ನಿತ್ಯವಾಣಿ,ಚಿತ್ರದುರ್ಗ,(ಜೂ.19) : ಸಚ್ಚಿದಾನಂದ ಸರಸ್ವತಿ ಸ್ವಾಮಿಗಳ ಪೀಠಾರೋಹಣದ ಅಂಗವಾಗಿ ಶ್ರೀ ಕನ್ಯಕಾಪರಮೇಶ್ವರಿ ಸೌಹಾರ್ಧ ಸಹಕಾರಿ ನಿಯಮಿತ ಚಿತ್ರದುರ್ಗ ವತಿಯಿಂದ ತುರುವನೂರು ರಸ್ತೆಯಲ್ಲಿರುವ ವಾಸವಿ ರಕ್ತನಿಧಿ ಕೇಂದ್ರದಲ್ಲಿ ಶನಿವಾರ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ವಾಸವಿ ರಕ್ತನಿಧಿ ಕೇಂದ್ರದ ಡಾ.ಶ್ರೀನಿವಾಸಶೆಟ್ಟಿರವರು ಮಾತನಾಡಿ ಮಹಾಮಾರಿ ಕೊರೋನಾ ಎಲ್ಲೆಡೆ ವ್ಯಾಪಿಸಿರುವುದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಲಾಕ್‍ಡೌನ್ ಘೋಷಿಸಿದ್ದು, ರಕ್ತದಾನಕ್ಕೆ ಯಾರು ಮುಂದೆ ಬರದಂತಾಗಿರುವುದರಿಂದ ಅವಶ್ಯಕತೆಗೆ ತಕ್ಕಷ್ಟು ರಕ್ತ ಸಿಗದೆ ಕೊರತೆಯನ್ನು ನೀಗಿಸಲು ಆಗುತ್ತಿಲ್ಲ. ಇಂತಹ ಕಠಿಣ ಸಂದರ್ಭದಲ್ಲಿ ಶ್ರೀ ಕನ್ಯಕಾಪರಮೇಶ್ವರಿ ಸೌಹಾರ್ಧ ಸಹಕಾರಿ ನಿಯಮಿತದವರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿರುವುದು ಅತ್ಯಂತ ಮಹತ್ವವಾದುದು ಎಂದು ಗುಣಗಾನ ಮಾಡಿದರು.ರಕ್ತದಾನ ಮಾಡುವುದರಿಂದ ಮತ್ತೊಬ್ಬರ ಅಮೂಲ್ಯವಾದ ಜೀವ ಉಳಿಸಿದ ಸಮಾಧಾನ ಸಿಗುತ್ತದೆ. ಇದರಿಂದ ದೇಹದ ತೂಕ ಕಡಿಮೆಯಾಗುವುದಲ್ಲದೆ ನೆನಪಿನ ಶಕ್ತಿ ವೃದ್ದಿಸುತ್ತದೆ ಎಂದು ರಕ್ತದಾನದ ಮಹತ್ವ ತಿಳಿಸಿದರು.
ಶ್ರೀ ಕನ್ಯಕಾಪರಮೇಶ್ವರಿ ಸೌಹಾರ್ಧ ಸಹಕಾರಿ ನಿಯಮಿತ ಅಧ್ಯಕ್ಷ ಪಿ.ಎಸ್.ನಾಗರಾಜಶೆಟ್ಟಿ, ಉಪಾಧ್ಯಕ್ಷರಾದ ಎಂ.ಹೆಚ್.ಪ್ರಾಣೇಶ್, ನಿರ್ದೇಶಕರುಗಳಾದ ಎಲ್.ಬ್ರಹ್ಮಾನಂದಗುಪ್ತ, ಎಸ್.ಕೃಷ್ಣಕುಮಾರ್, ಶ್ರೀಮತಿ ಎಲ್.ಆರ್.ಅನಿತರಾಜ್, ಎಸ್.ಶ್ವೇತ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಶೈಲಜ, ವಾಸವಿ ರಕ್ತನಿಧಿ ಕೇಂದ್ರದ ಶ್ರೀಮತಿ ಉಷ ಶ್ರೀನಿವಾಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹದಿನೈದು ಮಂದಿ ರಕ್ತದಾನ ಮಾಡಿದರು. ರಕ್ತದಾನ ಮಾಡಿದವರಿಗೆ ಸರ್ಟಿಫಿಕೇಟ್‍ಗಳನ್ನು ನೀಡಲಾಯಿತು.