ನಿತ್ಯವಾಣಿ,ಚಿತ್ರದುರ್ಗ,(ಮೇ.28) : ನಿತ್ಯವಾಣಿ ವಿಶೇಷ ಸಂದರ್ಶನ
ಡಾಕ್ಟರ್ ನವೀನ್ ಬಿ. ಸಜ್ಜನ್ , ಅಮೃತ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತುಆಸ್ಪತ್ರೆ ಚಿತ್ರದುರ್ಗ ಇವರಿಂದ ಕೊರೊನಾದ ಸಂಕ್ಷೀಪ್ತ ವರದಿ
ಕೊರೊನಾ ನಮ್ಮನ್ನು ಕಾಡಲು ಶುರುವಾಗಿ ಒಂದೂವರೆ ವರ್ಷ ಆಗಿಹೋಗಿದೆ. ಸದ್ಯದ ಮಟ್ಟಿಗೆ ಪರಿಸ್ಥಿತಿ ನಿರಾಶದಾಯಕವಾಗಿ ಕಾಣುತ್ತಿದೆಯಾದರೂ ವೈರಾಣುವಿನ ಬಗ್ಗೆ ಅನೇಕ ವಿಚಾರಗಳನ್ನು ವೈದ್ಯಲೋಕ ಅರ್ಥ ಮಾಡಿಕೊಂಡಿದೆ ಹಾಗೂ ಕೊವಿಡ್- 19 ಜನರನ್ನು ಹೇಗೆ ಸತಾಯಿಸುತ್ತದೆ ಎನ್ನುವುದು ಗೊತ್ತಾಗಿದೆ ಎನ್ನುವುದು ಸಮಾದಾನಕರ. ಎಲ್ಲಕ್ಕಿಂತ ಮಿಗಿಲಾಗಿ ಈಗಾಗಲೇ ಕೊರೊನಾಕ್ಕೆ ಬೇರೆ ಬೇರೆ ಬಗೆಯ ಲಸಿಕೆಯನ್ನೂ ಕಂಡುಹಿಡಿದಾಗಿದೆ. ಇಷ್ಟಾದರೂ ಈಗ ಎರಡನೇ ಅಲೆ ವ್ಯಾಪಿಸುತ್ತಿರುವ ಹೊತ್ತಿನಲ್ಲಿ ಕೊರೊನಾ ಸೋಂಕಿನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕೆಂದರೆ ಅದು ನಮ್ಮ ದೇಹದಲ್ಲಿ ಹೇಗೆ ವರ್ತಿಸುತ್ತದೆ ಎನ್ನುವ ಬಗ್ಗೆ ಅರಿತುಕೊಳ್ಳುವುದು ಮುಖ್ಯ.
ಕೊರೊನಾ ವೈರಸ್ ಸೋಂಕು ಎಂದರೇನು.
ಕೊರೊನಾ ವೈರಸ್ ಎಂದರೆ ಸಾಮಾನ್ಯ ವೈರಸ್ಗಳ ಒಂದು ಗುಂಪು. ವೈರಸ್ಗಳ ಮೇಲ್ಮೈಯಲ್ಲಿ ಕಿರೀಟದಂತಹ ವಿನ್ಯಾಸವಿರುವ ಕಾರಣದಿಂದಾಗಿ ಹೀಗೆ ಹೆಸರಿಡಲಾಗಿದೆ. ಕೆಲವು ಕೊರೊನಾ ವೈರಸ್ ಕೇವಲ ಪ್ರಾಣಿಗಳ ಮೇಲೆ ಮಾತ್ರ ಪರಿಣಾಮ ಬೀರುವುದು. ಇನ್ನು ಕೆಲವು ವೈರಸ್ಗಳು ಮನುಷ್ಯರ ಮೇಲೆ ಕೂಡ ಪರಿಣಾಮ ಬೀರುವುದು.
ಕೊರೊನಾ ವೈರಸ್ನ ಕೆಲವು ಲಕ್ಷಣಗಳು ಯಾವುವು.
ಕೊರೊನಾ ವೈರಸ್ ಯಾವ ರೀತಿಯದ್ದು ಮತ್ತು ಸೋಂಕು ಎಷ್ಟು ಗಂಭೀರವಾಗಿದೆ ಎನ್ನುವುದರ ಮೇಲೆ ಇದರ ಲಕ್ಷಣವು ಅವಲಂಬಿಸಿದೆ. ಶೀತದಂತಹ ಶ್ವಾಸಕೋಶದ ಮೇಲ್ಬಾಗದ ಸೋಂಕಿಗೆ ಒಳಗಾಗಿದ್ದರೆ ಆಗ ನಿಮ್ಮಲ್ಲಿ ಈ ರೀತಿಯ ಕೆಲವು ಲಕ್ಷಣಗಳೂ ಕಾಣಿಸಿಕೊಳ್ಳುವುದು, ಮೂಗು ಸೋರುವುದು, ತಲೆನೋವು, ಕೆಮ್ಮು, ಗಂಟಲು ನೋವು, ಜ್ವರ, ಸಂಪೂರ್ಣವಾಗಿ ಅನಾರೋಗ್ಯ.
ದೇಹ ಪ್ರವೇಶಿಸಿದ ನಂತರ ಐದು ದಿನಗಳಲ್ಲಿ ಪರಿಣಾಮ ಬೀರುತ್ತದೆ ಈ ವೈರಾಣು.
ಈ ವೈರಾಣು ನಮ್ಮ ದೇಹವನ್ನು ಪ್ರವೇಶಿಸಿದ ನಂತರ ಪರಿಣಾಮ ಬೀರಲು ಹಾಗೂ ಮೊದಲ ಗುಣಲಕ್ಷಣಗಳು ಕಾಣಿಸಿಕೊಳ್ಳಲು ಸರಾಸರಿ ಐದು ದಿನಗಳನ್ನು ತೆಗೆದುಕೊಳ್ಳುತ್ತದೆ. ಕೆಲವು ಪ್ರಕರಣಗಳಲ್ಲಿ ಒಂದೆರೆಡು ದಿನಗಳು ಹೆಚ್ಚೂಕಡಿಮೆಯೂ ಆಗಬಹುದು. ಕಳೆದ ಬಾರಿ ಕೊರೊನಾ ಶುರುವಾದಾಗ ಜನರಿಗೆ ದೇಹದಲ್ಲಿ ಒಂಚೂರು ಏರುಪೇರಾದರೂ ಇದಕ್ಕೆ ಏನು ಕಾರಣ ಎಂದು ತಿಳಿಯಲು ಅವಕಾಶವಿತ್ತು. ಇಂತಹ ದಿನ ಈ ಕಾರ್ಯಕ್ರಮಕ್ಕೆ ಹೋಗಿದ್ದೆ, ಆಸ್ಪತ್ರೆಗೆ ಹೋಗಿದ್ದೆ, ಇನ್ನೆಲ್ಲೋ ಜನ ಸೇರುವಲ್ಲಿಗೆ ತೆರಳಿದ್ದೆ ಎಂದು ಹೇಳುತ್ತಿದ್ದರು. ಆದರೆ, ಈ ಎರಡನೇ ಅಲೆಯಲ್ಲಿ ಸಮಸ್ಯೆಯ ಮೂಲ ಯಾವುದು, ಎಲ್ಲಿಂದ ಬಂತು ಎಂದು ಕಂಡುಹಿಡಿಯುವುದುದೇ ಅಸಾಧ್ಯ ಎನ್ನುವಂತಾಗಿದೆ. ಹೀಗಾದಾಗ ನಮ್ಮಲ್ಲಿ ವೈರಾಣು ದೇಹ ಪ್ರವೇಶಿಸಿ ಕಾರ್ಯಾರಂಭಿಸಲು ಶುರುಮಾಡಿದ್ದು ಯಾವಾಗ ಎನ್ನುವುದನ್ನು ನಿಖರವಾಗಿ ಹೇಳುವುದು ಕಷ್ಟ. ಒಂದುವೇಳೆ ಇದು ಗೊತ್ತಾಗದಿದ್ದರೂ ನಮ್ಮಲ್ಲಿ ಅದು ಮೊದಲು ಪರಿಣಾಮ ಬೀರಲಾರಂಭಿಸಿದ್ದು ಯಾವಾಗ ಎನ್ನುವುದನ್ನು ಗೊತ್ತುಮಾಡಿಕೊಳ್ಳಬೇಕು. ಗಂಟಲು ಉರಿ, ಕಿರಿಕಿರಿ, ಕಫ, ಮೈಕೈ ನೋವು, ತಲೆನೋವು ಅಥವಾ ಕೆಲವೊಮ್ಮೆ ಬೇಧಿ ಹೀಗೆ ಇವುಗಳಲ್ಲಿ ಯಾವುದೇ ಕಾಣಿಸಿಕೊಂಡರೂ ಅದನ್ನು ಗಣನೆಗೆ ತೆಗೆದುಕೊಳ್ಳಬೇಕು.
ಆದರೆ, ಬಹುತೇಕರು ತಪ್ಪು ಮಾಡುವುದೇ ಇಲ್ಲಿ. ಆರೋಗ್ಯದಲ್ಲಿ ಏರುಪೇರಾದರೂ ಆ ಲಕ್ಷಣವನ್ನು ಅವರು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಯಾವಾಗ ಅದು ತೀವ್ರ ಮಟ್ಟದಲ್ಲಿ ಕಾಡಲಾರಂಭಿಸುತ್ತದೋ ಆಗ ಎಚ್ಚೆತ್ತುಕೊಳ್ಳುತ್ತಾರೆ. ಅಷ್ಟಾದ ನಂತರ ಅವರಿಗೆ ಅನಾರೋಗ್ಯದ ಮೊದಲ ಲಕ್ಷಣ ಯಾವಾಗ ಕಾಣಿಸಿಕೊಂಡಿದ್ದು ಎಂದು ಗಮನದಲ್ಲೇ ಇರುವುದಿಲ್ಲವಾದ್ದರಿಂದ ನಿಖರವಾಗಿ ಹೇಳುವುದು ಸಾಧ್ಯವಾಗುವುದಿಲ್ಲ. ಹೀಗಾದಾಗ ಸಮಸ್ಯೆಯನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ನೆಪಿರಲಿ, ಈ ವಿಚಾರದಲ್ಲಿ ಅನಾರೋಗ್ಯಕ್ಕೀಡಾದ ಬಗ್ಗೆ ಹೇಳುವಾಗ ಒಂದೆರೆಡು ದಿನ ಹೆಚ್ಚುಕಮ್ಮಿಯಾದರೂ ಹೊರಗಡೆ ಆರಾಮಾಗಿದ್ದು ಗುಣಮುಖರಾಗಬಹುದಾದ ನೀವು ಐಸಿಯು ಸೇರುವ ಸ್ಥಿತಿ ಎದುರಾಗಬಹುದು.
ಕೊರೊನಾ ದೇಹದಲ್ಲಿ ಪರಿಣಾಮ ಬೀರಲಾರಂಭಿಸಿ ಗಂಟಲು ಉರಿ, ಗಂಟಲು ನೋವು, ಕಫಾ, ಜ್ವರ, ಮೈಕೈನೋವು ಇತ್ಯಾದಿ ಲಕ್ಷಣಗಳನ್ನು ತೋರ್ಪಡಿಸಲಾರಂಭಿಸಿ ಎರಡು ಮೂರು ದಿನಗಳ ತನಕ ಕೊಂಚ ಸುಧಾರಿಸಿದಂತೆ ಕಾಣಬಹುದು. ಅಂದರೆ ಮೊದಲ ದಿನ ಸ್ವಲ್ಪ ಜಾಸ್ತಿಯಿದ್ದ ಜ್ವರ, ಎರಡು, ಮೂರನೇ ದಿನವೂ ಹಾಗೆಯೇ ಇದ್ದು ನಾಲ್ಕನೇ ದಿನಕ್ಕೆ ಇಳಿಮುಖವಾಗುವ ಸಾಧ್ಯತೆ ಇರುತ್ತದೆ. ಆಗ ದೇಹದ ಬಿಸಿ ತಗ್ಗಿ ಸಾಮಾನ್ಯ ಉಷ್ಣಾಂಶದ ಮಟ್ಟಕ್ಕೆ ಬರಬಹುದು. ಶೇ.80ರಷ್ಟು ಪ್ರಕರಣಗಳಲ್ಲಿ ಕೊರೊನಾ ವೈರಾಣುವಿನ ಅಂತಿಮ ಘಟ್ಟವೇ ಇದು ಎಂದು ಹೇಳಬಹುದು. ಹೀಗಾಗಿ ಮೂರ್ನಾಲ್ಕು ದಿನಗಳ ನಂತರ ಜನ ಗುಣಮುಖರಾದಂತಾಗಿ ಮೊದಲಿನಂತೆ ಓಡಾಡಲು ಆರಂಭಿಸುತ್ತಾರೆ. ಆದರೆ, ಇದೇ ಹಂತದಲ್ಲಿ ಕಾಯಿಲೆ ಶೇ.15ರಿಂದ ಶೇ.20ರಷ್ಟು ಪ್ರಮಾಣದಲ್ಲಿ ಅಪಾಯಕಾರಿ ತಿರುವನ್ನು ತೆಗೆದುಕೊಂಡುಬಿಡುತ್ತದೆ.
ಕೊರೋನ ದೂರ ಮಾಡಲು ಅನಸರಿಸಬೇಕಾದ ಕ್ರಮಗಳು
- ಸರ್ಕಾರವು ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಗಳನ್ನು ಪಾಲಿಸುತ್ತಿದ್ದು, ಸ್ವಾಸ್ಥ್ಯ ಸೇವೆಗಳ ಪ್ರತಿಯೊಂದು ಸ್ತರವನ್ನೂ ಈ ಗುರಿಯತ್ತ ನಿರ್ದೇಶಿಸಿದೆ.
- ಸೋಂಕಿನ ಸಂಖ್ಯೆಯನ್ನು ಪ್ರತಿದಿನವೂ ಗಣಿಸುವ ಆರೋಗ್ಯ ಮಂತ್ರಾಲಯವು, ವೈದ್ಯರುಗಳು ಹಾಗೂ ಆಸ್ಪತ್ರೆಗಳಿಗೆ ರೋಗಿಗಳನ್ನು ಪ್ರತ್ಯೇಕಿಸಿಟ್ಟು ಚಿಕಿತ್ಸೆ ನೀಡುವ ಬಗ್ಗೆ ಸೂಚನೆಗಳನ್ನು ನೀಡುತ್ತಿದೆ.
- ಈ ಸೋಂಕು ತಗುಲಿರುವ ದೇಶಗಳ ಜನರು, ನಮ್ಮ ದೇಶವನ್ನು ಪ್ರವೇಶಿಸದಂತೆ ಅವರ ವೀಸಾಗಳನ್ನು ರದ್ದು ಪಡಿಸಲಾಗಿದೆ.
- ಸೋಂಕು ಇರಬಹುದು ಎನ್ನುವ ಗುಮಾನಿ ಇರುವವರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ.
- ಹಲವಾರು ಸ್ಥಳಗಳಲ್ಲಿ ಪ್ರತ್ಯೇಕ ಚಿಕಿತ್ಸೆಯ ವ್ಯವಸ್ಥೆಗಳನ್ನು ಸಿದ್ಧಪಡಿಸಲಾಗಿದೆ.
- ತಮಗೆ ಸೋಂಕು ಇರಬಹುದು ಎಂಬ ಸಂದೇಹ ಇರುವ ಯಾರಾದರೂ ಅದನ್ನು ಪರೀಕ್ಷಿಸಿಕೊಳ್ಳುವ ವ್ಯವಸ್ಥೆ ಮಾಡಿದೆ.
- ಕ್ವಾರಂಟೈನ್ ನಲ್ಲಿ ನಿಮ್ಮನ್ನು ಸರಕಾರ ಸಿದ್ಧಪಡಿಸಿರುವ ಕೋಣೆಯಲ್ಲಿ ನಿರ್ಬಂದಿಸಿ ಇಡಲಾಗುತ್ತದೆ. ಇದರಿಂದ ಬೇರೆಯವರಿಗೆ ನಿಮ್ಮಿಂದ ಸೋಂಕು ಹರಡುವುದು ಸಂಪೂರ್ಣ ಕಡಿಮೆ ಆಗುತ್ತದೆ
- ಉಳಿದಂತೆ ಈ ಸೋಂಕು ತಗುಲಿರುವುದು ಖಚಿತವಾಗಿರುವ ಅಂದರೆ ಪಾಸಿಟಿವ್ ಆಗಿರುವ ಯಾವದೇ ವ್ಯಕ್ತಿಯ ಜೊತೆಗೆ ನೀವು ಸಂಪರ್ಕದಲ್ಲಿದ್ದಿರೆಂಬ ಅನುಮಾನವಿದ್ದಾಗ, ನಿಮ್ಮನ್ನು ಸ್ವಯಂ-ದಿಗ್ಬಂಧನ ವಿಧಿಸಿಕೊಳ್ಳಲು ಸಲಹೆ ನೀಡುವರು.
- ರೋಗ ಲಕ್ಷಣಗಳು ಕಂಡಾಗ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು.
- ಸಾರ್ವಜನಿಕರು, ಮುಂಜಾಗ್ರತಾ ಕ್ರಮವಾಗಿ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವುದು ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ “ಸಂಶಮನಿವಟಿ, ಆಯುಷ್ ಕ್ವಾಥ ಚೂರ್ಣ, ಆಯುಷ್-64 ಹಾಗೂ ಆರ್ಕ್ ಈ ಅಜೀಬ್” ಎಂಬ ರೋಗನಿರೋಧಕ ಶಕ್ತಿ ಉಳ್ಳ ಆಯುಷ್ ಔಷಧಿಗಳನ್ನು ಸಾರ್ವಜನಿಕರಿಗೆ ವಿತರಿಸಲು ಜಿಲ್ಲಾ ಆಯುಷ್ ಇಲಾಖೆ ಮುಂದಾಗಿದೆ.ಇದರ ಸದುಪಯೋಗ ಪಡೆದುಕೊಂಡು ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ.
ಲಸಿಕೆಯ ಬಗ್ಗೆ ಜನಸಾಮಾನ್ಯರಲ್ಲಿ ಇರುವ ಗೊಂದಲಗಳು.
ಪ್ರಸ್ತುತ ದಿನಗಳಲ್ಲಿ ಇಡೀ ದೇಶ ಮತ್ತು ರಾಜ್ಯಗಳು ಕೋವಿಡ್-19 ಕರೋನ ಸಾಂಕ್ರಾಮಿಕ ರೋಗದಿಂದ ತತ್ತರಿಸಿ ಆರ್ಥಿಕ ಪರಿಸ್ಥಿತಿಯನ್ನು ಮತ್ತು ಜನಸಾಮಾನ್ಯರ ಜೀವನ ಸ್ಥಿತಿಯನ್ನು ದುಸ್ಥಿತಿಗೆ ತಂದಿದೆ. ಇಂತಹ ಸನ್ನಿವೇಶದಲ್ಲಿ ಈ ಮಹಾಮಾರಿಯ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯಿಂದ ಅನುಮೋದಿತ ದೇಶೀಯ ಲಸಿಕೆ ಗಳಾದ ಕೋ-ವ್ಯಾಕ್ಸಿನ್ ಮತ್ತು ಕೋವಿ ಶಿಲ್ಡ್ ಬಿಡುಗಡೆ ಮಾಡಿದ್ದು, ಕೇಂದ್ರ ಮತ್ತು ರಾಜ್ಯಗಳ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ನಡೆಸುತ್ತಿರುವ ಈ ಸಂದರ್ಭದಲ್ಲಿ ದೇಶದ ಪ್ರಜೆಗಳಾದ ನಾವು, ಸರ್ಕಾರದ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಎಲ್ಲರೂ ಸಹ ಲಸಿಕೆಯನ್ನು ಪಡೆದು ಈ ಮಹಾಮಾರಿ ನಿಯಂತ್ರಣ ಮಾಡುವುದು ನಮ್ಮ ನಿಮ್ಮೆಲ್ಲರ ಆಧ್ಯಾ ಕರ್ತವ್ಯವಾಗಿದೆ.
45ರಿಂದ 59ರ ವಯಸ್ಸಿನ ವ್ಯಕ್ತಿಗಳಿಗೆ ಗಂಭೀರ ಆರೋಗ್ಯ ಸಮಸ್ಯೆಗಳಾದ ಹೃದಯ ಸಂಬಂಧಿ ಕಾಯಿಲೆ, ರಕ್ತದೊತ್ತಡ, ಮಧುಮೇಹ, ಪಾರ್ಶ್ವವಾಯು, ಕಿಡ್ನಿ, ಲಿವರ್, ಕ್ಯಾನ್ಸರ್ ಕಾಯಿಲೆ ಹಾಗೂ ಎಚ್ಐವಿ ಸೋಂಕಿತರು ಹಾಗೂ ಈ ಕಾಯಿಲೆಗಳಿಂದ ಬಳಲುತ್ತಿರುವವರು ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ,
ಲಸಿಕೆಯನ್ನು ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳು, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಹಾಗೂ ಎಲ್ಲಾ ನಗರ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ 250 ರೂಗಳನ್ನು ಪಾವತಿಸಿ ಪಡೆಯಬಹುದಾಗಿದೆ.
ಭಾರತದ ಹೆಮ್ಮೆಯ ವಿಜ್ಞಾನಿಗಳು ಹೈದರಾಬಾದ್ ನ ಭಾರತ್ ಬಯೋಟೆಕ್ ಹಾಗೂ ಆಕ್ಸ್ಫರ್ಡ್ ಯುನಿವರ್ಸಿಟಿ ಮತ್ತು ಆಸ್ಟ್ರಾಝೆನೆಕಾ ಸಂಸ್ಥೆಗಳು ಕಂಡುಹಿಡಿದಿರುವ ಸಧ್ಯ ಭಾರತದಲ್ಲಿ ಬಳಕೆಯಲ್ಲಿರುವ ಕೊ ವ್ಯಾಕ್ಸಿನ್, ಕೋವಿ ಶಿಲ್ಡ್ ಲಸಿಕೆಗಳು ಯಾವುದೇ ಅಡ್ಡಪರಿಣಾಮ ಇಲ್ಲದೆ ಸಂಪೂರ್ಣ ಸುರಕ್ಷಿತವಾಗಿದ್ದು ಸಾರ್ವಜನಿಕರು ಲಸಿಕೆಯನ್ನು ಎರಡು ಬಾರಿ ಪಡೆಯುವುದರ ಮೂಲಕ ಕೊವಿಡ್ 19 ಎರಡನೇ ಅಲೆಯನ್ನು ಯಶಸ್ವಿಯಾಗಿ ತಡೆಯಬಹದು.
ಡಾಕ್ಟರ್ ನವೀನ್ ಬಿ. ಸಜ್ಜನ್. ಅಮೃತ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ , ಚಿತ್ರದುರ್ಗ, ಮೊ-8971002744