ಮೊಳಕಾಲ್ಮೂರು ತಾಲೂಕಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ನೌಕರಿಗಾಗಿ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ

ನಿತ್ಯವಾಣಿ,ಮೊಳಕಾಲ್ಮೂರು,(ಜೂ.7) : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸತತ ಪ್ರಯತ್ನದ ಫಲವಾಗಿ ಇಂದು ಮೊಳಕಾಲ್ಮೂರು ತಾಲೂಕಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ನೌಕರಿಗಾಗಿ ಪ್ರತ್ಯೇಕವಾಗಿ ತೆಗೆದಿರುವ ಸುಸಜ್ಜಿತವಾದ ಕೋವಿಡ್ ಕೇರ್ ಸೆಂಟರ್ ಅನ್ನು ಚಿತ್ರದುರ್ಗ ಜಿಲ್ಲೆಯ ಸಂಸದರಾದ ವೈ.ನಾರಾಯಣಸ್ವಾಮಿ, ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಮಂಜುನಾಥ್ ಕೆ, ತಾಲೂಕು ದಂಡಾಧಿಕಾರಿಗಳಾದ ಸುರೇಶ್ ಕುಮಾರ್, ರವರು ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಮಾಡಿದರು.ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ ಕೆ ಮಾತನಾಡಿ ಕರೋನಾ ಕರ್ತವ್ಯದಲ್ಲಿ ನಿರತ ಮೃತರಾದ ಸರ್ಕಾರಿ ನೌಕರರ  ಕುಟುಂಬದ ಸದಸ್ಯರಿಗೆ ದುಖಃ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಎರೆಡು ನಿಮಿಷಗಳ ಮೌನಾಚರಣೆ ಮೂಲಕ ಪ್ರಾರ್ಥಿಸಿದರು. ನೌಕರರು ತಮ್ಮ ಹಾಗೂ ತಮ್ಮ ಕುಟುಂಬದ ರಕ್ಷಣೆ ಮಾಡಿಕೋಂಡು ಸರ್ಕಾರಿ ಯಂತ್ರದ ಭಾಗವಾದ ತಾವುಗಳು ಸರ್ಕಾರದ ಕೆಲಸ ನಿರ್ವಹಿಸುವಾಗ ಹಾಗೂ ಕರೋನಾ ನಿಯಂತ್ರಣ ಕೆಲಸದಲ್ಲಿ ಭಾಗಿಯಾದಾಗ ಅನಿವಾರ್ಯವಾಗಿ ಕರೋನಾ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಸಂಭವವಿರುತ್ತದೆ.ಅಂತಹ ಸಂದರ್ಭಗಳಲ್ಲಿ ಸರ್ಕಾರಿ ನೌಕರರಿಗೆ ಪ್ರತ್ಯೇಕವಾಗಿ ತೆಗೆದಿರುವ ಕೋವಿಡ್ ಕೇರ್ ಸೆಂಟರ್ ಗಳ ಸದುಪಯೋಗ ಪಡೆದುಕೊಂಡು ಆದಷ್ಟು ಬೇಗ ಗುಣಮುಖರಾಗಿ ತಮ್ಮ ಕರ್ತವ್ಯಗಳಿಗೆ ಹಾಜರಾಗಿ ಕರೋನಾ ನಿಯಂತ್ರಣ ಕಾರ್ಯದಲ್ಲಿ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ನಾ ಕೈಜೋಡಿಸುವಂತೆ  ಮನವಿ ಮಾಡಿದರು.

ಜಿಲ್ಲಾ ದಂಡಾಧಿಕಾರಿಗಳಾದ ಸುರೇಶ್ ಕುಮಾರ್ ರವರು ಮಾತನಾಡಿ ಸರ್ಕಾರಿ ನೌಕರಿಗಾಗಿ ಸ್ಥಾಪಿಸಿರುವ ಕೋವಿಡ್ ಕೇರ್ ಸೆಂಟರ್ ನ ಸದುಪಯೋಗ ಪಡೆದುಕೊಂಡು ಸರ್ಕಾರಿ ನೌಕರರು ತಾಲ್ಲೂಕು ಆಡಳಿತದೊಂದಿಗೆ ಕರೋನಾ ನಿಯಂತ್ರಣ ಕಾರ್ಯದಲ್ಲಿ ಕೈಜೋಡಿಸುವಂತೆ ಮನವಿ ಮಾಡಿದರು. ಹಾಗೂ ನಾನು ಕೂಡ ಸರ್ಕಾರಿ ನೌಕರನಾಗಿದ್ದು ಸರ್ಕಾರಿ ನೌಕರರ ಸಂಘದ ಒಟ್ಟಿಗೆ ಕೈಜೋಡಿಸಿ  ನೌಕರರ ಹಿತ ಕಾಪಾಡಲು ಬದ್ಧನಿದ್ದೇನೆ ಎಂದು ತಿಳಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಾರುತೇಶ್ ರವರು ಮಾತನಾಡಿ ಕರೋನಾ ನಿಯಂತ್ರಣ ಕಾರ್ಯದಲ್ಲಿ ಇಡೀ ಪ್ರಪಂಚದಲ್ಲಿ ಮೊದಲ ಸಾಲಿನಲ್ಲಿ ನಿಂತು ಕೆಲಸ ನಿರ್ವಹಿಸುತ್ತಿರುವವರು ನಮ್ಮ ಸರ್ಕಾರಿ ನೌಕರರು.  ಶಿಕ್ಷಕರನ್ನು ಕರೋನಾ ವಾರಿಯರ್ಸ್ ಗಳೆಂದು ಪರಿಗಣಿಸಿರುವುದು ಸ್ವಾಗತಾರ್ಹ ಆದರೆ ಕೋವಿಡ್ ಕರ್ತವ್ಯದಲ್ಲಿ ಮರಣಹೊಂದಿದ ಶಿಕ್ಷಕರಿಗೆ 30 ಲಕ್ಷಗಳ ಪರಿಹಾರ ನೀಡದೇ ಇರುವುದು ವಿಪರ್ಯಾಸ. ಆದರೂ ಕರೋನಾ ವಿಷಮ ಪರಿಸ್ಥಿತಿಯಲ್ಲಿ ಎದೆಗುಂದದೆ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ನೌಕರರು ಕೋವಿಡ್ ಕೇರ್ ಸೆಂಟರ್ ನ ಸದುಪಯೋಗ ಪಡೆದುಕೊಂಡು ಯೋಧರಂತೆ ಕೆಲಸ ನಿರ್ವಹಿಸಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಕೆ.ಟಿ ತಿಮ್ಮಾರೆಡ್ಡಿ ಖಜಾಂಚಿ ಗಳಾದ ವೀರೇಶ್, ಲೋಕೇಶ್ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಎಸ್. ವೀರಣ್ಣ  ಪ್ರಧಾನ ಕಾರ್ಯದರ್ಶಿಗಳಾದ ಮಲ್ಲೇಶಪ್ಪ ತಾಲೂಕು ವೈದ್ಯಾಧಿಕಾರಿಗಳಾದ ಸುಧಾ,  ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಚಿದಾನಂದಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷರಾದ ತಿಪ್ಪೇಸ್ವಾಮಿ ಜಿಲ್ಲಾ ಹಾಗೂ ತಾಲ್ಲೂಕು ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.         ಸುದ್ದಿಗಾಗಿ 👉  ನಿತ್ಯವಾಣಿ  ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020

Leave a Reply

Your email address will not be published.