ನೋಬಾಲ್ ಎಸೆದು ಸೆಹ್ವಾಗ್​ಗೆ ಶತಕ ತಪ್ಪಿಸಿದ್ದ ಲಂಕಾ ಸ್ಪಿನ್ನರ್ ಈಗ ಬಸ್ ಡ್ರೈವರ್…!

ಕೊಲಂಬೊ: 2010ರಲ್ಲಿ ಶ್ರೀಲಂಕಾ ವಿರುದ್ಧ ಡಂಬುಲಾದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತ ತಂಡ 171 ರನ್ ಸವಾಲು ಬೆನ್ನಟ್ಟುತ್ತಿತ್ತು. ವೀರೇಂದ್ರ ಸೆಹ್ವಾಗ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಸುಲಭ ಗೆಲುವಿನತ್ತ ಮುನ್ನಡೆದಿತ್ತು. ಭಾರತ ತಂಡ 170 ರನ್ ಗಳಿಸಿ ಸ್ಕೋರ್ ಸಮಗೊಳಿಸಿದ್ದ ವೇಳೆ ಸೆಹ್ವಾಗ್ ಶತಕಕ್ಕೆ ಒಂದು ರನ್ ಅಗತ್ಯವಿತ್ತು. ಭಾರತದ ಗೆಲುವಿಗೂ ಒಂದು ರನ್ ಬೇಕಿತ್ತು. ಆಗ ಸೆಹ್ವಾಗ್ ಸಿಕ್ಸರ್ ಸಿಡಿಸಿದ್ದರು. ಆದರೆ ಲಂಕಾದ ಸ್ಪಿನ್ನರ್ ಸೂರಜ್ ರಣದಿವ್ ಆ ಎಸೆತವನ್ನು ನೋಬಾಲ್ ಮಾಡಿದ್ದರು. ಅದು ಸೆಹ್ವಾಗ್ ಶತಕವನ್ನು ತಪ್ಪಿಸಲು, ತಿಲಕರತ್ನೆ ದಿಲ್ಶಾನ್ ನೀಡಿದ ಸೂಚನೆಯಂತೆ ರಣದಿವ್ ಉದ್ದೇಶಪೂರ್ವಕವಾಗಿ ಎಸೆದಿದ್ದ ನೋಬಾಲ್ ಆಗಿತ್ತು. ಇದರಿಂದಾಗಿ ಐಸಿಸಿ ನಿಯಮ ಪ್ರಕಾರದಂತೆ, ಸೆಹ್ವಾಗ್ ಸಿಕ್ಸರ್ ಸಿಡಿಸಿದರೂ ಶತಕದ ಸಂಭ್ರಮ ಕಾಣದೆ 99 ರನ್‌ನೊಂದಿಗೆ ಅಜೇಯವಾಗಿ ಉಳಿದಿದ್ದರು. ಆ ಬೌಲರ್ ಸೂರಜ್ ರಣದಿವ್ ಈಗ ಏನು ಮಾಡುತ್ತಿದ್ದಾರೆ ಗೊತ್ತೇ? ಬಸ್ ಡ್ರೈವರ್!

ಹೌದು, ಸೂರಜ್ ರಣದಿವ್ ಈಗ ವೃತ್ತಿಪರ ಕ್ರಿಕೆಟಿಗರಾಗಿ ಉಳಿದಿಲ್ಲ. ಜೀವನ ನಿರ್ವಹಣೆಗಾಗಿ ಆಸ್ಟ್ರೇಲಿಯಾಕ್ಕೆ ತೆರಳಿ ಬಸ್ ಚಾಲಕರಾಗಿ ಹೊಸ ವೃತ್ತಿಜೀವನವನ್ನು ಕಂಡುಕೊಂಡಿದ್ದಾರೆ. ಆದರೆ ಕ್ರಿಕೆಟ್‌ನಿಂದ ಸಂಪೂರ್ಣ ದೂರವಾಗಿಲ್ಲ. ಆಸ್ಟ್ರೇಲಿಯಾದಲ್ಲಿ ಈಗಲೂ ಸ್ಥಳೀಯ ಕ್ರಿಕೆಟ್ ಪಂದ್ಯಗಳಲ್ಲಿ ಹವ್ಯಾಸಿ ಆಟಗಾರರಾಗಿ ಆಡುತ್ತಿರುತ್ತಾರೆ. ಇತ್ತೀಚೆಗೆ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದಾಗ, ಆತಿಥೇಯ ತಂಡದ ಸಿದ್ಧತೆಗೆ ನೆರವಾಗುವ ಸಲುವಾಗಿ ಅದರ ಆಹ್ವಾನದ ಮೇರೆಗೆ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದ್ದರು.2011ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತದೆದುರು ಸೋತು ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟ ಶ್ರೀಲಂಕಾ ತಂಡದಲ್ಲೂ ಇದ್ದ ಸೂರಜ್ ರಣದಿವ್, 2016ರಲ್ಲಿ ಲಂಕಾ ಪರ ಕೊನೆಯದಾಗಿ ಆಡಿದ್ದರು. ಲಂಕಾ ಪರ 12 ಟೆಸ್ಟ್, 31 ಏಕದಿನ ಮತ್ತು 7 ಟಿ20 ಪಂದ್ಯ ಆಡಿರುವ ರಣದಿವ್, ಕ್ರಮವಾಗಿ 43, 36 ಮತ್ತು 7 ವಿಕೆಟ್ ಕಬಳಿಸಿದ್ದಾರೆ. 2012ರಲ್ಲಿ ಐಪಿಎಲ್‌ನಲ್ಲೂ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಪ್ರತಿನಿಧಿಸಿರುವ ಸೂರಜ್ ರಣದಿವ್, 8 ಪಂದ್ಯ ಆಡಿ 6 ವಿಕೆಟ್ ಕಬಳಿಸಿದ್ದರು.ಸೂರಜ್ ರಣದಿವ್ ಈಗ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಫ್ರೆಂಚ್ ಮೂಲದ ಕಂಪನಿ ‘ಟ್ರಾನ್ಸ್‌ದೇವ್’ನಲ್ಲಿ ಬಸ್ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಂಪನಿಯ 1200 ಚಾಲಕರಲ್ಲಿ ಅವರೂ ಒಬ್ಬರಾಗಿದ್ದಾರೆ. ಜತೆಗೆ ವಿಕ್ಟೋರಿಯಾ ಪ್ರೀಮಿಯರ್ ಕ್ರಿಕೆಟ್‌ನಿಂದ ಮಾನ್ಯತೆ ಹೊಂದಿರುವ ಡಂಡೆಗಾಂಗ್ ಕ್ರಿಕೆಟ್ ಕ್ಲಬ್ ಪರ ಸ್ಥಳೀಯ ಕ್ರಿಕೆಟ್ ಟೂರ್ನಿಗಳಲ್ಲಿ ಆಡುತ್ತಾರೆ.

36 ವರ್ಷದ ಸೂರಜ್ ರಣದಿವ್ ಅವರೊಂದಿಗೆ, ಲಂಕಾ ಪರ 5 ಟಿ20 ಪಂದ್ಯಗಳನ್ನು ಆಡಿರುವ ಮತ್ತೋರ್ವ ಕ್ರಿಕೆಟಿಗ ನಮಸ್ತೆ ಚಿಂತಕ ಮತ್ತು ಜಿಂಬಾಬ್ವೆ ಪರ 1 ಟೆಸ್ಟ್, 3 ಟಿ20 ಪಂದ್ಯ ಆಡಿರುವ ವಡ್ಡಿಂಗ್ಟನ್ ಎಂವೆಂಗಾ ಕೂಡ ಆಸ್ಟ್ರೇಲಿಯಾದಲ್ಲಿ ಬಸ್ ಡ್ರೈವರ್ ಕೆಲಸ ನಿರ್ವಹಿಸುತ್ತ ಸ್ಥಳೀಯ ಕ್ರಿಕೆಟ್‌ನಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟಿಗರಾಗಿದ್ದಾರೆ. ಈ ಮೂಲಕ ಕ್ರಿಕೆಟ್ ಶ್ರೀಮಂತ ಆಟವೇ ಆಗಿದ್ದರೂ, ಕ್ರಿಕೆಟಿಗರೆಲ್ಲರೂ ಶ್ರೀಮಂತರಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

Leave a Reply

Your email address will not be published.