖ್ಯಮಂತ್ರಿಯವರ ಆಡಳಿತ ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.ಶ್ಯಾಂ ಪ್ರಸಾದ್ ಮುಖರ್ಜಿ, ಪಂಡಿತ್ ದೀನ್ ದಯಾಳ್ ಇವರು ಕಟ್ಟಿದ ಪಕ್ಷ ಬಿಜೆಪಿ.ಎಂದಿಗೂ ಅಧಿಕಾರಕ್ಕಾಗಿ ಹೋರಾಡಲಿಲ್ಲ. ದೇಶ ಮೊದಲು ನಂತರ ಅಧಿಕಾರ ಎನ್ನುವ ಸಿದ್ದಾಂತ ಮುಖ್ಯ. ಪಕ್ಷದಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡುವವರನ್ನು ವರಿಷ್ಟರು ಹುಡುಕಿಕೊಂಡು ಬಂದು ಅಧಿಕಾರ ನೀಡುವ ಸಂಪ್ರದಾಯವಿರುವುದು ಬಿಜೆಪಿ.ಯಲ್ಲಿ ಮಾತ್ರ. ದೇಶ ಕಟ್ಟುವಲ್ಲಿ ಪಕ್ಷ ಎಂದಿಗೂ ಹಿಂದೆ ಬಿದ್ದಿಲ್ಲ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಬಿಜೆಪಿ.ರಾಜ್ಯ ಕಾರ್ಯದರ್ಶಿ ತುಳಸಿ ಮುನಿರಾಜ್‍ಗೌಡ ಮಾತನಾಡಿ ಬಿಜೆಪಿ.ಯ ಸಿದ್ದಾಂತ ಒಪ್ಪಿ ವಿ.ಎಲ್.ಪ್ರಶಾಂತ್ ತಮ್ಮ ಕುಟುಂಬ ಹಾಗೂ ಐವತ್ತು ಯುವಕರ ತಂಡದೊಂದಿಗೆ ಪಕ್ಷ ಸೇರಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಕಾರ್ಯಕರ್ತರು, ಚುನಾಯಿತ ಪ್ರತಿನಿಧಿಗಳಿಗೆ ಕೊರತೆಯಿಲ್ಲ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕಡೆ ಪಕ್ಷದ ಧ್ವಜ ಹಾರಾಡುತ್ತಿದೆ. ಇನ್ನು ಮುಗಿಲೆತ್ತರಕ್ಕೆ ಹಾರಬೇಕು. ಪಕ್ಷವನ್ನು ವಿಭಜಿಸುವ ಕೆಲಸ ಬಿಜೆಪಿ.ಯಲ್ಲಿಲ್ಲ ಎಂದರು.
ಹಣ ಬಲ, ಜಾತಿ ಬಲ, ಒಬ್ಬ ವ್ಯಕ್ತಿಯ ಕೈಯಲ್ಲಿ ಬಿಜೆಪಿ.ಇಲ್ಲ. ಪ್ರತಿ ತಿಂಗಳಿಗೊಮ್ಮೆ ರಾಜ್ಯ ಪದಾಧಿಕಾರಿಗಳ ಸಭೆ. ಮೂರು ತಿಂಗಳಿಗೊಮ್ಮೆ ವಿಶೇಷ ಕಾರ್ಯಕಾರಿಣಿ ಸಭ ನಡೆಸಲಾಗುವುದು. ರಾಜ್ಯದ 58 ಸಾವಿರ ಬೂತ್ ಅಧ್ಯಕ್ಷರುಗಳ ಮನೆಗಳ ಮೇಲೆ ಪಕ್ಷದ ಭಾವುಟ, ನಾಮಫಲಕವಿರಬೇಕು. ಪ್ರಬಂಧಕರು ತಮಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ. ಅದರಂತೆ ಪಕ್ಷಕ್ಕೆ ಸೇರ್ಪಡೆಯಾಗಿರುವ ವಿ.ಎಲ್.ಪ್ರಶಾಂತ್ ಮತ್ತು ತಂಡದವರು ಪಕ್ಷದ ಕೆಲಸವನ್ನು ನಿಷ್ಟೆಯಿಂದ ಮಾಡಬೇಕೆಂದು ಕಿವಿಮಾತು ಹೇಳಿದರು.
ಬಿಜೆಪಿ.ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್ ಮಾತನಾಡುತ್ತ ಪಕ್ಷದಲ್ಲಿ ಪ್ರಮುಖರು ಕಾರ್ಯಕರ್ತರನ್ನು ಕೈಹಿಡಿದು ಬೆಳೆಸುತ್ತಾರೆ. ಅಧಿಕಾರಕ್ಕಿಂತ ದೇಶ ಮೊದಲು ಎನ್ನುವ ಸಂಘಟನೆ ಯಾವುದಾದರೂ ಇದ್ದರೆ ಅದು ಬಿಜೆಪಿ.ಯಲ್ಲಿ ಮಾತ್ರ, ಸೃಜನಶೀಲತೆ, ವ್ಯಕ್ತಿತ್ವ ಬೆಳೆಸಿಕೊಳ್ಳಲು ಇಲ್ಲಿ ಸಾಕಷ್ಟು ಅವಕಾಶವಿದೆ. ಜೆಡಿಎಸ್.ಯುವ ಘಟಕದ ರಾಜ್ಯ ಉಪಾಧ್ಯಕ್ಷರಾಗಿದ್ದ ವಿ.ಎಲ್.ಪ್ರಶಾಂತ್ ಅಲ್ಲಿನ ಉಸಿರುಗಟ್ಟುವ ವಾತಾವರಣಕ್ಕೆ ಬೇಸತ್ತು ಬಿಜೆಪಿ.ಗೆ ಸೇರ್ಪಡೆಯಾಗಿದ್ದಾರೆ. ಹತ್ತು ವರ್ಷಗಳ ಹಿಂದೆಯೇ ಬಿಜೆಪಿ.ಸೇರಬೇಕಿತ್ತು. ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂದರು.
ಬಿಜೆಪಿ.ಸೇರ್ಪಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ ಬಿಜೆಪಿ.ಸಿದ್ದಾಂತ, ದೇಶಾಭಿಮಾನ, ದೇಶ ರಕ್ಷಣೆ, ಸುರಕ್ಷಿತವಾಗಿರಬೇಕೆಂಬ ಮಹದಾಸೆಯಿಂದ ವಿ.ಎಲ್.ಪ್ರಶಾಂತ್ ಮತ್ತು ತಂಡದವರು ಬಿಜೆಪಿ.ಗೆ ಸೇರಿರುವುದು ಅತ್ಯಮೂಲವಾದ ನಿರ್ಧಾರ. ನೂರಾರು ಕಾರ್ಯಕರ್ತರ ತ್ಯಾಗ ಬಲಿದಾನಗಳಿಂದ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ.ಅಧಿಕಾರಕ್ಕೆ ಬಂದಿದೆ. ನೂರಾರು ಸಾಧು, ಸಂತರು ಪಕ್ಕಕ್ಕೆ ಒಳ್ಳೆ ಕಾಲ ಬರಲಿ ಎಂದು ತಪಸ್ಸು ಮಾಡಿದ್ದರ ಫಲವಾಗಿ ನಾವುಗಳು ಇಂದು ಸುವರ್ಣಯುಗದಲ್ಲಿದ್ದೇವೆ. ಎಪ್ಪತ್ತು ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷ ದೇಶವನ್ನು ವಿನಾಶ ಮಾಡಿದೆ. ದೇಶವನ್ನು ಸುಭದ್ರಗೊಳಿಸಬೇಕಿರುವುದರಿಂದ ಪ್ರತಿಯೊಬ್ಬ ಕಾರ್ಯಕರ್ತನು ಪ್ರಾಮಾಣಿಕವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಮನವಿ ಮಾಡಿದರು.
ಬಿಜೆಪಿ.ಗೆ ಸೇರ್ಪಡೆಯಾಗಿ ಮಾತನಾಡಿದ ವಿ.ಎಲ್.ಪ್ರಶಾಂತ್ ನಮ್ಮ ತಂದೆ ವೆಂಕಟೇಶ್ ಜೆಡಿಯು.ನಲ್ಲಿ ಸಕ್ರಿಯ ಕಾರ್ಯಕರ್ತರಾಗಿ, ಜೆಡಿಎಸ್.ನಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಪಕ್ಷಕ್ಕೆ ನಿಷ್ಟರಾಗಿದ್ದರು. ಅವರ ನಿಧನದ ನಂತರ ನಾನೂ ಕೂಡ ಜೆಡಿಎಸ್.ನಲ್ಲಿ ಯಾವುದೇ ಅಧಿಕಾರ ಬಯಸದೆ ಪಕ್ಷಕ್ಕಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿಕೊಂಡು ಬಂದೆ. ಕ್ರಮೇಣ ಅದೊಂದು ಮನೆತನದ ಪಕ್ಷ ಎಂದು ಗೊತ್ತಾದಾಗ ಹಿಂದುತ್ವದ ಮೇಲೆ ಅಪಾರ ಅಭಿಮಾನವುಳ್ಳವನಾಗಿರುವ ನಾನು ಪ್ರಧಾನಿ ಮೋದಿರವರ ಪಾರದರ್ಶಕ ಆಡಳಿತ, ನಡ್ಡರವರ ಮುಂದಾಳತ್ವ, ರಾಜ್ಯಾಧ್ಯಕ್ಷರ ಸಾರಥ್ಯ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನಿಸ್ವಾರ್ಥ ಸೇವೆ, ಬಿಜೆಪಿ.ಸಿದ್ದಾಂತವನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾಗಿರುವುದಾಗಿ ಅಂತರಾಳದ ಇಂಗಿತ ವ್ಯಕ್ತಪಡಿಸಿದರು.
ಕೆಟ್ಟದಾರಿಗೆ ಹೋಗುವವರನ್ನು ಸರಿದಾರಿಗೆ ತರುವ ಕೆಲಸವನ್ನು ಹಿಂದಿನಿಂದಲೂ ಬಿಜೆಪಿ, ಆರ್‍ಎಸ್‍ಎಸ್, ಭಜರಂಗದಳ ಮಾಡಿಕೊಂಡು ಬರುತ್ತಿದೆ. ಆದ್ದರಿಂದ ನನ್ನ ಕುಟುಂಬ ಹಾಗೂ ಬೆಂಬಲಿಗರೊಂದಿಗೆ ಸಂತೋಷವಾಗಿ ಬಿಜೆಪಿ.ಸೇರಿದ್ದೇನೆಂದು ಹೇಳಿದರು.
ದಾವಣಗೆರೆ ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ ಜೇಷ್ಟ ಪಡಿವಾಳ್‍ಜಿ, ಬಿಜೆಪಿ.ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷ ಸಿದ್ದೇಶ್ ಯಾದವ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಭದ್ರಿನಾಥ್, ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ಭೀಮಸಮುದ್ರದ ಜಿ.ಎಸ್.ಅನಿತ್, ರಘುಚಂದನ್, ರೈತ ಮೋರ್ಚ ಜಿಲ್ಲಾಧ್ಯಕ್ಷ ವೆಂಕಟೇಶ್‍ಯಾದವ್, ನಗರಸಭೆ ಸದಸ್ಯ ಶಶಿ, ಗ್ರಾಮಾಂತರ ಮಂಡಲ ಅಧ್ಯಕ್ಷ ನಂದಿನಾಗರಾಜ್ ವೇದಿಕೆಯಲ್ಲಿದ್ದರು.
ವಕ್ತಾರ ನಾಗರಾಜ್‍ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯ ಗುರುಮೂರ್ತಿ, ನಗರಸಭೆ ಸದಸ್ಯ ಶ್ರೀನಿವಾಸ್, ನಾಮನಿರ್ದೇಶಿತ ಸದಸ್ಯ ತಿಮ್ಮಣ್ಣ, ಎಲ್ಲಾ ಮಂಡಲ ಮೋರ್ಚ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಈ ಸಂದರ್ಭದಲ್ಲಿ ಹಾಜರಿದ್ದರು