ಹೆಚ್ಚು ಜನ ಒಂದೆಡೆ ಸೇರಿದರೆ ಕ್ರಿಮಿನಲ್ ಕೇಸ್..!

ಮುಂಬೈ,- ಎರಡನೇ ಹಂತದ ಕೊರೊನಾ ಸೋಂಕು ವ್ಯಾಪಿಸುತ್ತಿರುವುದರಿಂದ ಎಚ್ಚೆತ್ತುಗೊಂಡಿರುವ ಮಹಾರಾಷ್ಟ್ರ ಸರ್ಕಾರ ನಿಯಮ ಮೀರಿ ಜನಜಂಗುಳಿ ಸೇರಿದ್ದ ಮದುವೆಗೆ ಸಂಬಂಧಪಟ್ಟಂತೆ ಕ್ರಿಮಿನಲ್ ಪ್ರಕರಣ ದಾಖಲಿಸಿದೆ. ಮುಂಬೈನ ಚಂಬೂರ್ ಪ್ರದೇಶದಲ್ಲಿ ನಡೆದ ಮದುವೆ ಸಮಾರಂಭದಲ್ಲಿ 200ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಕೊರೊನಾ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ರೂಪಿಸಲಾಗಿರುವ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ, ಸಾಮಾಜಿಕ ಅಂತರ ಪಾಲನೆ ಮಾಡಿಲ್ಲ ಎಂದು ಆರೋಪಿಸಿ ಬಿಎಂಸಿ ಪೊಲೀಸರಿಗೆ ದೂರು ನೀಡಿತ್ತು.

ವಧು-ವರರ ಪೋಷಕರು, ಚಡ್ಡೆನಗರ್‍ನ ಗಮ್ಯಾಖಾನ್ ಸೇರಿದಂತೆ ಹಲವಾರ ವಿರುದ್ಧ ಮುಂಬೈನ ತಿಲಕ್‍ನಗರ ಪೊಲೀಸರು ಐಪಿಸಿ ಸೆಕ್ಷನ್ 188, 269 ಮತ್ತು 34ರ ಅಡಿ ಪ್ರಕರಣ ದಾಖಲಿಸಿದ್ದು, ಕೊರೊನಾ ನಿಯಂತ್ರಣದ ಮಾರ್ಗಸೂಚಿಗಳ ಉಲ್ಲಂಘನೆ ಕುರಿತಂತೆ ಆರೋಪ ದಾಖಲಿಸಿದ್ದಾರೆ. ಈ ಮೂಲಕ ಅನ್‍ಲಾಕ್ ಸಮಯದಲ್ಲಿ ಮೈ ಮರೆತು ಜನಜಂಗುಳಿ ಸೇರಿದರೆ ಕೇಸು ದಾಖಲಿಸುವ ಎಚ್ಚರಿಕೆ ನೀಡಲಾಗಿದೆ.

ಎರಡನೇ ಹಂತದ ಕೊರೊನಾ ಅಲೆ ಮಹಾರಾಷ್ಟ್ರ, ಕೇರಳ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳನ್ನು ಬಾಧಿಸುತ್ತಿದೆ. ಅದರಲ್ಲೂ ಮಹರಾಷ್ಟ್ರ ದೇಶದಲ್ಲೇ ನಂ.1 ಸ್ಥಾನದಲ್ಲಿದೆ. ಕೆಲವು ಭಾಗಗಳಲ್ಲಿ ಲಾಕ್‍ಡೌನ್ ಕೂಡ ಮಾಡಲಾಗಿದೆ. ಹೀಗಾಗಿ ಮಹಾರಾಷ್ಟ್ರ ಸರ್ಕಾರ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಸಾಧ್ಯತೆ ಇರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

Leave a Reply

Your email address will not be published.