ಇಬ್ಬರು ಚೀನಿ ಪ್ರಜೆಗಳು ಪ್ರಮುಖ ರೂವಾರಿಗಳಾಗಿರುವ ಆನ್‌ಲೈನ್ ವಂಚನೆ ಜಾಲವನ್ನು ಪೊಲೀಸರು ಭೇದಿಸಿದ್ದು, ಈ ಸಂಬಂಧ ಮೂವರು ಭಾರತೀಯರನ್ನು ಬಂಧಿಸಿದ್ದಾರೆ. ಹೂಡಿಕೆಗೆ ಮೇಲೆ ಹೆಚ್ಚಿನ ಲಾಭದ ಆಮಿಷವೊಡ್ಡಿ ಸುಮಾರು 20 ಸಾವಿರ ಜನರಿಗೆ ₹ 50 ಕೋಟಿವರೆಗೂ ವಂಚಿಸಿರುವ ಆರೋಪವಿದೆ.
ಪ್ರಮುಖ ರೂವಾರಿಗಳಾದ ಚೀನಿ ಪ್ರಜೆಗಳು ತಲೆಮರೆಸಿಕೊಂಡಿದ್ದಾರೆ. ಇವರು ಹಾಗೂ ಬಂಧಿತ ಮೂವರು ಭಾರತೀಯರು, 90 ದಿನದಲ್ಲಿ 4 ರಿಂದ 5 ಪಟ್ಟು ಹೆಚ್ಚು ಲಾಭದ ಆಮಿಷವೊಡ್ಡಿ ಹೂಡಿಕೆ ಸೆಳೆಯುತ್ತಿದ್ದರು ಎಂದು ಸೈಬರಾಬಾದ್ ಪೊಲೀಸ್ ಕಮಿಷನರರ್ ವಿ.ಸಿ.ಸಜ್ಜನರ್ ಅವರು ತಿಳಿಸಿದ್ದಾರೆ.
ಠೇವಣಿದಾರರೊಬ್ಬರು ನೀಡಿದ ದೂರು ಆಧರಿಸಿ ಜಾಲದಲ್ಲಿ ಭಾಗಿಯಾಗಿದ್ದ ಮೂವರನ್ನು ಹರಿಯಾಣ ಮತ್ತು ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದರು.
ಇಬ್ಬರು ಚೀನಿಯರ ಪೈಕಿ ಒಬ್ಬಾತ ಎಂದಿಗೂ ಭಾರತಕ್ಕೆ ಭೇಟಿ ನೀಡಿಯೇ ಇಲ್ಲ. ಇನ್ನೊಬ್ಬ ಒಮ್ಮೆಯಷ್ಟೇ ಭೇಟಿ ನೀಡಿದ್ದ. ಇವರು ಭಾರತದ ಮೂವರ ಜೊತೆಗೂಡಿ ಆಯಪ್ ಅಭಿವೃದ್ಧಿಪಡಿಸಿದ್ದು, ಜನರಿಗೆ ವಂಚಿಸಲು ಆರಂಭಿಸಿದ್ದರು.
ಭಿನ್ನ ಅಡ್ಮಿನ್‌ಗಳಿದ್ದ ವಾಟ್ಸ್‌ಆಯಪ್ ಗ್ರೂಪ್‌ಗಳ ಮೂಲಕ ದೇಶದಾದ್ಯಂತ ಮೂರು ವಿವಿಧ ಯೋಜನೆಗಳಲ್ಲಿ ಹಣ ತೊಡಗಿಸಲು ಸೆಳೆಯುತ್ತಿದ್ದರು. ಯೋಜನೆಯ ಆಕರ್ಷಣೆಗೆ ಒಳಗಾಗುತ್ತಿದ್ದ ಜನರು ಹೂಡಿಕೆ ಮಾಡುತ್ತಿದ್ದು, ಫೋನ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ ಸೇರಿದಂತೆ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಂಡಿದ್ದರು.
ಒಮ್ಮೆ ಮಾಹಿತಿ ವಿನಿಮಯವಾದ ಕೂಡಲೇ ಆಯಪ್ ಕಾರ್ಯ ಸ್ಥಗಿತಗೊಳ್ಳುತ್ತಿತ್ತು. ವಿವಿಧ ಚೀನಾ ವೆಬ್‌ಸೈಟ್‌ಗಳ ಮೂಲಕ ನೋಂದಣಿ ಮಾಡಲಾಗಿದ್ದ ವಂಚಕರ ಕಂಪನಿ ಖಾತೆಗೆ ಹಣ ಜಮೆ ಆಗುತ್ತಿತ್ತು ಎಂದು ಪೊಲೀಸರು ವಿವರಣೆ ನೀಡಿದ್ದಾರೆ.