ನವದೆಹಲಿ: ವಿಚ್ಛೇದನ ಪ್ರಕರಣವೊಂದರ ವಿಚಾರಣೆ ವೇಳೆ ಪತಿಯೊಬ್ಬರ ವಿರುದ್ಧ ಕಿಡಿ ಕಾರಿದ ಸುಪ್ರೀಂಕೋರ್ಟ್, ನೀವು ಹೇಳಿದಂತೆ ಪತ್ನಿ ನಿಮ್ಮ ಜತೆ ಇರಬೇಕು ಎಂದು ಷರತ್ತು ವಿಧಿಸಲು ಪತ್ನಿಯೇನು ಗುಲಾಮಳೆ ಎಂದು ಪ್ರಶ್ನಿಸಿದೆ.
ಹೆಂಡತಿ ತನ್ನ ಗಂಡನ ಗುಲಾಮಳಲ್ಲ. ಆಕೆ ಗಂಡನ ಜತೆಗೆ ವಾಸಿಸಲೇಬೇಕು ಎಂದು ಬಲವಂತ ಮಾಡುವುದು ಸರಿಯಲ್ಲ. ಆಕೆಗೆ ಇಷ್ಟವಿಲ್ಲವಿದ್ದರೆ ಅವಳನ್ನು ಬಲವಂತ ಮಾಡಬೇಡಬಾರದು ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿದೆ.
ಪತಿಯಿಂದ ಜೀವನಾಂಶ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಗಿದೆ. ಪತಿಯಿಂದ ಪ್ರತ್ಯೇಕವಾಗಿದ್ದ ಮಹಿಳೆ ಜೀವನಾಂಶ ಕೋರಿ 2015ರಲ್ಲಿ ಗೋರಖ್‌ಪುರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಪತ್ನಿಗೆ ಪ್ರತಿ ತಿಂಗಳು 20 ಸಾವಿರ ರೂ ನೀಡಲು ಆದೇಶಿಸಿತ್ತು. ಈ ಆದೇಶದಂತೆ ಜೀವನಾಂಶ ನೀಡುವ ಬದಲು ಆಕೆಯ ಗಂಡ, ಪತ್ನಿ ತನ್ನ ಜತೆ ವಾಸಿಸಲು ವಾಪಸ್ ಬರಬೇಕು ಎಂದು ಮತ್ತೊಂದು ಅರ್ಜಿ ಸಲ್ಲಿಸಿದ್ದ.
ಆದರೆ ಅಲ್ಲಿ ಅರ್ಜಿಯನ್ನು ವಜಾ ಮಾಡಲಾಗಿತ್ತು. ನಂತರ ಆತ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ. ತನ್ನ ಪತ್ನಿಯನ್ನು ತಾನು ವಾಪಸ್ ಪಡೆದುಕೊಳ್ಳಲು ರೆಡಿ ಇರುವಾಗ ಜೀವನಾಂಶವೆಲ್ಲಾ ಏಕೆ ಕೊಡಬೇಕು ಎನ್ನುವುದು ಆತನ ಪ್ರಶ್ನೆಯಾಗಿತ್ತು. ಆದರೆ ಕೋರ್ಟ್ ಈ ಅರ್ಜಿಯನ್ನು ಮಾನ್ಯ ಮಾಡಿರಲಿಲ್ಲ.
ಅಷ್ಟಕ್ಕೆ ಸುಮ್ಮನಾಗದ ಪತಿ, ಸುಪ್ರೀಂಕೋರ್ಟ್ಗೆ ವಿಶೇಷ ಮೇಲ್ಮನವಿ ಸಲ್ಲಿಸಿದ್ದ. ಜೀವನಾಂಶ ಪಾವತಿಸುವುದನ್ನು ತಪ್ಪಿಸುವುದು ಗಂಡ ಈ ರೀತಿ ಅರ್ಜಿ ಸಲ್ಲಿಸುತ್ತಿರುವ ಬಗ್ಗೆ ಮಹಿಳೆಯ ಪರ ವಕೀಲರು ವಾದಿಸಿದರು. ಗಂಡನ ಕ್ರಮ ನ್ಯಾಯಮೂರ್ತಿಗಳ ಅಕ್ರೋಶಕ್ಕೆ ಕಾರಣವಾಯಿತು. ಪತ್ನಿಗೆ ಜೀವನಾಂಶ ಕೊಡುವುದನ್ನು ಬಿಟ್ಟು ಈ ರೀತಿ ಹೇಳಲು ಹೆಣ್ಣು ಗುಲಾಮಳೆ ಅಥವಾ ಆಕೆ ನಿಮ್ಮ ಆಸ್ತಿಯೇ? ನೀವು ಯೋಚಿಸುತ್ತಿರುವುದಾದರು ಏನು? ಎಂದು ಪ್ರಶ್ನಿಸಿದೆ. ಮೇಲ್ಮನವಿಯನ್ನು ವಜಾ ಮಾಡಿದ ಕೋರ್ಟ್, ಜೀವನಾಂಶವನ್ನು ನೀಡುವಂತೆ ಆದೇಶಿಸಿದೆ.