ನವದೆಹಲಿ, ಡಿಸೆಂಬರ್ 19:ಕಳೆದ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದ ರಾಹುಲ್ ಗಾಂಧಿ ಮತ್ತೆ ಅಧ್ಯಕ್ಷ ಗಾದಿಗೆ ಏರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.ಶೇ.99.99 ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯನ್ನು ಮುಂದಿನ ಅಧ್ಯಕ್ಷರನ್ನಾಗಿ ನೋಡಲು ಇಚ್ಛಿಸುತ್ತಿದ್ದಾರೆ ಎನ್ನುವ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿಕೆ ಬೆನ್ನಲ್ಲೇ ಇಂದು ನಡೆದ ಕಾಂಗ್ರೆಸ್ ಉನ್ನತ ಮಟ್ಟದ ಸಭೆಯಲ್ಲಿ ರಾಹುಲ್ ಗಾಂಧಿ ಕೂಡ ಪರೋಕ್ಷವಾಗಿ ಇದೇ ಮಾತನ್ನಾಡಿದ್ದಾರೆ.ಕಾಂಗ್ರೆಸ್ ನಾಯಕರು ಬಯಸಿದ ಜವಾಬ್ದಾರಿ ನಿಭಾಯಿಸಲು ಸಿದ್ಧ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಾಯಕತ್ವದ ಗೊಂದಲಕ್ಕೆ ಸಂಬಂಧಿಸಿ ಬಹಿರಂಗ ಬೇಸರದ ಪತ್ರ ಬರೆದಿದ್ದ ಪ್ರಮುಖ ನಾಯಕರೊಂದಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ನಡೆಸಿದ ಸಭೆಯಲ್ಲಿ ರಾಹುಲ್ ಈ ಮಾತನ್ನಾಡಿದ್ದಾರೆ.ಹೊಸ ವರ್ಷದ ಆರಂಭದಲ್ಲಿ ನೂತನ ಅಧ್ಯಕ್ಷರನ್ನು ನೇಮಿಸುವುದಾಗಿ ಘೋಷಿಸಿರುವ ಕಾಂಗ್ರೆಸ್ ಈ ಕಾಂಗ್ರೆಸ್‌ನಲ್ಲಿ ರಾಹುಲ್ ಗಾಂಧಿಯ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಇದಕ್ಕೆ ಪೂರಕವೆನ್ನುವಂತೆ ಮುಂದಿನ ಹತ್ತು ದಿನಗಳಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರು ಹಾಗೂ ವಿವಿಧ ರಾಜ್ಯಗಳ ಪ್ರಮುಖರೊಂದಿಗೆ ಸೋನಿಯಾ ಗಾಂಧಿ ಹಾಗೂ ಇತರರು ಸರಣಿ ಸಭೆ ನಡೆಸುವ ನಿರೀಕ್ಷೆ ಇದೆ.ಈ ಸಭೆಯಲ್ಲಿನ ಒಟ್ಟಾರೆ ಅಭಿಪ್ರಾಯ ಆಧರಿಸಿ, ರಾಹುಲ್ ಗಾಂಧಿಯನ್ನು ಮತ್ತೆ ಅಧ್ಯಕ್ಷರನ್ನಾಗಿ ಮಾಡುವ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.ಇನ್ನೊಂದೆಡೆ ಪತ್ರಬರೆದಿರುವ ಹಿರಿಯ ನಾಯಕರು ಅಧ್ಯಕ್ಷರ ಆಯ್ಕೆಯು ಚುನಾವಣೆ ಮೂಲಕ ಆಗಬೇಕು ಎನ್ನುವ ತಮ್ಮ ನಿರ್ಧಾರಕ್ಕೆ ಗಂಟು ಬಿದ್ದಿದ್ದಾರೆ.ಹಾಗೂ ಪಕ್ಷದ ನಾಯಕರ ನಡುವೆ ನಿರಂತರ ಮಾತುಕತೆಗಳು ಸಂವಹನ ಇರಬೇಕು. ಜತೆಗೆ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲೇಬೇಕು ಎಂದು ಮತ್ತೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.