ಚಿತ್ರದುರ್ಗದಲ್ಲಿ ಜು.24 ರಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ರವರಿಂದ ರಾಜ್ಯ ಪದಾಧಿಕಾರಿಗಳ ಸಭೆ ಉದ್ಘಾಟನೆ : ರವಿಕುಮಾರ್

ಚಿತ್ರದುರ್ಗದಲ್ಲಿ ಜು.24 ರಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ರವರಿಂದ ರಾಜ್ಯ ಪದಾಧಿಕಾರಿಗಳ ಸಭೆ ಉದ್ಘಾಟನೆ : ರವಿಕುಮಾರ್

ನಿತ್ಯವಾಣಿ,ಚಿತ್ರದುರ್ಗ,(ಜು.21) : ಪಕ್ಷ ಸಂಘಟನೆ ಹಾಗೂ ಮುಂಬರುವ ಎಲ್ಲಾ ಚುನಾವಣೆಗಳಲ್ಲಿಯೂ ಹೆಚ್ಚಿನ ಸ್ಥಾನ ಗಳಿಸಲು ರೂಪುರೇಷೆಗಳನ್ನು ಸಿದ್ದಪಡಿಸುವುದಕ್ಕಾಗಿ ಜು.24 ರಂದು ಬೆಳಿಗ್ಗೆ 11 ಗಂಟೆಗೆ ಬಿಜೆಪಿ.ರಾಜ್ಯ ಪದಾಧಿಕಾರಿಗಳ ಸಭೆ ಚಳ್ಳಕೆರೆ ಟೋಲ್‍ಗೇಟ್ ಸಮೀಪವಿರುವ ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್‍ನಲ್ಲಿ ನಡೆಯಲಿದೆ ಎಂದು ಬಿಜೆಪಿ.ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ರವಿಕುಮಾರ್ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಿಜೆಪಿ.ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ರಾಜ್ಯ ಪದಾಧಿಕಾರಿಗಳ ಸಭೆ ಉದ್ಘಾಟಿಸಲಿದ್ದು, ಹತ್ತು ವಿಭಾಗದ ಪ್ರಭಾರಿ, ಸಹ ಪ್ರಭಾರಿ, ಸಂಘಟನಾ ಕಾರ್ಯದರ್ಶಿ, ಸಹ ಸಂಘಟನಾ ಕಾರ್ಯದರ್ಶಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ತಿಂಗಳು ವಿಶೇಷವಾಗಿ ರಾಜ್ಯ ಪದಾಧಿಕಾರಿಗಳ ಸಭೆ ನಡೆಯುತ್ತದೆ. ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ತಯಾರಿ ಹಾಗೂ ಯಾವ ಜಿಲ್ಲೆಗೆ ಯಾವ ಮಂತ್ರಿ, ಪದಾಧಿಕಾರಿಗಳಿಗೆ ಜವಾಬ್ದಾರಿ ನೀಡಬೇಕೆನ್ನುವುದರ ಕುರಿತು ಚರ್ಚೆಯಾಗಲಿದೆ ಎಂದು ಹೇಳಿದರು.
ಹಾನಗಲ್, ಸಿಂಧಗಿ ಉಪ ಚುನಾವಣೆ, ಡಿಸೆಂಬರ್‍ನಲ್ಲಿ 25 ವಿಧಾನಪರಿಷತ್ ಸ್ಥಾನಗಳಿಗೆ ನಡೆಯುವ ಚುನಾವಣೆ ಸಂಬಂಧ ಸಭೆಯಲ್ಲಿ ಚರ್ಚೆಗೆ ಬರಲಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ.ಹೆಚ್ಚಿನ ಸ್ಥಾನಗಳಲ್ಲಿ ಗೆದ್ದಿದೆ. ಆ.1 ರಿಂದ 15 ರವರೆಗೆ ಬೂತ್ ಅಧ್ಯಕ್ಷರ ಸಮಾವೇಶ, ಪ್ರತಿ ಬೂತ್ ಎ ಬೂತ್ ಆಗಬೇಕೆಂಬುದು ನಮ್ಮ ಉದ್ದೇಶ. ಎ ಬೂತ್ ಎಂದರೆ ಬಿಜೆಪಿ.ಹೆಚ್ಚಿನ ಮತ ಪಡೆಯುವುದು ಎಂದರ್ಥ. ಬಿ.ಬೂತ್ ಅಂದರೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ.ಗೆ ಮತ ಬೀಳಬಹುದು. ರಾಜ್ಯಾದ್ಯಂತ ಬೂತ್ ಅಭಿಯಾನ ನಡೆಸಲಾಗುವುದು. ಆ.16 ರಿಂದ 30 ರವರೆಗೆ ಬೂತ್ ಅಧ್ಯಕ್ಷರ ಮನೆಗಳಿಗೆ ನಾಮಫಲಕ ಅಳವಡಿಸಲಾಗುವುದು. ಇದೇ ತಿಂಗಳ 25 ರಂದು ಪ್ರಧಾನಿ ನರೇಂದ್ರಮೋದಿರವರ ಮನ್‍ಬಾತ್ ಭಾಷಣವನ್ನು ಆಲಿಸಲು ಬೂತ್ ಅಧ್ಯಕ್ಷರುಗಳ ಮನೆ, ಕಲ್ಯಾಣ ಮಂಟಪ ಇಲ್ಲವೇ ಸಮುದಾಯ ಭವನಗಳಲ್ಲಿ ವ್ಯವಸ್ಥೆ ಮಾಡಬೇಕು. ಇದರ ಹೊಣೆಯನ್ನು ಬೂತ್ ಅಧ್ಯಕ್ಷರುಗಳಿಗೆ ವಹಿಸಲಾಗಿದೆ ಎಂದರು. ಕನಿಷ್ಟ ಮೂವತ್ತು ಸಾವಿರ ಬೂತ್‍ನಲ್ಲಾದರೂ ಈ ವ್ಯವಸ್ಥೆಯಾಗಬೇಕೆಂದರು.
ಸೆ.1 ರಿಂದ 15 ರವರೆಗೆ ಗ್ರಾಮ ಪಂಚಾಯಿತಿ ಸದಸ್ಯರ ಜಿಲ್ಲಾ ಸಮಾವೇಶ, ಅಕ್ಟೋಬರ್‍ನಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ರಾಜ್ಯ ಮಟ್ಟದ ಸಮಾವೇಶ ನಡೆಸಲಾಗುವುದು. ಕಳೆದ ಬಾರಿಯ ಎಂ.ಎಲ್.ಸಿ.ಚುನಾವಣೆಯಲ್ಲಿ ಏಳು ಸೀಟುಗಳನ್ನು ಪಡೆದಿದ್ದೆವು. ಈ ಸಾರಿ ಹೆಚ್ಚು ಸ್ಥಾನಗಳನ್ನು ಗಳಿಸಬೇಕೆಂಬುದು ನಮ್ಮ ಮುಂದಿರುವ ಗುರಿ. ಪಕ್ಷ ಕಟ್ಟಲು ಹಾಗೂ ಮುಂದಿನ ಚುನಾವಣೆಯಲ್ಲಿ ಬಿಜೆಪಿ.ಹೆಚ್ಚಿನ ಸ್ಥಾನಗಳನ್ನು ಪಡೆಯುವ ಕುರಿತು ರಾಜ್ಯ ಪದಾಧಿಕಾರಿಗಳ ಸಭೆ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್‍ಸಿದ್ದಾಪುರ, ವಕ್ತಾರ ನಾಗರಾಜ್‍ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ಯುವ ಮೋರ್ಚ ಜಿಲ್ಲಾಧ್ಯಕ್ಷ ಹನುಮಂತೆಗೌಡ ಪತ್ರಿಕಾಗೋಷ್ಟಿಯಲ್ಲಿದ್ದರು.

 

Leave a Reply

Your email address will not be published.