ನವದೆಹಲಿ, : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರ ಕುಟುಂಬ ಸದಸ್ಯರು ಮಾರಿಷಸ್ ಗೆ ತೆರಳಿ ಅಕ್ರಮ ಹಣ ಇರಿಸಿದ್ದಾರೆ ಎಂಬ ಶಾಸಕ ಬಸವನಗೌಡ ಯತ್ನಾಳ್ ಆರೋಪದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭೇಟಿಗೆ ದೆಹಲಿಗೆ ಆಗಮಿಸಿರುವ ಸಿದ್ದರಾಮಯ್ಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜಿಪಿಯ ಪ್ರಮುಖ ಶಾಸಕರೇ ಮುಖ್ಯಮಂತ್ರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಬೇಕೆಂದು ಆಗ್ರಹಿಸಿದರು.
ನಾನು ತಿನ್ನುವುದಿಲ್ಲ ಬೇರೆಯವರಿಗೂ ತಿನ್ನಲೂ ಬಿಡುವುದಿಲ್ಲ ಎಂಬ ಹೇಳಿಕೆಗೆ ಪ್ರಧಾನಿಯವರು ಬದ್ದರಾಗಬೇಕು ಎಂದು ತಿಳಿಸಿದರು.
ಯಡಿಯೂರಪ್ಪ ಅವರ ಮನೆಯವರೇ ಹಾವು, ಚೇಳುಗಳ ತರಹ ಕಾಡುತ್ತಿದ್ದಾರೆಯೇ ವಿನಾ ಬೇರೆ ಯಾರೂ ಅಲ್ಲ ಎಂದೂ ಯತ್ನಾಳ ಅವರೇ ಹೇಳಿದ್ದಾರೆ. ಅವರದೇ ಪಕ್ಷದ ಹಿರಿಯ ಶಾಸಕರೊಬ್ಬರು ನೀಡಿರುವ ಇಂಥ ಆಘಾತಕಾರಿ ಹೇಳಿಕೆ ಬಗ್ಗೆ ಬಿಜೆಪಿ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ ಎಂದರು.