ಸ್ನೇಹಿತನ ಅಜ್ಜಿಯ ಅಂತ್ಯಸಂಸ್ಕಾರಕ್ಕೆ ಹೊರಟಿದ್ದ ನಾಲ್ವರಲ್ಲಿ ಇಬ್ಬರು ದಾರಿಯಲ್ಲೇ ಹೆಣವಾದರು!

ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 75ರ- ಕುಣಿಗಲ್​ ರಸ್ತೆಯಲ್ಲಿ ಗುರುವಾರ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಯುವಕರಿಬ್ಬರು ಮೃತಪಟ್ಟಿದ್ದಾರೆ. ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ.ಬೆಂಗಳೂರಿನ ಮಂಜುನಾಥ ನಗರ ನಿವಾಸಿ ಚೇತನ್​ರ ಸ್ನೇಹಿತನ ಅಜ್ಜಿ ಕುಣಿಗಲ್​ನಲ್ಲಿ ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರಕ್ಕೆಂದು ಬೆಂಗಳೂರಿನಿಂದ ಕಾರಿನಲ್ಲಿ ಹೊರಟ ಚೇತನ್​ ಜತೆಯಲ್ಲಿ ಆತನ ಇತರ ಮೂವರು ಸ್ನೇಹಿತರಾದ ಆದಿ, ಚಂದು, ನವೀನ್​ ಎಂಬುವವರೂ ಇದ್ದರು. ಬೆಂಗಳೂರು ಹೊರವಲಯದ ನೆಲಮಂಗಲದ ಬಾವಿಕೆರೆ ಗ್ರಾಮದ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಡಿವೈಡರ್ ಹಾರಿದ್ದು, ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿಗೆ ಡಿಕ್ಕಿಯಾಗಿದೆ. ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಚೇತನ್​(22) ಮತ್ತು ಮಾದನಾಯಕನಹಳ್ಳಿ ಲಕ್ಷ್ಮೀಪುರದ ನವೀನ್​(19) ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ನಾಲ್ವರ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ತಿಪಟೂರು ಮೂಲದ ಆದಿ(19) ಮತ್ತು ಬೆಂಗಳೂರಿನ ಮಂಜುನಾಥ್ ನಗರದ ಚಂದು (19) ಗಂಭೀರ ಗಾಯಗೊಂಡಿದ್ದಾರೆ. ನಜ್ಜುಗುಜ್ಜಾದ ಕಾರಿನಿಂದ ಮೃತ ದೇಹಗಳನ್ನು ಹೊರ ತೆಗೆಯಲು ಸಂಚಾರಿ ಪೊಲೀಸರು ಹರಸಾಹಸ ಪಟ್ಟರು. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಚೇತನ್​ ಸೇರಿ ನಾಲ್ವರು ಬೆಂಗಳೂರಿನಿಂದ ಕುಣಿಗಲ್ ತಾಲೂಕಿನ ತಿಪ್ಪೇನಹಳ್ಳಿಗೆ ಸ್ನೇಹಿತನ ಅಜ್ಜಿಯ ಅಂತಿಮ ದರ್ಶನ ಪಡೆಯಲು ಹೋಗುತ್ತಿದ್ದರು. ಮಾರ್ಗಮಧ್ಯೆ ಬಂದ ಜವರಾಯ ಇಬ್ಬರನ್ನು ಬಾರದ ಲೋಕಕ್ಕೆ ಕರೆದೊಯ್ದಿದ್ದಾನೆ.ಬುಧವಾರ ರಾತ್ರಿಯೂ ನೆಲಮಂಗಲದಲ್ಲಿ ಲಾರಿ-ಬೈಕ್​ ನಡುವೆ ಅಪಘಾತ ಸಂಭವಿಸಿ ಯುವಕನೊಬ್ಬ ಮೃತಪಟ್ಟು, ಮತ್ತೊಬ್ಬ ಗಂಭೀರ ಗಾಯಗೊಂಡಿದ್ದ. ಬೆಳಗ್ಗೆ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.

Leave a Reply

Your email address will not be published.