ನಿತ್ಯವಾಣಿ,ಚಿತ್ರದುರ್ಗ,( ಜೂ.22) ; ಚಿತ್ರದುರ್ಗ ಜಿಲ್ಲೆಯನ್ನು ಅನ್‍ಲಾಕ್ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಇಂದು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲ ಅಂಗಡಿ ಮುಂಗ್ಗಟ್ಟುಗಳು ತೆರೆದಿದ್ದು, ಇದರಿಂದ ವಾಣಿಜ್ಯ ಚಟುವಟಿಕೆಗಳು ಚುರುಕುಗೊಂಡಿವೆ. ಇದರೊಂದಿಗೆ ಚಿತ್ರದುರ್ಗ ಜಿಲ್ಲೆಯು ಸಹಜ ಸ್ಥಿತಿಯತ್ತ ಮರಳಿದೆ.
ಸುಮಾರು ಎರಡು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲೆಯ ಎಲ್ಲ ಕಡೆಗಳಲ್ಲಿ ಬಟ್ಟೆ, ಚಿನ್ನಾಭರಣ, ಚಪ್ಪಲಿ, ಮೊಬೈಲ್, ಫನಿರ್ಚರ್ ಸೇರಿದಂತೆ ಎಲ್ಲ ರೀತಿಯ ವಾಣಿಜ್ಯ ಮಳಿಗೆಗಳು ತೆರೆದು ವ್ಯಾಪಾರ ನಡೆಸಿದವು. ಹೊಟೇಲ್‍ಗಳಲ್ಲಿ ಶೇ.50 ಸಾಮಥ್ರ್ಯದೊಂದಿಗೆ ಗ್ರಾಹಕರು ಸಂಜೆ 5ಗಂಟೆಯ ವರೆಗೆ ಕುಳಿತು ಊಟ ಉಪಹಾರ ಸೇವಿಸಿದರು. ಆಟೋ ರಿಕ್ಷಾ, ಟ್ಯಾಕ್ಸಿಗಳು ಕೂಡ ರಸ್ತೆಗೆ ಇಳಿದಿದ್ದವು.
ಅಂತರ್ ಜಿಲ್ಲಾ ಹಾಗೂ ತಾಲೂಕು ಮಾರ್ಗಗಳಲ್ಲಿ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಇಂದು ಕೂಡ ಮುಂದುವರೆದಿದೆ. ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜನ ಹಾಗೂ ವಾಹನ ಸಂಚಾರ ಇಂದು ಹೆಚ್ಚಾಗಿ ಕಂಡುಬಂದವು. ಇದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಐದು ಗಂಟೆಯ ನಂತರ ಇಡೀ ಜಿಲ್ಲೆ ಸಂಪೂರ್ಣ ಬಂದ್ ಆಗಿ ಸ್ತಬ್ಧಗೊಂಡಿತ್ತು. ನಂತರ ವಾಹನಗಳ ಓಡಾಟಕ್ಕೆ ಪೊಲೀಸರು ತಡೆಯೊಡ್ಡಿದರು.
ಲಾಕ್‍ಡೌನ್ ಸಡಿಲಿಕೆಯಾಗುತ್ತಿದ್ದಂತೆ ನಗರದಲ್ಲಿ ಮತ್ತೆ ವ್ಯಾಪಾರ ವಹಿವಾಟು ಗರಿಗೆದರಿವೆ. ವಾಣಿಜ್ಯ ಮಳಿಗೆಗಳು, ಮಾಲ್‍ಗಳು, ಹೋಟೆಲ್‍ಗಳು, ಬಟ್ಟೆ ಅಂಗಡಿಗಳು, ಬಾರ್-ರೆಸ್ಟೊರೆಂಟ್‍ಗಳು ಬಾಗಿಲು ತೆರೆದು ವ್ಯಾಪಾರ ಆರಂಭಿಸಿವೆ. ಲಾಕ್‍ಡೌನ್‍ನಿಂದಾಗಿ ವ್ಯಾಪಾರ ಸಂಪೂರ್ಣ ಸ್ತಬ್ಧವಾಗಿತ್ತು. ಲಾಕ್‍ಡೌನ್ ಸಡಿಲವಾಗುತ್ತಿದ್ದಂತೆ ಕೋಟೆನಗರಿಯಲ್ಲಿ ವಹಿವಾಟು ಜೋರಾಗಿರುವುದು ಕಂಡು ಬಂತು.
ಖಾಸಗಿ ಸಂಸ್ಥೆಗಳ ಉದ್ಯೋಗಿಗಳು, ವ್ಯಾಪಾರಸ್ಥರು ಹೊರಬಿದ್ದರು. ಖರೀದಿಗಾಗಿ ಜನರೂ ಧಾವಿಸಿದರು. ಇದರಿಂದ ಮಾರುಕಟ್ಟೆ ಪ್ರದೇಶದಲ್ಲಿ ಅಂತರ ಕಾಪಾಡಿಕೊಂಡಿರುವುದು ಕಂಡು ಬರಲಿಲ್ಲ. ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿನ ಅಂಗಡಿಗಳು ತೆರೆದಿದ್ದವು. ಕೆಲವೆಡೆ ಅಂಗಡಿಗಳನ್ನು ಶುಚಿಗೊಳಿಸುತ್ತಿದ್ದ ದೃಶ್ಯಗಳು ಕಂಡು ಬಂದವು.
ಜಿಲ್ಲೆಯಲ್ಲಿ ಲಾಕ್‍ಡೌನ್ ಬಹುತೇಕ ಸಡಿಲಿಸಿ, ಸಂಜೆ ವರೆಗೆ ವಹಿವಾಟಿಗೆ ಅವಕಾಶ ಕಲ್ಪಿಸಿರುವುದರಿಂದ ಜನ, ವ್ಯಾಪಾರಿಗಳು ನಿರಾಳರಾಗಿದ್ದಾರೆ. ಮಂಗಳವಾರ ಮೊದಲ ದಿನವೇ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡು ಬಂತು.ಸೋಮವಾರವೇ ಸಾರಿಗೆ ಸಂಸ್ಥೆ ಬಸ್‍ಗಳ ಸಂಚಾರ ಆರಂಭಗೊಂಡಿತು. ಎರಡನೇ ದಿನವೂ ಮುಂದುವರೆಯಿತು. ಮೊದಲ ದಿನದಂತೆ ಎರಡನೇ ದಿನವೂ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಪ್ರಯಾಣಿಕರು ಕಂಡು ಬಂದರು.
ಸುಮಾರು ಎರಡು ತಿಂಗಳ ನಂತರ ಬಟ್ಟೆ ಅಂಗಡಿಗಳು ಬಾಗಿಲು ತೆರೆದಿದ್ದವು. ಇದರ ನಿರೀಕ್ಷೆಯಲ್ಲಿಯೇ ಜನ ಇದ್ದರೂ ಎಂಬಂತೆ ಮಳಿಗೆ ತೆರೆದ ತಕ್ಷಣ ಒಳ ಹೋಗಿ, ಬಟ್ಟೆ ಬರೆ ಖರೀದಿಸಿದರು. ಹೂ, ಹಣ್ಣು, ಕಾಯಿ, ಬೈಸಿಕಲ್, ಪಂಕ್ಚರ್, ಚಪ್ಪಲಿ, ಜ್ಯೂಸ್, ಝರಾಕ್ಸ್, ಎಲೆಕ್ಟ್ರಾನಿಕ್ ಮಳಿಗೆಗಳು ಬಾಗಿಲು ತೆರೆದಿದ್ದವು. ಎಲ್ಲ ಕಡೆಗಳಲ್ಲಿ ಜನ ಕಂಡು ಬಂದರು.ಸಂಜೆ ಐದು ಗಂಟೆಯವರೆಗೆ ಲಾಕ್‍ಡೌನ್ ಸಡಿಲಿಸಿರುವುದರಿಂದ ಜನ ದಿನವಿಡೀ ಹೊರಗೆ ಓಡಾಡಿದರು. ವ್ಯಾಪಾರ ವಹಿವಾಟು ನಡೆಯಿತು.ಉಚಿತ ಸುದ್ದಿ, ಜಾಹೀರಾತಿಗಾಗಿ ,👉ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್. ಟಿ .ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 , www.nithyavaninews.com