ನಿತ್ಯವಾಣಿ,ಚಿತ್ರದುರ್ಗ,( ಮೇ.29): ಕೊರೋನಾ ಸೋಂಕಿತರ ಮನವೊಲಿಸಿ ಕೋವಿಡ್ ಕೇರ್ ಸೆಂಟರ್‍ಗೆ ಕರೆತರುವ ಕೆಲಸ ಮಾಡಿ. ಹೋಂ ಕ್ವಾರೆಂಟೈನ್‍ನಲ್ಲಿರುವವರ ಮೇಲೆ ನಿಗಾ ಇಡುವಂತೆ ಗ್ರಾಮ ಪಂಚಾಯಿತಿ ಮಟ್ಟದ ನೋಡಲ್ ಅಧಿಕಾರಿಗಳಿಗೆ ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ನೋಡಲ್ ಅಧಿಕಾರಿಗಳಿಗೆ ಶನಿವಾರ ನಡೆದ ಕೋವಿಡ್-19 ಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕೊರೋನಾ ಸೋಂಕಿತರು ಮನೆಯಲ್ಲಿಯೇ ಇರಲು ಪ್ರತ್ಯೇಕ ಕೋಣೆ, ಶೌಚಾಲಯ, ವಾಷ್‍ಬೇಸನ್ ಇದ್ದರೆ ಅವಕಾಶ ಕೊಡಿ. ಅಂತಹವರಿಗೆ ಸ್ಟಿಕರ್ ಅಂಟಿಸಿ ಮತ್ತೊಬ್ಬರಿಗೆ ಹರಡಲು ಬಿಡಬೇಡಿ. ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು, ಪಿಡಿಓ, ಬಿಲ್ ಕಲೆಕ್ಟರ್, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಎಲ್ಲರೂ ಒಟ್ಟಾಗಿ ಸೇರಿ ಟೀಮ್ ವರ್ಕ್ ಮಾಡಿದಾಗ ಮಾತ್ರ ಚಿತ್ರದುರ್ಗ ತಾಲ್ಲೂಕಿನಲ್ಲಿ ಕೊರೋನಾ ಸೋಂಕಿತರ ಪ್ರಮಾಣವನ್ನು ಕಡಿಮೆಯಾಗಿಸಲು ಸಾಧ್ಯ ಎಂದು ತಿಳಿಸಿದರು.ಚಿತ್ರದುರ್ಗ ತಾಲ್ಲೂಕಿನಲ್ಲಿ ಶೇ. ನಾಲ್ಕರಷ್ಟಿದ್ದ ಕೊರೋನಾ ಸೋಂಕಿತರ ಸಂಖ್ಯೆ ಈಗ ಶೇ.20 ಕ್ಕೇರಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಕೋವಿಡ್-19 ನಿಯಂತ್ರಣಕ್ಕೆ ಬರುವುದು ಕಷ್ಟ. ಒಬ್ಬ ಸೋಂಕಿತನಿಂದ ಹತ್ತು ಪ್ರಾಥಮಿಕ ಹಾಗೂ 20 ಸೆಕೆಂಡರಿ ಕಾಂಟ್ಯಾಕ್ಟ್‍ನ್ನು ಪತ್ತೆ ಹಚ್ಚಲೇಬೇಕು. ಕಡ್ಡಾಯವಾಗಿ ಎಲ್ಲರಿಗೂ ತಪಾಸಣೆ ಮಾಡದಿದ್ದರೆ ಕೊರೋನಾ ಸೋಂಕಿತರ್ಯಾರು ಎನ್ನುವುದು ಹೇಗೆ ಗೊತ್ತಾಗುತ್ತದೆ. ಆಶಾ ಕಾರ್ಯಕರ್ತರುಗಳನ್ನು ಹಿಡಿದು ಮೆಡಿಕಲ್ ಕಿಟ್ ಕೊಡಿಸಿ. ಎಲ್ಲಾ ಕೈಮೀರಿ ಹೋದಾಗ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಬಂದರೆ ಏನು ಪ್ರಯೋಜನ? ಚಿತ್ರದುರ್ಗ ತಾಲ್ಲೂಕಿನಲ್ಲಿ ಸೋಂಕು ಜಾಸ್ತಿಯಾಗುತ್ತಿದೆ. ಅಂತಹ ಕಡೆ ಕಂಟೈನ್‍ಮೆಂಟ್ ಝೋನ್ ಮಾಡಿ. ಈಗಾಗಲೆ ಎರಡು ತಿಂಗಳ ರೇಷನ್ ಕೊಟ್ಟಿದ್ದೇವೆ. ತರಕಾರಿ ಗಾಡಿಯವರು ಮಾತ್ರ ಅಲ್ಲಿಗೆ ಹೋದರೆ ಖರೀಧಿಸಲಿ. ವಾಟ್ಸ್‍ಪ್ ಗ್ರೂಪ್ ಮಾಡಿಕೊಂಡು ದಿನನಿತ್ಯವೂ ನಮಗೆ ಮಾಹಿತಿ ಕೊಡಿ. ಗ್ರಾಮಗಳಲ್ಲಿ ಹೈಡ್ರೋಕ್ಲೋರೈಡ್ ಸಿಂಪಡಿಸಿ ಎಂದು ತಾಕೀತು ಮಾಡಿದರು.
ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಎಸ್.ಬಾಲಚಂದ್ರನಾಯ್ಕ್ ಮಾತನಾಡುತ್ತ ಚಿತ್ರದುರ್ಗ ತಾಲ್ಲೂಕಿನಲ್ಲಿ ಕೊರೋನಾ ನಿಗ್ರಹಕ್ಕಾಗಿ ರಚಿಸಿರುವ ಕಮಿಟಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಗ್ರಾಮ ಬೂತ್ ಮಟ್ಟದಲ್ಲಿ ನಿಗಾವಹಿಸಿ ಕೊರೋನಾ ಸೋಂಕಿತರನ್ನು ಪತ್ತೆ ಹಚ್ಚಬೇಕಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರೂಪ್ ಮಾಡಿಕೊಂಡು ಬೀದಿ ಬೀದಿಯಲ್ಲಿ ಸುತ್ತಾಡಿ ಗ್ರಾಮಸ್ಥರಲ್ಲಿ ಕೊರೋನಾ ವಿರುದ್ದ ಅರಿವು ಮೂಡಿಸಿ. ಎಲ್ಲರೂ ಮಾಸ್ಕ್ ಧರಿಸಿದ್ದಾರಾ ಎನ್ನುವುದನ್ನು ಗಮನಿಸಿ ಎಲ್ಲಾದರೂ ಗುಂಪು ಗುಂಪಾಗಿ ಜನ ಸೇರಿದ್ದರೆ ನನ್ನ ಗಮನಕ್ಕೆ ತನ್ನಿ. ಇಲ್ಲವೇ ಸಂಬಂಧಪಟ್ಟ ಪೊಲೀಸ್ ಠಾಣೆಗೆ ತಿಳಿಸಿ. ಮೈಮರೆತು ಕೂತರೆ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗುವುದಿಲ್ಲ ಎಂದು ನೋಡಲ್ ಅಧಿಕಾರಿಗಳಿಗೆ ಹೇಳಿದರು.
ಒಬ್ಬ ಕೊರೋನಾ ಸೋಂಕಿತನಿಂದ ಪ್ರೈಮರಿ, ಸೆಕೆಂಡರಿ ಕಾಂಟಾಕ್ಟ್ ಪತ್ತೆ ಹಚ್ಚಿ. ಪಾಸಿಟಿವ್ ಡೆತ್ ಸಂಖ್ಯೆಯನ್ನು ಕಡಿಮೆಗೊಳಿಸಿ. ಇದಕ್ಕೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾಹಿತಿಗೆ ತೆಗೆದುಕೊಂಡು ಟೀಂ ವರ್ಕ್ ಮಾಡಿ. ಪ್ರತಿದಿನ ಹನ್ನೆರಡು ಗಂಟೆಯೊಳಗೆ ಡಾಟಾ ಕೊಡಿ ಎಂದು ಸೂಚಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಗಿರೀಶ್ ಮಾತನಾಡಿ ಚಿತ್ರದುರ್ಗ ತಾಲ್ಲೂಕಿನ ಮಾನಂಗಿ, ಕಾಸವರಹಟ್ಟಿಯ ಲಂಬಾಣಿಹಟ್ಟಿಯನ್ನು ಕಂಟೈನ್‍ಮೆಂಟ್ ಝೋನ್ ಆಗಿ ಮಾಡಿ. ಬ್ಯಾರಿಕೇಡ್ ಹಾಕಲಾಗಿದೆ. ಹೊರಗಡೆಯಿಂದ ಯಾರು ಬರುವಂತಿಲ್ಲ. ಸಂಪೂರ್ಣ ಬ್ಲಾಕ್ ಮಾಡಿ ಕಟ್ಟೆಚ್ಚರ ವಹಿಸಲಾಗಿದೆ. ಆರೋಗ್ಯ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರ ಜೊತೆಗೂಡಿ ಹತ್ತು ದಿನಗಳ ಕಾಲ ಸರ್ವೆ ನಡೆಸಿ ಪಾಸಿಟಿವ್ ಇದ್ದವರನ್ನು ಕೋವಿಡ್ ಕೇರ್ ಸೆಂಟರ್‍ಗೆ ಕರೆತನ್ನಿ. ನೆಗೆಟಿವ್ ಇದ್ದವರಿಗೆ ಪೌಚ್, ಮಾತ್ರೆಗಳನ್ನು ನೀಡುತ್ತೇವೆ. ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್‍ನಲ್ಲಿ ಉಸ್ತುವಾರಿ ವಹಿಸಿ ದಿನಕ್ಕೆ ಎಷ್ಟು ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಕಡಿಮೆಯಾಗಿರುವುದೆಷ್ಟು ಎನ್ನುವ ಮಾಹಿತಿಯನ್ನು ಕಡ್ಡಾಯವಾಗಿ ಕೊಡಲೇಬೇಕೆಂದು ತಿಳಿಸಿದರು.
ಚಿತ್ರದುರ್ಗ ತಾಲ್ಲೂಕಿನಲ್ಲಿ ನಲವತ್ತೇಳು ಮಂದಿ ಸಾವನ್ನಪ್ಪಿದ್ದು, ಅದರಲ್ಲಿ ಕೋವಿಡ್‍ನಿಂದ ಸಾವಿಗೀಡಾಗಿರುವವರು ಕೇವಲ ಹದಿನೈದು ಮಾತ್ರ. ಉಳಿದ 32 ಮಂದಿ ಬೇರೆ ಬೇರೆ ಕಾರಣದಿಂದ ಸಾವನ್ನಪ್ಪಿದ್ದಾರೆ. ಕೋವಿಡ್ ಸೋಂಕಿತರನ್ನು ಏಳು ದಿನ ಕೋವಿಡ್ ಕೇರ್ ಸೆಂಟರ್‍ನಲ್ಲಿಡಬಹುದು. ಮತ್ತೆ ಏಳು ದಿನ ಮನೆಯಲ್ಲಿ ಕ್ವಾರೆಂಟೈನ್‍ನಲ್ಲಿರಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಬಿಗಿ ನಿಲುವು ತೆಗೆದುಕೊಳ್ಳಿ. ಇಲ್ಲದಿದ್ದರೆ ಕೊರೋನಾ ನಿಯಂತ್ರಣಕ್ಕೆ ಬರುವುದಿಲ್ಲ ಎಂದು ನೋಡಲ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ತಾಲ್ಲೂಕು ನೋಡಲ್ ಅಧಿಕಾರಿ ಕೃಷ್ಣಪ್ರಸಾದ್ ಒಬ್ಬೊಬ್ಬ ನೋಡಲ್ ಅಧಿಕಾರಿಗೆ ಐದರಿಂದ ಎಂಟು ಗ್ರಾಮಗಳು ಬರುತ್ತವೆ. ವಾಟ್ಸ್‍ಪ್ ಗ್ರೂಪ್ ಮಾಡಿಕೊಂಡು ಕೊರೋನಾ ಸೋಂಕಿತರ ಮಾಹಿತಿ ತೆಗೆದುಕೊಳ್ಳಿ. ಪರಸ್ಪರ ಮಾಹಿತಿ ಸಂಪರ್ಕವಿಲ್ಲದಿದ್ದರೆ ಕೊರೋನಾ ಓಡಿಸುವಲ್ಲಿ ಯಶಸ್ವಿಯಾಗುವುದು ಕಷ್ಟ. ದೇಶದಲ್ಲಿ ಕರ್ನಾಟಕ ರಾಜ್ಯ ನಾಲ್ಕನೆ ಸ್ಥಾನದಲ್ಲಿದೆ. ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕಿನಲ್ಲಿ ಕೊರೋನಾ ಜಾಸ್ತಿಯಿದೆ. ಪಾಸಿಟಿವ್ ಕೇಸ್ ಬಂದರೆ ಅಂತಹವರನ್ನು ತುರ್ತಾಗಿ ಕೋವಿಡ್ ಕೇರ್ ಸೆಂಟರ್‍ಗೆ ಕರೆತನ್ನಿ. ಚುರುಕಾಗಿ ಕೆಲಸ ಮಾಡಿ ಕೊರೋನಾ ಗೆದ್ದರೆ ಯುದ್ದ ಗೆದ್ದಂತೆ ಎಂದು ಗ್ರಾಮ ಮಟ್ಟದ ನೋಡಲ್ ಅಧಿಕಾರಿಗಳನ್ನು ಎಚ್ಚರಿಸಿದರು.
ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹನುಮಂತಪ್ಪ ಸಭೆಯಲ್ಲಿ ಭಾಗವಹಿಸಿದ್ದರು.