ನಿತ್ಯವಾಣಿ,ಚಿತ್ರದುರ್ಗ, (ಜೂ. 12) : ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ರೋಗಕ್ಕೆ ಸಂಬಂಧಿಸಿದಂತೆ ನೀಡುತ್ತಿರುವ ಲಸಿಕೆ ಕಾರ್ಯಕ್ರಮವು ಇದುವರೆವಿಗೂ ಶೇ.92 ರಷ್ಟು ಪ್ರಗತಿಯನ್ನು ಸಾಧಿಸಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಂಟುಂಬ ಕಲ್ಯಾಣ ಅಧಿಕಾರಿ ಡಾ.ಪಾಲಾಕ್ಷ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಮೇದೇಹಳ್ಳಿ ರಸ್ತೆಯಲ್ಲಿನ ಅಗ್ನಿ ಶಾಮಕದಳ ಆವರಣದಲ್ಲಿ ಅಖಿಲ ಭಾರತೀಯ ವೀರಶೈವ ಸಮಾಜ ಜಿಲ್ಲಾ ಘಟಕ ಮತ್ತು ಬೇಡ ಜಂಗಮ ಸಮಾಜದವತಿಯಿಂದ ಹಮ್ಮಿಕೊಂಡಿದ್ದ ಲಸಿಕಾ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆವಿಗೂ ಸಾಧ್ಯವಾದಷ್ಟು ಜನರಿಗೆ ಲಸಿಕೆಯನ್ನು ವಿವಿಧೆಡೆಗಳಲ್ಲಿ ಶಿಬಿರಗಳನ್ನು ಮಾಡುವುದರ ಮೂಲಕ ನೀಡಲಾಗಿದೆ. 45ರ ಮೇಲ್ಪಟ್ಟ 4.80 ಲಕ್ಷ ಜನರಿಗೆ ಇದುವರೆವಿಗೂ ಶೇ.92 ರಷ್ಟು ಲಸಿಕೆಯನ್ನು ಹಾಕಲಾಗಿದೆ. 18ರ ನಂತರದವರಿಗೆ 1.8 ಲಕ್ಷ ಜನರಿಗೆ ನೀಡಲಾಗಿದೆ ಇದರಲ್ಲಿ 22 ಗ್ರೂಪ್ ಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ಲಸಿಕೆಯನ್ನು ಪಡೆಯಲು ಇನ್ನು ಕೆಲವು ಜನಾಂಗದವರು ಮುಂದೆ ಬಂದಿಲ್ಲ, ಲಸಿಕೆಯ ಬಗ್ಗೆ ಅಪನಂಬಿಕೆ ಇದೆ ಇದನ್ನು ಪರಿಹಾರ ಮಾಡುವುದಕ್ಕೆ ಅವರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಮಾಡಲಾಗುವುದು ಇದರೊಂದಿಗೆ ಜಿಲ್ಲಾಧಿಕಾರಿಗಳ ಜೊತೆಯಲ್ಲಿ ಮಾತನಾಡಿ ಆ ಜನಾಂಗದವರಿಗೂ ಸಹಾ ಲಸಿಕೆಯನ್ನು ಹಾಕುವುದಕ್ಕೆ ಪ್ರಯತ್ನ ಮಾಡಲಾಗುವುದು ಎಂದು ಪಾಲಾಕ್ಷ ತಿಳಿಸಿದರು.
ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ತಿಪ್ಪಾರೆಡ್ಡಿ ಮಾತನಾಡಿ ಲಸಿಕೆ ಎಲ್ಲರಿಗೂ ಸಹಾ ಲಭ್ಯವಾಗಲಿದೆ, ಯಾರೂ ಸಹಾ ಅವಸರ ಪಡುವುದು ಬೇಡ, ಈಗ 44 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತದೆ ಮುಂದಿನ ದಿನದಲ್ಲಿ 18ರ ನಂತರದವರಿಗೂ ಸಹಾ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ಲಸಿಕೆಯನ್ನು ಪಡೆಯುವುದನ್ನು ನಿಲ್ಲಿಸಬೇಡಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಸುರೇಶ್, ಮಲ್ಲಿಕಾರ್ಜನ್, ಜಂಗಮ ಸಮಾಜದ ಮಲ್ಲಿಕಾರ್ಜನಯ್ಯ, ಅ.ಭಾ.ವೀ.ಸಭಾದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ದಿವಾಕರ್, ರೋ.ಮಹೇಶ್, ರೋ.ವಿರೇಶ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಗಿರೀಶ್, ಗಂಗಾಧರ್, ಮುರುಳಿ ಸೇರಿದಂತೆ ಇತರರು ಭಾಗವಹಿಸಿದ್ದರು. ಸುದ್ದಿಗಾಗಿ, ಜಾಹೀರಾತಿಗಾಗಿ 👉 ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 www.nithyavaninews.com