ಚಿತ್ರದುರ್ಗ ನಗರದಲ್ಲಿ ಕೋವಿಡ್ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿನ ಶೇ.50 ರಷ್ಟು ಹಾಸಿಗೆಗಳನ್ನು ಸರ್ಕಾರದಿಂದಲೇ ಹಂಚಿಕೆ : ಸಚಿವ ಬಿ.ಶ್ರೀರಾಮುಲು

 ನಿತ್ಯವಾಣಿ, ಚಿತ್ರದುರ್ಗ,( ಮೇ.11) :  ಜಿಲ್ಲಾಧಿಕಾರಿ ಕಚೇರಿಯಲ್ಲಿ  ಆಯೋಜಿಸಿದ್ದ ಕೋವಿಡ್ ನಿರ್ವಹಣಾ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಮಾತನಾಡುತ್ತಾ,  ಕೆಪಿಎಂಎ ಕಾಯ್ದೆಯನ್ವಯ ವಿಪತ್ತಿನ ಸಂದರ್ಭದಲ್ಲಿ ಎಲ್ಲಾ ಖಾಸಗಿ ಆಸ್ಪತ್ರೆಗಳು ಶೇ.50 ರಷ್ಟು ಹಾಸಿಗೆಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕಾಗಿದ್ದು ಇದಕ್ಕೆ ಸರ್ಕಾರ ನಿರ್ಧಿಷ್ಟ ದರವನ್ನು ನೀಡಲಿದೆ. ಸರ್ಕಾರದಿಂದ ಮೀಸಲಿರಿಸಿದ ಸೀಟುಗಳಿಗೆ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಹಾಸಿಗೆಯನ್ನು ಹಂಚಿಕೆ ಮಾಡಲಿದೆ. ಇದರ ಪ್ರಯೋಜನ ಪಡೆಯಲು ಕೋವಿಡ್ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಬಂದಾಗ ಇಲ್ಲಿ ಹಾಸಿಗೆ ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಆಸ್ಪತ್ರೆಯಲ್ಲಿನ ಸರ್ಕಾರದ ಕೋಟಾದ ಬೆಡ್‍ಗಳಿಗೆ ಹಂಚಿಕೆ ಮಾಡಲಾಗುತ್ತದೆ. ಇದನ್ನು ಜಿಲ್ಲೆಯಲ್ಲಿ ಖುದ್ದಾಗಿ ಮೇಲ್ವಿಚಾರಣೆ ನಡೆಸುವ ಮೂಲಕ ಯಾರು ಸಹ ಬೆಡ್ ಇಲ್ಲ ಎಂದು ಸಂಕಷ್ಟವನ್ನು ಎದುರಿಸಬಾರದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 33 ಖಾಸಗಿ ಆಸ್ಪತ್ರೆಗಳಿದ್ದು ಇದರಲ್ಲಿ 1317 ಹಾಸಿಗೆ ಇರುತ್ತವೆ. ಇದರಲ್ಲಿ 658 ಹಾಸಿಗೆಗಳು ಲಭ್ಯವಾಗಲಿವೆ. ಈಗಾಗಲೇ 5 ಆಸ್ಪತ್ರೆಗಳನ್ನು ಗುರುತಿಸಿದ್ದು ಇನ್ನುಳಿದ ಆಸ್ಪತ್ರೆಗಳನ್ನು ಸಹ ಶೀಘ್ರ ಗುರುತಿಸಲಾಗುತ್ತದೆ. ಬಸವೇಶ್ವರ, ಬಸಪ್ಪ ಆಸ್ಪತ್ರೆ, ಅಕ್ಷಯ ಗ್ಲೋಬಲ್, ಚಿತ್ರದುರ್ಗ ಮಲ್ಟಿಸ್ಪೇಷಾಲಿಟಿ, ವಾಯುಪುತ್ರ ಆಸ್ಪತ್ರೆಗಳಲ್ಲಿ ಶೇ 50 ರಷ್ಟು 166 ಹಾಸಿಗೆಗಳನ್ನು ಮೀಸಲಿರಿಸಲಾಗಿದೆ ಎಂದರು.

Leave a Reply

Your email address will not be published.