ಹೊಸ ವರ್ಷಾಚರಣೆಯ ಅಂಗವಾಗಿ ಸಾವಿರಾರು ಪ್ರವಾಸಿಗರು ಜಿಲ್ಲೆಯ ಪ್ರವಾಸಿತಾಣಗಳಿಗೆ ಶುಕ್ರವಾರ ಲಗ್ಗೆ ಇಟ್ಟಿದ್ದರು. ರೂಪಾಂತರ ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಜಿಲ್ಲಾಡಳಿತ ಜಾರಿಗೊಳಿಸಿದ ನಿಷೇಧಾಜ್ಞೆ ಹಾಗೂ ಕೋವಿಡ್ ನಿಯಮಗಳು ಇಲ್ಲಿ ಸ್ಪಷ್ಟವಾಗಿ ಉಲ್ಲಂಘನೆಯಾದವು.
ನಿರೀಕ್ಷೆ ಮೀರಿ ಪ್ರವಾಸಿಗರು ಭೇಟಿ ನೀಡಿದ್ದರಿಂದ ಕಲ್ಲಿನ ಕೋಟೆಯ ಮುಂಭಾಗದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಸೃಷ್ಟಿಯಾಗಿತ್ತು. ಆಡುಮಲ್ಲೇಶ್ವರ ಕಿರು ಮೃಗಾಲಯ, ಚಂದ್ರವಳ್ಳಿ ಕೆರೆ, ಮುರುಘಾವನ ಹಾಗೂ ವಿ.ವಿ.ಸಾಗರ ಜಲಾಶಯದಲ್ಲಿಯೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು.
ಹೊಸ ವರ್ಷದ ಮೊದಲ ದಿನ ಪ್ರವಾಸಿತಾಣ, ದೇಗುಲಗಳಿಗೆ ಭೇಟಿ ನೀಡುವುದು ರೂಢಿ. ಹೊಸ ವರ್ಷದಂದು ಸಾವಿರಾರು ಜನರು ಕೋಟೆ ವೀಕ್ಷಣೆಗೆ ಬರುತ್ತಿದ್ದರು. ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ವಾಡಿಕೆಯಷ್ಟು ಪ್ರವಾಸಿಗರು ಬರುವ ಬಗ್ಗೆ ಅನುಮಾನಗಳಿದ್ದವು. ಆದರೆ, ಸೋಂಕಿನ ಆತಂಕಕ್ಕೆ ಒಳಗಾಗದ ಜನರು ನಿರ್ಭೀತಿಯಿಂದ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಂಡರು.
ಕೋಟೆಯನ್ನು ಸಂಪರ್ಕಿಸುವ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಕೋಟೆಯ ಮುಂಭಾಗದಲ್ಲಿ ವಾಹನ ನಿಲುಗಡೆ ನಿರ್ಬಂಧಿಸಲಾಗಿತ್ತು. ಜನವಸತಿ ಪ್ರದೇಶದ ಬೀದಿಗಳಲ್ಲಿ ವಾಹನ ನಿಲುಗಡೆ ಆಗಿದ್ದವು. ಕಿರಿದಾದ ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿರುವುದು ಕಂಡುಬಂದಿತು. ಟಿಕೆಟ್ ಕೌಂಟರ್ ವರೆಗೆ ವಾಹನ ಸಾಗಲು ನಿರ್ಬಂಧ ವಿಧಿಸಲಾಗಿತ್ತು.
ಕೋಟೆ ಪ್ರವೇಶಕ್ಕೆ ಟಿಕೆಟ್ ಪಡೆಯಲು ಪ್ರವಾಸಿಗರು ಕಾಯುತ್ತಿದ್ದ ಸರತಿ ಸಾಲು ಬಹು ದೂರದವರೆಗೆ ಚಾಚಿಕೊಂಡಿತ್ತು. ಟಿಕೆಟ್ ಪಡೆಯಲು ಮುಗಿಬಿದ್ದಿದ್ದರಿಂದ ಅಂತರ ಕಾಯ್ದುಕೊಳ್ಳುವುದು ಅಸಾಧ್ಯವಾಗಿತ್ತು. ಯಾರ ಮುಖದಲ್ಲಿಯೂ ಮಾಸ್ಕ್ ಕಂಡುಬರಲಿಲ್ಲ. ಗುಂಪು-ಗುಂಪಾಗಿ ಸಂಚರಿಸಿ ಸಂತಸ ಹಂಚಿಕೊಂಡರು. ಹೋಟೆಲ್, ತಿನಿಸು ಮಳಿಗೆಗಳು ಭರ್ತಿಯಾಗಿದ್ದವು.
ಚಂದ್ರವಳ್ಳಿ, ಆಡುಮಲ್ಲೇಶ್ವರಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದರು. ಚಂದ್ರವಳ್ಳಿ ಹೊರಭಾಗದ ಮರದ ನೆರಳಿನಲ್ಲಿ ಗುಂಪು ಸೇರಿ ಊಟ ಸವಿದರು. ಮುರುಘಾ ಮಠದ ಮುರುಘಾ ವನಕ್ಕೂ ನಿರೀಕ್ಷೆ ಮೀರಿ ಜನರು ಭೇಟಿ ನೀಡಿದ್ದರು.
ನಿಯಮ ಉಲ್ಲಂಘಿಸಿದ ಜಿಲ್ಲಾಡಳಿತ
ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಜ.2ರವರೆಗೆ ಹೊರಡಿಸಿದ ನಿಷೇಧಾಜ್ಞೆ ಹಾಗೂ ಕೋವಿಡ್ ಮಾರ್ಗಸೂಚಿಯನ್ನು ಶುಕ್ರವಾರ ಜಿಲ್ಲಾಡಳಿತವೇ ಉಲ್ಲಂಘನೆ ಮಾಡಿತು.
ಹೊಸ ವರ್ಷಾಚರಣೆಯ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಶುಕ್ರವಾರ ಫೋಟೊ ಸೆಷನ್ ನಡೆಸಿದರು. ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಸಂಗಪ್ಪ ಅವರ ಸಮ್ಮುಖದಲ್ಲಿ ಸೇರಿದ್ದ ನೌಕರರಲ್ಲಿ ಯಾರೊಬ್ಬರು ಮಾಸ್ಕ್ ಧರಿಸಿರಲಿಲ್ಲ.