ಪ್ರಧಾನಿ ಮೋದಿ ಸಂಬಂಧಿಗೆ ಬಿಜೆಪಿ ಟಿಕೆಟ್ ನಿರಾಕರಣೆ

ಅಹಮದಾಬಾದ್ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರ ಸಂಬಂಧಿ ಸೋನಾಲ್ ಮೋದಿ ಅವರಿಗೆ ಅಭ್ಯರ್ಥಿಗಳಿಗೆ ಹೊಸ ನಿಯಮಗಳನ್ನು ಉಲ್ಲೇಖಿಸಿ ಪಕ್ಷದ ಟಿಕೆಟ್ ನಿರಾಕರಿಸಲಾಗಿದೆ.

ಮುಂಬರುವ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್(ಎಎಂಸಿ) ಚುನಾವಣೆಗೆ ಗುರುವಾರ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, ಪಟ್ಟಿಯಲ್ಲಿ ಸೋನಾಲ್ ಮೋದಿಯವರ ಹೆಸರು ಇಲ್ಲ.

ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸೋನಾಲ್ ಮೋದಿ ಅವರು ಎಎಂಸಿಯ ಬೋಡಕ್ ದೇವ್ ವಾರ್ಡ್‌ನಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೇಳಿದ್ದೆ. ಆದರೆ ಟಿಕೆಟ್ ನಿರಾಕರಿಸಲಾಗಿದೆ ಎಂದು ಹೇಳಿದ್ದಾರೆ.

ಸೋನಾಲ್ ಮೋದಿ ಅವರು ಪ್ರಧಾನಿ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿಯವರ ಪುತ್ರಿ, ಅವರು ಅಹಮದಾಬಾದ್‌ನಲ್ಲಿ ನ್ಯಾಯ ಬೆಲೆ ಅಂಗಡಿಯನ್ನು ಹೊಂದಿದ್ದು, ಗುಜರಾತ್ ನ್ಯಾಯ ಬೆಲೆ ಅಂಗಡಿಗಳ ಸಂಘದ ಅಧ್ಯಕ್ಷರೂ ಆಗಿದ್ದಾರೆ.

ಇನ್ನೂ ಸೋನಾಲ್ ಮೋದಿಗೆ ಟಿಕೆಟ್ ನಿರಾಕರಿಸಿದ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ಸಿ ಆರ್ ಪಾಟಿಲ್ ಅವರು, ನಿಯಮಗಳು ಎಲ್ಲರಿಗೂ ಒಂದೇ ಆಗಿರುತ್ತವೆ ಎಂದು ಹೇಳಿದ್ದಾರೆ.

ಮುಂಬರುವ ಅಹಮದಾಬಾದ್ ಚುನಾವಣೆಯ ಟಿಕೆಟ್ ಹಂಚಿಕೆಗಾಗಿ ಪಕ್ಷದ ಮುಖಂಡರ ಸಂಬಂಧಿಕರನ್ನು ಪರಿಗಣಿಸಲಾಗುವುದಿಲ್ಲ ಎಂದು ಗುಜರಾತ್ ಬಿಜೆಪಿ ಇತ್ತೀಚೆಗಷ್ಟೇ ಘೋಷಿಸಿತ್ತು.

Leave a Reply

Your email address will not be published.