ನಿತ್ಯವಾಣಿ,ಚಿತ್ರದುರ್ಗ,(ಜು.18) : ರಾಜ್ಯ ಸರ್ಕಾರವು ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಮೂಲಕ ಸಣ್ಣಪುಟ್ಟ ಜಾತಿ, ಪಶುಪಾಲನಾ ಬುಡಕಟ್ಟು ಜನಾಂಗಗಳನ್ನು ನಿರ್ಮಾಣ ಮಾಡುವಂತ ನಿರ್ಣಯವನ್ನು ರಾಜ್ಯ ಸರ್ಕಾರ ಮಾಡಿರುವುದಕ್ಕೆ ಕರ್ನಾಟಕ ರಾಜ್ಯ ಕುಂಚಿಟಿಗ ಮೀಸಲಾತಿ ಹೋರಾಟ ಮತ್ತು ಕ್ಷೇಮಾಭಿವೃದ್ಧಿ ಸಂಘ ಹಾಗೂ ಜಿಲ್ಲಾ ಕುಂಚಿಟಿಗ ಸಂಘ ಜಂಟಿಯಾಗಿ ಖಂಡಿಸುತ್ತವೆ.
ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಅಧೀನ ಕಾರ್ಯದರ್ಶಿಯವರು ಜು.17 ರಂದು ಸುತ್ತೋಲೆ ಹೊರಡಿಸಿದ್ದು ಪ್ರವರ್ಗ-3ಎ ಅಡಿಯಲ್ಲಿ ಬರುವಂತ ಒಕ್ಕಲಿಗ ಜಾತಿಯನ್ನು ಪ್ರದಾನವಾಗಿ ಬಿಂಬಿಸಿ ಪ್ರವರ್ಗ-3ರ ಡಿಯಲ್ಲಿರುವ ಬರುವಂತ ಬುಡಕಟ್ಟು ಕುಂಚಿಟಿಗ ಜಾತಿಯನ್ನು ಒಕ್ಕಲಿಗ ಜಾತಿಯ ಉಪ ಜಾತಿ ಎಂದು ಆದೇಶ ಮಾಡಲಾಗಿದೆ. ಇದು ಅತ್ಯಂತ ಖಂಡನೀಯವಾಗಿದೆ.
1921ರ ಜಾತಿ ಜನಗಣತಿಯಲ್ಲಿ ಕುಂಚಿಟಿಗ ಜಾತಿಯನ್ನು ಒಕ್ಕಲಿಗ ಜಾತಿಯಿಂದ ಪ್ರತ್ಯೇಕಿಸಿ ಗಣತಿ ಮಾಡಿ ಆದೇಶ ಮಾಡಲಾಗಿದೆ. ಜೊತೆಗೆ ಇತರೆ ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಅಂದಿನ ಮೈಸೂರು ಮಹಾರಾಜರ ಮೈಸೂರು ಸರ್ಕಾರದ ಅಂದಿನ ಮುಖ್ಯ ಕಾರ್ಯದರ್ಶಿ ಎನ್.ಮಾಧವ ರಾವ್ ಅವರು ದಿನಾಂಕ-17-8-1028ರಲ್ಲಿ ಆದೇಶ ಹೊರಡಿಸಿದ್ದಾರೆ.
ಕುಂಚಿಟಿಗ ಒಂದು ಹಿಂದುಳಿದ ಜಾತಿಯಾಗಿದ್ದು ಒಕ್ಕಲಿಗ ಜಾತಿಯ ಉಪ ಜಾತಿಯಲ್ಲ. ರಾಜ್ಯ ಸರ್ಕಾರಕ್ಕೆ ಕುಂಚಿಟಿಗ ಜನಾಂಗದ ಬಗ್ಗೆ ಕನಿಷ್ಠ ಕಾಳಜಿ ಇದ್ದರೆ ಮೈಸೂರು ವಿಶ್ವ ವಿದ್ಯಾಲಯವು ಕುಂಚಿಟಿಗ ಜಾತಿಯ ಕುಲಶಾಸ್ತ್ರೀಯ ಅಧ್ಯಯನ ಮಾಡಿ 2018ರಲ್ಲೇ ಸರ್ಕಾರಕ್ಕೆ ವರದಿ ನೀಡಿದೆ. ಕೂಡಲೇ ಆ ವರದಿಯನ್ನು ಸಂಪುಟಕ್ಕೆ ತಂದು ಅಧ್ಯಯನ ವರದಿಯ ಶಿಫಾರಸುಗಳನ್ನು ಯಥಾವತ್ ಜಾರಿ ಮಾಡುವಂತೆ ಕುಂಚಿಟಿಗ ಜನಾಂಗದ ಹಿತ ಕಾಯಲಿ ಎನ್ನುವ ಆಗ್ರಹವಾಗಿದೆ.
ಕುಂಚಿಟಿಗ ಜಾತಿಯ ಸ್ವಾಮೀಜಿ ಒಬ್ಬರ ಚಿತಾವಣೆಯಿಂದಾಗಿ ಕುಂಚಿಟಿಗ ಜಾತಿಯ ಮಕ್ಕಳು ಶಾಲಾ ದಾಖಲಾತಿಗಳಲ್ಲಿ ಒಕ್ಕಲಿಗ ಜಾತಿ ಎಂದು ಬರೆಸುತ್ತಿರುವುದರಿಂದ ಭವಿಷ್ಯದಲ್ಲಿ ಅಂತವರಿಗೆ ಸರ್ಕಾರಿ ಉದ್ಯೋಗಕ್ಕೆ ಸೇರ್ಪಡೆ ಆಗುವ ಸಂದರ್ಭದಲ್ಲಿ ಸಿಂಧುತ್ವವನ್ನು ಸರ್ಕಾರ ನೀಡುತ್ತಿಲ್ಲ. ಕುಂಚಿಟಿಗ ಜಾತಿ ಒಕ್ಕಲಿಗ ಜಾತಿಯ ಉಪ ಜಾತಿಯಾಗಿದ್ದರೆ ಕೇಂದ್ರ ಸರ್ಕಾರದಲ್ಲಿ ಒಕ್ಕಲಿಗರಿಗೆ ಒಬಿಸಿ ಮೀಸಲಾತಿ ಸೌಲಭ್ಯವಿದೆ. ಅಲ್ಲದೆ ಒಕ್ಕಲಿಗ ಜಾತಿಯ ಇತರೆ ಎಲ್ಲ ಉಪ ಜಾತಿಗಳಿಗೂ ಕೇಂದ್ರದ ಒಬಿಸಿ ಮೀಸಲಾತಿ ಇದೆ. ಆದರೆ ಕುಂಚಿಟಿಗ ಜಾತಿಗೆ ಏಕೆ ಕೇಂದ್ರ ಒಬಿಸಿ ಮೀಸಲು ಸೌಲಭ್ಯ ನೀಡಿಲ್ಲ ಎನ್ನುವುದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೇ ಉತ್ತರ ನೀಡಬೇಕಿದೆ ಎಂದು ಆಗ್ರಹ ಮಾಡುತ್ತೇವೆ.
ಪ್ರವರ್ಗ-3ಎ ಗುಂಪಿಗೆ ರಾಜ್ಯ ಸರ್ಕಾರ 500 ಕೋಟಿ ರೂ.ಗಳನ್ನು ಮೀಸಲಿಟ್ಟು ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದರೆ ಕೂಡಲೇ ಜನಸಂಖ್ಯೆಗೆ ಅನುಗುಣವಾಗಿ ಕುಂಚಿಟಿಗ ಜಾತಿಗೆ ಸೇರಬೇಕಾದ 500 ಕೋಟಿ ರೂ. ಪಾಲನ್ನು ಕುಂಚಿಟಿಗ ಜಾತಿಗೆ ಪ್ರತ್ಯೇಕವಾಗಿಟ್ಟು ಕುಂಚಿಟಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಿ ಎನ್ನುವುದು ಜನಾಂಗದ ಆಗ್ರಹವಾಗಿದೆ.
ಕುಂಚಿಟಿಗ ಜನಾಂಗ ಯಾರ ವಿರೋಧಿಯು ಅಲ್ಲ, ಇದೊಂದು ಹಿಂದುಳಿದ ಬುಡಕಟ್ಟು ಸಮುದಾಯವಾಗಿದೆ. ಮೂಲ ಕಟ್ಟೆಮನೆಗಳು, ಬುಡಕಟ್ಟುಗಳು, ಅಮಾವಾಸ್ಯೆ ದೇವರುಗಳು, ಕುಂಚಿಟಿಗ ಸಾಂಸ್ಕೃತಿಕ ವೀರರ ಪಡೆಯೆ ಇದೆ. ಕುಂಚಿಟಿಗ ಇತಿಹಾಸ ಸಮೃದ್ಧಿಯಾಗಿದ್ದು ಇಂದಿಗೂ ಎಲ್ಲ ರೀತಿಯ ಬುಡಕಟ್ಟು ಆಚರಣೆಗಳು ಜೀವಂತವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಯಥಾವತ್ ಜಾರಿ ಮಾಡಬೇಕು, ಒಕ್ಕಲಿಗ ಅಭಿವೃದ್ಧಿ ನಿಗಮದಲ್ಲಿನ ಒಕ್ಕಲಿಗ ಜಾತಿಯ ಉಪ ಜಾತಿ ಎನ್ನುವ ಆದೇಶವನ್ನು ರದ್ದು ಮಾಡಬೇಕು ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ಮಾಡುವುದರ ಜೊತೆಯಲ್ಲಿ ನ್ಯಾಯಾಲಯದ ಕದ ತಟ್ಟಬೇಕಾಗುತ್ತದೆ .ಎಂದು ಚಿತ್ರದುರ್ಗ ದಲ್ಲಿ ಕರ್ನಾಟಕ ರಾಜ್ಯ ಕುಂಚಿಟಿಗ ಮೀಸಲಾತಿ ಹೋರಾಟ ಮತ್ತು ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಹರಿಯಬ್ಬೆ ಸಿ.ಹೆಂಜಾರಪ್ಪರವರು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯಪ್ರ.ಕಾರ್ಯದರ್ಶಿ ಡಾ.ದೇವರಾಜ್ ಹಾಗು ಚಿತ್ರದುರ್ಗ ಜಿಲ್ಲಾ ಕುಂಚಿಟಿಗ ಸಂಘ ಜಿಲ್ಲಾಧ್ಯಕ್ಷ ಗಾಳಿ ಜಿ.ಚಂದ್ರಯ್ಯ ರವರು ಈ ಹೋರಾಟಕ್ಕೆ ಜೊತೆಯಲ್ಲಿ ಧ್ವನಿ ಗೂಡಿಸಿದ್ದಾರೆ.