ಜಿಲ್ಲೆಯಲ್ಲಿ ಮೊದಲ ಹಂತದ ಕೋವಿಡ್ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗೆ, ಖಾಸಗಿ ಆರೋಗ್ಯ ಇಲಾಖೆ ಸಿಬ್ಬಂದಿಗೆ, ಸಿಡಿಪಿಒ, ಮೇಲ್ವಿಚಾರಕರಿಗೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಕೋವಿಡ್ ವಿರುದ್ಧ ಲಸಿಕೆಯನ್ನು ಈಗಾಗಲೇ ಜನವರಿ 16ರಿಂದ ಆರಂಭ ಮಾಡಿದ್ದು, ಜನವರಿ 18ರಂದು 4826 ವಾರಿಯರ್‍ಗಳಿಗೆ ಲಸಿಕೆ ಹಾಕಲಾಗಿದೆ.
ಜ.18ರಂದು ಜಿಲ್ಲೆಯ 96 ಲಸಿಕಾ ಕೇಂದ್ರಗಳಲ್ಲಿ 6550 ಸಿಬ್ಬಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. 4826 ಮಂದಿಗೆ ಲಸಿಕೆ ಹಾಕುವ ಮೂಲಕ ಶೇ.73.68ರಷ್ಟು ಸಾಧನೆ ಮಾಡಲಾಗಿದೆ.
ತಾಲ್ಲೂಕುವಾರು ಲಸಿಕೆ ವಿವರ: ಚಿತ್ರದುರ್ಗ ತಾಲ್ಲೂಕಿನ 22 ಕೇಂದ್ರಗಳಲ್ಲಿ 1066 ಆರೋಗ್ಯ ಸಿಬ್ಬಂದಿಗೆ ಲಸಿಕೆ ಹಾಕಲಾಗಿದೆ. ಚಳ್ಳಕೆರೆ ತಾಲ್ಲೂಕಿನ 18 ಕೇಂದ್ರಗಳಲ್ಲಿ 826 ಸಿಬ್ಬಂದಿ, ಹಿರಿಯೂರು ತಾಲ್ಲೂಕಿನ 23 ಕೇಂದ್ರಗಳಲ್ಲಿ 1081 ಸಿಬ್ಬಂದಿ, ಹೊಳಲ್ಕೆರೆ ತಾಲ್ಲೂಕಿನ 15 ಕೇಂದ್ರಗಳಲ್ಲಿ 800 ಸಿಬ್ಬಂದಿಗೆ, ಹೊಸದುರ್ಗ ತಾಲ್ಲೂಕಿನ 12 ಕೇಂದ್ರಗಳಲ್ಲಿ 793 ಸಿಬ್ಬಂದಿಗೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನ 6 ಕೇಂದ್ರಗಳಲ್ಲಿ 260 ಆರೋಗ್ಯ ಸಿಬ್ಬಂದಿ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 4826 ಕೊರೊನಾ ವಾರಿಯರ್‍ಗಳಿಗೆ ಲಸಿಕೆ ಹಾಕಲಾಗಿದೆ.
ಲಸಿಕೆ ಪಡೆದ 17 ಜನರಿಗೆ 5 ನಿಮಿಷಗಳವರೆಗೆ ಸಣ್ಣ ಪ್ರಮಾಣದಲ್ಲಿ ವಾಂತಿ, ಮೈಕಡಿತ ಆಗಿದೆ. ಇದನ್ನು ಹೊರತುಪಡಿಸಿ, ಯಾವುದೇ ತರಹದ ಅಡ್ಡಪರಿಣಾಮವಾಗಿಲ್ಲ ಎಂದು ಕೋವಿಡ್ ವಾರ್ ರೂಂನ ನೋಡಲ್ ಅಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ್ ತಿಳಿಸಿದ್ದಾರೆ.