ಹಬ್ಬಕ್ಕಾಗಿ ಊರಿಗೆ ತೆರಳಲು ಪ್ರಯಾಣಿಕರ ಹರಸಾಹಸ

ಬೆಂಗಳೂರು, ಏ.10- ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ಪ್ರಯಾಣಿಕರ ಪರದಾಟ ಮುಂದುವರಿದಿತ್ತು. ಹಬ್ಬಕ್ಕೆ ಊರಿಗೆ ತೆರಳಬೇಕಾದವರು ಖಾಸಗಿ ಬಸ್, ಟೆಂಪೋ, ವಿವಿಧ ವಾಹನಗಳನ್ನು ಹಿಡಿದು ಊರಿಗೆ ತೆರಳಲು ಹರಸಾಹಸ ಪಡುತ್ತಿದ್ದರು. ಕಳೆದ ನಾಲ್ಕು ದಿನಗಳಿಂದ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದು, ಸರ್ಕಾರಿ ಬಸ್‍ಗಳು ಸಂಪೂರ್ಣ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಖಾಸಗಿ ಬಸ್, ಟೆಂಪೋ, ವ್ಯಾನ್, ಮತ್ತಿತರ ವಾಹನಗಳನ್ನು ಅವಲಂಬಿಸಬೇಕಾಯಿತು.

ಮುಷ್ಕರ ಪ್ರಾರಂಭದ ದಿನದಿಂದಲೇ ಸರ್ಕಾರ ಖಾಸಗಿ ಬಸ್‍ಗಳಿಗೆ ಅನುಮತಿ ನೀಡಿದ್ದರೂ ಇಂದು ಊರಿಗೆ ತೆರಳುವವರ ಪ್ರಮಾಣ ಹೆಚ್ಚಾಗಿದ್ದು, ಖಾಸಗಿ ಬಸ್‍ಗಳು ತುಂಬಿ ತುಳುಕುತ್ತಿದ್ದವು. ಸರ್ಕಾರಿ ಬಸ್‍ಗಳು ಹಲವೆಡೆ ಪೋಲೀಸರ ರಕ್ಷಣೆಯಲ್ಲಿ ಸಂಚರಿಸಿದವಾದರೂ ನಿರೀಕ್ಷಿತ ಪ್ರಮಾಣದಲ್ಲಿ ಮುಷ್ಕರ ನಿರತರು ಕರ್ತವ್ಯಕ್ಕೆ ಹಾಜರಾಗಲಿಲ್ಲ. ಹಾಗಾಗಿ ಸಾರ್ವಜನಿಕರು ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾಯಿತು.ನಗರದಲ್ಲಿ ಬಸ್ ಹೆಚ್ಚಾಗಿ ಸಿಗದ ಪರಿಣಾಮ ನೆಲಮಂಗಲದ ಟೋಲ್ ಬಳಿ ಸಾಗಿ ಅಲ್ಲಿಂದ ಬಸ್‍ಗಳನ್ನು ಹಿಡಿದು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದುದು ಕಂಡುಬಂತು.

ಮೊದಲೇ ಬುಕ್ ಮಾಡಿದವರು ಖಾಸಗಿ ಬಸ್‍ಗಳನ್ನು ಹಿಡಿದು ಊರಿಗೆ ತೆರಳುತ್ತಿದ್ದರೆ, ಹಬ್ಬಕ್ಕಾಗಿ ಊರಿಗೆ ತೆರಳುವವರು ತಮ್ಮ ಮಕ್ಕಳು, ಮರಿಗಳೊಂದಿಗೆ ಲಗೇಜ್‍ಗಳನ್ನು ಹಿಡಿದು ಯಾವ ವಾಹನಗಳು ಸಿಗುತ್ತವೆ, ಅವುಗಳನ್ನು ಹತ್ತಿ ಊರುಗಳತ್ತ ತೆರಳುತ್ತಿದ್ದುದು ಕಂಡುಬಂತು. ಸಹಜವಾಗಿ ಹಬ್ಬದ ಸಂದರ್ಭದಲ್ಲಿ ಸಾರಿಗೆ ಬಸ್‍ಗಳ ಪ್ರಮಾಣವನ್ನು ಹೆಚ್ಚು ಮಾಡಲಾಗುತ್ತಿತ್ತು. ಆದರೆ, ಸಾರಿಗೆ ಬಸ್‍ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದರಿಂದ ಜನ ಖಾಸಗಿ ಬಸ್‍ಗಳನ್ನೇ ಅವಲಂಬಿಸಿದ್ದಾರೆ.

ಸಾವಿರಾರು ಖಾಸಗಿ ಬಸ್‍ಗಳು ಇದ್ದರೂ ಕೂಡ ಸಾಕಾಗುತ್ತಿಲ್ಲ. ಟೆಂಪೋ, ಲಾರಿ, ಕ್ರೂಜರ್, ಗೂಡ್ಸ್ ಗಾಡಿ, ಕಾರು ಹೀಗೆ ಯಾವ ವಾಹನಗಳು ಸಿಗುತ್ತವೆಯೋ ಅದರಲ್ಲಿಯೇ ತಮ್ಮ ಊರುಗಳನ್ನು ತಲುಪಲು ಪ್ರಯತ್ನಿಸುತ್ತಿದ್ದರು. ಯಾವಾಗ ಈ ಮುಷ್ಕರ ಮುಗಿಯುತ್ತದೆಯೋ ಎಂದು ಗೊಣಗುತ್ತಲೇ ಸಾಗುತ್ತಿದ್ದರು. ಹೆಚ್ಚುವರಿ ರೈಲುಗಳನ್ನು ಬಿಟ್ಟಿದ್ದರೂ ಕೂಡ ಅಲ್ಲೂ ಜನ ಜಂಗುಳಿ ಹೆಚ್ಚಾಗಿ ಕಂಡುಬಂತು.ಹಲವರು ಗುಂಪುಗೂಡಿ ವಾಹನಗಳನ್ನು ಬಾಡಿಗೆ ಹಿಡಿದು ಊರುಗಳಿಗೆ ತೆರಳುತ್ತಿದ್ದರು.

ಇನ್ನು ಖಾಸಗಿ ಬಸ್, ಟೆಂಪೋ, ಮಿನಿ ಬಸ್, ಗೂಡ್ಸ್ ಗಾಡಿಗಳವರು ನಿರೀಕ್ಷಿತ ದರಕ್ಕಿಂತ ಹೆಚ್ಚು ದರ ವಸೂಲಿ ಮಾಡುತ್ತಿದ್ದರು. ಕೆಲವೊಂದು ಮಾರ್ಗಗಳಲ್ಲಿ ಇಂತಿಷ್ಟೇ ದರ ಪಡೆಯಬೇಕೆಂದು ಸರ್ಕಾರ ಸೂಚನೆ ನೀಡಿದ್ದರೂ ಕೂಡ ಖಾಸಗಿ ಬಸ್ ಮಾಲೀಕರು ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದವು. ಆದರೆ, ಊರಿಗೆ ತೆರಳಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಜನ ಕೇಳಿದಷ್ಟು ಹಣ ತೆತ್ತು ಊರುಗಳಿಗೆ ತೆರಳುತ್ತಿರುವುದು ಕಂಡುಬಂತು.

Leave a Reply

Your email address will not be published.