ನಿತ್ಯವಾಣಿ,ಚಿತ್ರದುರ್ಗ,(ನ.16) : ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ದೇಶದ ಪ್ರತಿಯೊಬ್ಬ ಪ್ರಜೆಯ ಸಾಮಾಜಿಕ ಜವಾಬ್ದಾರಿ. ಇಂದಿನ ಮಕ್ಕಳಲ್ಲಿ ಶಿಕ್ಷಣದ ಪ್ರಾಮುಖ್ಯತೆಯನ್ನು ಮೂಡಿಸುವುದರಿಂದ ಉನ್ನತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದು ಲೇಖಕ ಹಾಗು ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು.
ನಗರದ ವಿದ್ಯಾನಗರ ಬಡಾವಣೆಯಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯೋಗೀಶ್ ಸಹ್ಯಾದ್ರಿ, ವಿಶ್ವದಲ್ಲಿ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಭಾರತದಲ್ಲಿಯೂ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕಿದೆ. ಇಂದಿನ ಮಕ್ಕಳು ಕಂಪ್ಯೂಟರ್ ಗಳಿಗಿಂತಲೂ ಫಾಸ್ಟ್ ಆಗಿದ್ದಾರೆ. ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆ, ಅಗಾಧ ಕಲಿಕೆ, ಕುತೂಹಲ ಇಂಥಹ ಎಲ್ಲ ಕೌಶಲಗಳನ್ನು ಪೋಷಕರು ಮತ್ತು ಶಿಕ್ಷಕರು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಪ್ರತಿಯೊಂದು ವಿದ್ಯಾರ್ಥಿಯನ್ನು ನಾಡಿನ ಆಸ್ತಿಯನ್ನಾಗಿ ಮಾರ್ಪಡಿಸುವ ಕುರಿತು ಚಿಂತಿಸಬೇಕಾಗಿದೆ ಎಂದು ತಿಳಿಸಿದರು.
ಕೊರೋನ ದಾಳಿಯಿಂದ ಶಾಲಾ ತರಗತಿಗಳನ್ನು ಕಳೆದುಕೊಂಡು ಬೇಸತ್ತಿದ್ದ ಮಕ್ಕಳಿಗೆ ಶಾಲೆಗಳು ಪ್ರಾರಂಭವಾಗಿರುವುದು ಖುಷಿ ನೀಡಿದೆ ಹಾಗು ಈ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹ. ಮಕ್ಕಳಲ್ಲಿ ಗೆಲುವನ್ನು ಮೂಡಿಸಲು ಆದಷ್ಟು ಬೇಗನೆ ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಮಕ್ಕಳು ಕೇಕ್ ಕತ್ತರಿಸಿ ಸಂಭ್ರಮಿಸಿದರು. ತಮಗೆ ಇಷ್ಟವಾದ ಕೆಲವು ಪುಸ್ತಕಗಳಿಂದ ನೆಚ್ಚಿನ ಕವಿತೆಗಳನ್ನು ವಾಚಿಸಿ ಸಂತಸಪಟ್ಟರು. ಕಾರ್ಯಕ್ರಮದಲ್ಲಿ ಸ್ಪೆಕ್ ಎಜುಕೇಷನ್ ಟ್ರಸ್ಟ್ ನ ಆಡಳಿತಾಧಿಕಾರಿ ಚೈತ್ರ ಸಿ ಹಾಗು ಪೋಷಕರು ಹಾಜರಿದ್ದರು.