ಹೊಸದಿಲ್ಲಿ, : ರೈತರ ಬೇಡಿಕೆ ಸಮರ್ಥನೀಯವಾಗಿದ್ದು ಇದಕ್ಕೆ ಆಮ್ ಆದ್ಮಿ ಪಕ್ಷ ಹಾಗೂ ದಿಲ್ಲಿ ಸರಕಾರದ ಬೆಂಬಲ ಮುಂದುವರಿಯಲಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಅಲ್ಲದೆ ದಿಲ್ಲಿ ಗಡಿಭಾಗದಲ್ಲಿ ಪ್ರತಿಭಟನೆ ಮುಂದುವರಿಸಿರುವ ರೈತರಿಗೆ ನೀರು ಹಾಗೂ ಇತರ ವ್ಯವಸ್ಥೆಗಳನ್ನು ಒದಗಿಸಲಾಗುವುದು ಎಂದು ಕೇಜ್ರೀವಾಲ್ ಹೇಳಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್‌ರನ್ನು ಉದ್ದೇಶಿಸಿ ಟ್ವೀಟ್ ಮಾಡಿರುವ ಕೇಜ್ರೀವಾಲ್ ‘ನಾವು ರೈತರೊಂದಿಗಿದ್ದೇವೆ. ನಿಮ್ಮ ಬೇಡಿಕೆ ಸಮಂಜಸವಾಗಿದೆ. ರೈತರ ಚಳವಳಿಗೆ ಅಪಖ್ಯಾತಿ ತರುವುದು, ರೈತರನ್ನು ದೇಶದ್ರೋಹಿಗಳೆಂದು ಕರೆಯುವುದು ಸರಿಯಲ್ಲ’ ಎಂದಿದ್ದಾರೆ.
ಅಲ್ಲದೆ ದಿಲ್ಲಿ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭೇಟಿಯಾಗಿ ಅವರಿಗೆ ದಿಲ್ಲಿ ಸರಕಾರದ ಬೆಂಬಲ ಖಾತರಿಪಡಿಸುವಂತೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಗ್ರಾಮೀಣ ಅಭಿವೃದ್ಧಿ ಸಚಿವ ಸತ್ಯೇಂದ್ರ ಜೈನ್‌ರಿಗೆ ಸೂಚಿಸಿದ್ದಾರೆ ಎಂದು ಸರಕಾರದ ಮೂಲಗಳು ಹೇಳಿವೆ.