ದಿನ ಪತ್ರಿಕೆಗಳು ಸಮಾಜದ ಧ್ವನಿ: ಹೆಗ್ಗಳಗಿ

ವಿಜಯಪುರ: ಪತ್ರಿಕೆಗಳು ಸಮಾಜದ ಧ್ವನಿ ಇದ್ದಂತೆ. ಪತ್ರಿಕೆಯಲ್ಲಿ ಬರುವು ವರದಿಗಳು ಬಹು ಬೇಗನೆ ಓದುಗನನ್ನ ತಲುಪುವ ಮೂಲಕ ಪರಿಣಾಮವನ್ನು ಬೀರುತ್ತವೆ. ಹೀಗಾಗಿ ವರದಿಗಾರ ಪ್ರತಿಯೊಂದು ಸೂಕ್ಷ್ಮತೆಗಳನ್ನು ಅರಿತು ವರದಿ ಮಾಡಬೇಕು ಎಂದು ಮುಧೋಳದ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಹೆಗ್ಗಳಗಿ ಹೇಳಿದರು.

ಇಲ್ಲಿನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ‘ಗ್ರಾಮೀಣ ಅಭಿವೃದ್ಧಿ ವರದಿಗಾರಿಕೆಯ ಸವಾಲುಗಳು’ ಕುರಿತು ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತರು ಸಮಾಜದಲ್ಲಿರುವ ತಪ್ಪನ್ನು ಸೂಕ್ಷ್ಮ ಸಂವೇದನೆಯಿಂದ ತಿಳಿಸಿದಾಗ ಮಾತ್ರ ಸಮಾಜದ ಅಭಿವೃದ್ಧಿ, ಗ್ರಾಮಗಳ ಪ್ರಗತಿ ಸಾಧ್ಯ ಎಂದರು.

ಸಮಾಜದಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಲು ವೈಜ್ಞಾನಿಕ ಮನೋಭಾವನೆ ಅತ್ಯವಶ್ಯ. ವರದಿಗಾರರು ವೈಜ್ಞಾನಿಕ ಮನೋಭಾವನೆಯಿಂದ ವರದಿ ಮಾಡುವಾಗ ಮೂಢನಂಬಿಕೆಗಳ ವಿರುದ್ಧ ಹೋರಾಡಬೇಕು ಅಂದಾಗ ಮಾತ್ರ ಸಮಾಜದ ಸುಧಾರಣೆ ಸಾಧ್ಯ ಎಂದು ಹೇಳಿದರು.

ಪತ್ರಕರ್ತರೂ ಜನರ ಸಮಸ್ಯೆಗಳ ಬಗ್ಗೆ, ಅವರ ಜೀವನಶೈಲಿಯ ಬಗ್ಗೆ ಬರೆಯುವಾಗ ಅವರ ತೊಂದರೆಯಾಗದಂತೆ, ನೋವಾಗದಂತೆ ವರದಿ ಮಾಡಬೇಕು. ವರದಿಗಾರ ಯಾವಾಗಲು ಸಮಾಜವೇ ನನ್ನ ಮನೆ ಎಂದು ತಿಳಿದುಕೊಂಡು ಬರೆಯಬೇಕು ಎಂದರು.

ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಮಾತನಾಡಿ, ನಾವು ಕಷ್ಟ ಪಟ್ಟಾಗಲೇ ಅತ್ಯುತ್ತಮ ಫಲ ಸಿಗಲು ಸಾಧ್ಯ. ಯಾವುದೂ ಸಹ ಸರಳವಾಗಿ ಸಿಗಲು ಸಾಧ್ಯವಿಲ್ಲ ಎಂದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ತಹಮೀನಾ ಕೋಲಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗದ ವಿದ್ಯಾರ್ಥಿನಿ ಅರ್ಚನಾ ಸೂರ್ಯವಂಶಿ, ಶುಭಲಕ್ಷ್ಮಿ ಹೊಸಮನಿ, ವಿನುತಾ ಹವಾಲ್ದಾರ, ಮಾಯಾ ಹೊಸಟ್ಟಿ ಇದ್ದರು.

Leave a Reply

Your email address will not be published.