ಸರ್ವರಿಗೂ ಸಮಬಾಳು ಸಮಪಾಲು ಧ್ಯೇಯದೊಂದಿಗೆ ಭಾರತೀಯರ ಹಣೆಬರಹ ಬರೆದ ಸಂವಿಧಾನ ಭಾಷ್ಯಕಾರ ಡಾ.ಬಿ.ಆರ್.ಅಂಬೇಡ್ಕರ್ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

ಚಿತ್ರದುರ್ಗ,ನಿತ್ಯವಾಣಿ, (ಏ.14): ಅವಮಾನಗಳ ಪಂಕದಿಂದ ಎದ್ದು, ಜಗತ್ತಿನಾದ್ಯಂತ ಸಮ್ಮಾನದ ಗೌರವ ಪಡೆದ ಸರ್ವೋತ್ಕೃಷ್ಠ ಸರ್ವಜ್ಞ. ಸಮಷ್ಠಿ ಭಾರತೀಯರ ಸಮೃದ್ಧ ಭಾರತ ನಿರ್ಮಾಣದ ದಿಕ್ಸೂಚಕ. ನೊಂದವರ ಬಂಧು, ಸರ್ವರಿಗೂ ಸಮಬಾಳು ಸಮಪಾಲು ಧ್ಯೇಯದೊಂದಿಗೆ ಭಾರತೀಯರ ಹಣೆಬರಹ ಬರೆದ ಸಂವಿಧಾನ ಭಾಷ್ಯಕಾರ ಡಾ.ಬಿ.ಆರ್.ಅಂಬೇಡ್ಕರ್ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ, ಭೋವಿಗುರುಪೀಠದಲ್ಲಿ ಜರುಗಿದ ಅಂಬೇಡ್ಕರ್ ಜಯಂತಿ ಉದ್ದೇಶಿಸಿ ಮಾತನಾಡಿದ ಅವರು ಡಾ.ಅಂಬೇಡ್ಕರ ಅವರನ್ನು ಕೇವಲ ಓರ್ವ ಸಂವಿಧಾನ ತಜ್ಞ, ಕಾನೂನು ತಜ್ಞ ಅಂತ ಬಿಂಬಿಸುತ್ತಿರುವುದು ವಿಷಾದನೀಯ. ಅವರ ಬಹುಮುಖೀ ಪ್ರತಿಭೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕು.  ಡಾ.ಅಂಬೇಡ್ಕರ್ ಈ ದೇಶದ ನದಿಗಳ ಬಗ್ಗೆ, ನೀರಾವರಿಯ ಬಗ್ಗೆ, ಜಲಮೂಲಗಳ ಸಂರಕ್ಷಣೆಯ ಬಗ್ಗೆ ಅವರು ನಡೆಸಿದ್ದ ಅಧ್ಯಯನಗಳ ಬಗ್ಗೆ ಗಮನಿಸಿದರೆ, ಭಾರತದ ಪ್ರಪ್ರಥಮ ಸವಿಸ್ತಾರ ನೀರಾವರಿ ಪಾಲಿಸಿಯನ್ನು ರೂಪಿಸಿ ಭಾರತ ಮೊದಲ ಜಲಸಂರಕ್ಷಣಾ ಹೋರಾಟಗಾರರಾಗಿ ಹೊರಹೊಮ್ಮತ್ತಾರೆ.
ಇಂದಿನ ರಾಜಕೀಯ ಗಮನಿಸಿದರೆ ವೈಯಕ್ತಿಕ ಲಾಭ ಮತ್ತು ಲೋಭಕ್ಕಾಗಿ ರಾಜೀನಾಮೆಯ ಪರ್ವಗಳು ನಡೆದಿವೆ. ಆದರೆ ಇದಕ್ಕೆ ವಿರೋಧಭಾಸದಂತೆ ಸ್ತ್ರೀ ಸಮಾನತೆಗಾಗಿ ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಆ ಕುಲ ಈ ಕುಲ ಆಚೇ ಸ್ತ್ರೀ ಕುಲೋದ್ಧಾರಕರಾಗಿ ಕಾಣುತ್ತಾರೆ.
ಡಾ ಅಂಬೇಡ್ಕರ್ ತಮ್ಮ ಪ್ರಸಿದ್ಧಿಯ ಉತ್ತುಂಗ ಶಿಖರಕ್ಕೇರಿದ್ದು, ಭಾಗ್ಯ ಬಲದಿಂದಾಗಲಿ ಆಕಸ್ಮಾತ್ ಒದಗಿದ ಸನ್ನಿವೇಶಗಳಿಂದಾಗಲಿ ಅಲ್ಲ, ತಮ್ಮ
ವ್ಯಕ್ತಿವಿಶೇಷ, ನಿರಂತರ ಹೋರಾಟದ, ಅನುಪಮ ತ್ಯಾಗದ, ಅಪಾರ ನಿಸ್ವಾರ್ಥದ, ಆಳವಾದ ಪಾಂಡಿತ್ಯದ, ಅನನ್ಯ ನಿಷ್ಠೆಯ, ಅಸೀಮ ಏಕನಿಷ್ಠೆಯ ಮತ್ತು
ಅಪೂರ್ವ ಬದ್ಧತೆಯ ಬಲದಿಂದಲೇ ಅವರು ಪ್ರಖ್ಯಾತರಾದದ್ದು, ಲೋಕವಿಖ್ಯಾತರಾದದ್ದು.
ಇತರ ಕ್ಷೇತ್ರಗಳಲ್ಲಿ ಅವರಿಗಿದ್ದ ಅಪಾರ ಪಾಂಡಿತ್ಯವನ್ನು ಗಮನಿಸಿದರೆ ಅಂಬೇಡ್ಕರ್‌ ಉತ್ತಮ ವಕೀಲ, ಅರ್ಥಶಾಸ್ತ್ರಜ್ಞ, ಸಮಾಜ ವಿಜ್ಞಾನಿ, ಆಡಳಿತಗಾರ, ತತ್ವಜ್ಞಾನಿ, ಸಂವಿಧಾನ ಶಿಲ್ಪಿ,  ಮಾನವೀಯತೆ ಮಹಾಮೂರ್ತಿ, ಮಾನವ ಹಕ್ಕುಗಳ ಹೋರಾಟಗಾರ, ರಾಜಕೀಯ ತಜ್ಞ, ಸಮಾಜಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ಇತಿಹಾಸ ತಜ್ಞ, ಖ್ಯಾತ ಚಿಂತಕ, ವಿಶ್ವಮಾನವ, ಆಧುನಿಕ ಭಾರತದ ನಿರ್ಮಾಪಕ, ಶಿಕ್ಷಣ ತಜ್ಞ, ಕಾನೂನು ತಜ್ಞ, ಸ್ತ್ರೀ ಸ್ವಾತಂತ್ರ್ಯವಾದಿ, ಖ್ಯಾತ ಲೇಖಕ, ಶ್ರೇಷ್ಠ ವಾಗ್ಮಿ, ಶಿಸ್ತಿನ ಸಿಪಾಯಿ, ವಿಚಾರವಾದಿ, ಸಮಾಜವಾದಿ, ಅಹಿಂಸಾವಾದಿ, ಕ್ರಾಂತಿಕಾರಿ, ಬಹುಭಾಷಾ ತಜ್ಞ, ನೀರಾವರಿ ತಜ್ಞ, ಕಾರ್ಮಿಕರ ಕಣ್ಮಣಿ, ಬಡವರ ಬಂಧು, ರೈತರ ಪಾಲಿನ ಭಾಗ್ಯದಾತ, ಜಾತಿ ಪದ್ಧತಿ ನಿವಾರಕ, ಭಾರತೀಯ ರಿಜರ್ವ್‌ ಬ್ಯಾಂಕ್‌ ಸೃಷ್ಟಿಕರ್ತ ಹೀಗೆ ವಿಭಿನ್ನ ಆಯಾಮ ಅಭಿವೃದ್ಧಿದ್ಯೋತಕವಾಗಿ ಕಾಣುತ್ತಾರೆ.
ದಲಿತ ಸಮುದಾಯದಲ್ಲಿ ಜನಿಸಿದೇ ಮೇಲ್ವರ್ಗದ ಸಮುದಾಯದಲ್ಲಿ ಜನಿಸಿದ್ದರೆ, ದೈವಿಕ ಅವತಾರ ಪುರುಷರ ಸಾಲಿನಲ್ಲಿ ಸೇರಿಸಿಬಿಡುತ್ತಿದ್ದರು. ಆದರೆ ಪೂರ್ವಾಗ್ರಹ ಪೀಡಿತ ಮನಸ್ಸಿನಿಂದ ನೋಡದೆ, ವಾಸ್ತವ ಸತ್ಯ ಅರ್ಥೈಸಿಕೊಂಡರೆ ಬಡಜನ ಒಳಗೊಂಡ ಭಾರತದ ಭಾಗ್ಯವಿಧಾತ. ಭಾರತೀಯರ ಧೀಶಕ್ತಿ, ಜಾತಿ ವಿನಾಶದ ಜಾತ್ಯತೀತ ಶಕ್ತಿಯಾಗಿ ಡಾ.ಬಿ.ಆರ್
ಅಂಬೇಡ್ಕರ್ ರಾರಾಜಿಸುತ್ತಾರೆ ಎಂದು ಹೇಳಿದರು.
ಕುಂಚಿಟಿಗ ಗುರುಪೀಠದ ಜಗದ್ಗುರು ಶ್ರೀ ಡಾ.ಶಾಂತವೀರ ಸ್ವಾಮೀಜಿ ಮಾತನಾಡಿಅಂಬೇಡ್ಕರ್ ರವರನ್ನು ಬುದ್ಧ ಬಸವ ಕನಕ ವಾಲ್ಮೀಕಿ ಪೈಗಂಬರ್ ರಂತೆ ಸಂತನಾಗಿ ನೋಡಿ ಅಂಬೇಡ್ಕರ್ ಬಡವರ ಬೆಳಕು ಶೋಷಿತರ ಸಂತ ಧಮನಿತರ ಧ್ವನಿ ನೊಂದವರಿಗೆ ಅಸರೆ ಅಕ್ಷರ ನೀಡಿದ ಕರುಣಾಕರ ಇಷ್ಟೆಲ್ಲ ನೀಡಿದ ಮಹಾತ್ಮನನ್ನು ದಲಿತ ಎಂಬ ಕಾರಣಕ್ಕೆ ಉದಾಸಿನ ಭಾವ ತೋರುವುದು ಸರಿಯಲ್ಲ ಕಲಿಯುಗದಲ್ಲಿ ಎಲ್ಲ ಭಾರತೀಯರ ಧರ್ಮಗ್ರಂಥ ಸಂವಿಧಾನ ತನ್ನ ಪರಿಶ್ರಮದಿಂದ ಅವಮಾನ ಅನುಮಾನ ಮೇಟ್ಟಿ ನಿಂತ ದೀರ ಶಿಕ್ಷಣವೇ ದೊಡ್ಡ ಅಸ್ತ್ರ ಎಂಬುದನ್ನು ಸಾಧಿಸಿ ತೋರಿದ ಮಾರ್ಗದರ್ಶಕ ಎಂದು ತಿಳಿಸಿದರು.
ಸಮಾರಂಭದಲ್ಲಿ ಮಡಿವಾಳ ಗುರುಪೀಠದ ಜಗದ್ಗುರು ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಹರಳಯ್ಯ ಗುರುಪೀಠದ ಬಸವ ಹರಳಯ್ಯ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಬಸವ ಪ್ರಭು ಸ್ವಾಮೀಜಿಯವರು ಸಾನಿಧ್ಯವಹಿಸಿದ್ದರು.
ನಗರಸಭೆ ನಾಮ ನಿರ್ದೇಶಿತ ಸದಸ್ಯರಾದ ಡಿ.ತಿಮ್ಮಣ್ಣ, ಜಿಲ್ಲಾ ಭೋವಿ ಸಂಘದ ಕಾರ್ಯದರ್ಶಿ ಲಕ್ಷ್ಮಣ, ಖಜಾಂಚಿ ಈ ಮಂಜುನಾಥ, ಯುವ ಮುಖಂಡ ನಾಗರಾಜ, ಹನುಮಂತ, ರಾಮಕೃಷ್ಣ ಪ್ರೌಢಶಾಲೆ ಶಿಕ್ಷಕರಾದ ಶ್ರೀಧರ, ಆನಂದ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published.