ನಿತ್ಯ ವಾಣಿ , ಚಿತ್ರದುರ್ಗ, (ಮೇ. 26) : ಕೊರೋನಾ ಸೋಂಕಿತರು ಮನೆಗಳಲ್ಲಿ ಉಳಿದುಕೊಳ್ಳದೆ ಕೋವಿಡ್ ಸೆಂಟರ್‍ಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗುವಂತೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಪಿಳ್ಳೆಕೆರನಹಳ್ಳಿಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ವೈದ್ಯರ ನಡೆ ಹಳ್ಳಿ ಕಡೆ ಕೋವಿಡ್-19 ವಿರುದ್ದ ಜನಜಾಗೃತಿ ಅಭಿಯಾನದಲ್ಲಿ ಮನೆ ಮನೆಗೆ ತೆರಳಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಎರಡನೆ ಹಂತದ ಅಲೆ ಜಾಸ್ತಿಯಾಗುತ್ತಿರುವುದರಿಂದ ವೈದ್ಯರು ಗ್ರಾಮಗಳಿಗೆ ಆಗಮಿಸಿ ಗಂಟಲು ಮೂಗಿನ ದ್ರವ ಪರೀಕ್ಷೆ ನಡೆಸುತ್ತಾರೆ. ಕೊರೋನಾ ಸೋಂಕಿತರು ಮನೆಯಲ್ಲಿ ಇದ್ದುಕೊಂಡು ಇಡಿ ಕುಟುಂಬಕ್ಕೆ ಹರಡುವ ಬದಲು ಕೋವಿಡ್ ಕೇರ್ ಸೆಂಟರ್‍ಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ. ಲಾಕ್‍ಡೌನ್ ಇರುವುದರಿಂದ ಅನಗತ್ಯವಾಗಿ ಯಾರು ಹೊರಗಡೆ ತಿರುಗಾಡಬಾರದು. ಸುರಕ್ಷಿತವಾಗಿ ಮನೆಯಲ್ಲಿದ್ದುಕೊಂಡು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಕೊರೋನಾ ನಿರ್ಮೂಲನೆಗೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಕೊರೋನಾ ಸೋಂಕಿತರ ಸಂಖ್ಯೆ ಜಾಸ್ತಿಯಾದರೆ ಆಕ್ಸಿಜನ್ ಬೆಡ್‍ಗೆ ಸಮಸ್ಯೆಯಾಗುತ್ತದೆ. ಹಾಗಾಗಿ ಪ್ರಾಥಮಿಕ ಹಂತದಲ್ಲಿಯೇ ಹುಷಾರಾಗಿ ಚಿಕಿತ್ಸೆ ಪಡೆದುಕೊಂಡಾಗ ಮಾತ್ರ ಕೋವಿಡ್ ನಿಯಂತ್ರಣ ಸಾಧ್ಯ. ಅನಾವಶ್ಯಕವಾಗಿ ಬೈಕ್ ಮತ್ತು ವಾಹನಗಳಲ್ಲಿ ತಿರುಗಾಡುವವರಿಗೆ ದಂಡ ವಿಧಿಸಿ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಿ ಎಂದು ಪೊಲೀಸರಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನಂದಿನಿದೇವಿ ಮಾತನಾಡಿ ಕೊರೋನಾ ಪಾಸಿಟಿವ್ ವರದಿ ಬಂದಿದೆ ಎಂದು ಯಾರು ಮುಜುಗರಕ್ಕೆ ಒಳಗಾಗುವುದು ಬೇಡ. ಅದಕ್ಕೆ ಬದಲಾಗಿ ಕೋವಿಡ್ ಕೇರ್ ಸೆಂಟರ್‍ಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ. ಕಡ್ಡಾಯವಾಗಿ ಗ್ರಾಮದಲ್ಲಿ ಎಲ್ಲರೂ ಮಾಸ್ಕ್‍ಗಳನ್ನು ಧರಿಸಿ, ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಮುಂಜಾಗ್ರತೆಯಿಂದಿರುವುದು ಬಹಳ ಮುಖ್ಯ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಹ ಕೊರೋನಾ ನಿಯಂತ್ರಣಕ್ಕೆ ಶ್ರಮಿಸುತ್ತಿವೆ. ವೈದ್ಯರು ಹಳ್ಳಿಗಳಿಗೆ ಬಂದು ಕೊರೋನಾ ತಪಾಸಣೆ ನಡೆಸುತ್ತಾರೆ. ಗ್ರಾಮಸ್ಥರು ಇದರ ಪ್ರಯೋಜನ ಪಡೆದುಕೊಂಡು ಕೊರೋನಾ ಮುಕ್ತ ಗ್ರಾಮವನ್ನಾಗಿ ಮಾಡುವಂತೆ ವಿನಂತಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕಾ ಮಾತನಾಡಿ ಕೋವಿಡ್ ಎರಡನೆ ಹಂತದ ಅಲೆ ನಗರಕ್ಕಿಂತ ಹೆಚ್ಚು ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬುತ್ತಿದೆ. ಅದಕ್ಕಾಗಿ ವೈದ್ಯರ ನಡೆ ಹಳ್ಳಿ ಕಡೆ ಅಭಿಯಾನ ಆರಂಭಗೊಂಡಿದ್ದು, ಮನೆ ಮನೆಗೆ ವೈದ್ಯರು ಬಂದು ತಪಾಸಣೆ ನಡೆಸಲಿದ್ದಾರೆ. ಲಾಕ್‍ಡೌನ್ ಜಾರಿಯಲ್ಲಿದೆ. ವಿನಾಕಾರಣ ವಾಹನಗಳಲ್ಲಿ ಹೊರಗೆ ತಿರುಗಾಡುವವರನ್ನು ತಡೆದು ವಿಚಾರಣೆ ನಡೆಸಿ ದಂಡ ವಿಧಿಸಲಾಗುತ್ತಿದೆ. ಎಲ್ಲರೂ ಮನೆಯಲ್ಲಿಯೇ ಸುರಕ್ಷಿತವಾಗಿದ್ದುಕೊಂಡು ಕೊರೋನಾ ಓಡಿಸಿ ಎಂದು ಗ್ರಾಮಸ್ಥರಿಗೆ ತಿಳಿಸಿದರು.
ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಾಲಾಕ್ಷ, ತಾಲ್ಲೂಕು ವೈದ್ಯಾಧಿಕಾರಿ ಡಾ.ಗಿರೀಶ್, ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ರಂಗನಾಥ್, ಮದಕರಿಪುರ ಗ್ರಾಮ ಪಂಚಾಯಿತಿ ಪಿಡಿಓ.ಸುಷ್ಮರಾಣಿ, ಮದಕರಿಪುರ ಗ್ರಾಮ ಪಂಚಾಯಿತಿ ಕೋವಿಡ್ ಜಾಗೃತಿ ಟಾಸ್ಕ್‍ಫೋರ್ಸ್ ನೋಡಲ್ ಅಧಿಕಾರಿ ವೈ.ಶಶಿಕುಮಾರ್, ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಮದಕರಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ಹಾಗೂ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.