ನಿತ್ಯವಾಣಿ, ಹೊಳಲ್ಕೆರೆ,(ಡಿ.24) : ಚಿತ್ರದುರ್ಗ ಜಿಲ್ಲಾ ಅಧಿಕಾರಿಗಳಾದ ಕವಿತ ಎಸ್ ಮನ್ನಿಕೇರಿ ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕಿಗೆ ಆಗಮಿಸಿ ಹೊಳಲ್ಕೆರೆ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಪುರಸಭಾ ಕಾರ್ಯಾಲಯ ಕಟ್ಟಡ, ನೂತನ ಮಿನಿ ವಿಧಾನ ಸೌಧ, ನಿರ್ಮಿತಿ ಕೇಂದ್ರರವರಿಂದ ನಿರ್ಮಾಣವಾಗುತ್ತಿರುವ ರಂಗಮಂದಿರ, ಹೊಳಲ್ಕೆರೆ ಪಟ್ಟಣದ ಗಣಪತಿ ರಸ್ತೆ ಹಿಂಭಾಗದಲ್ಲಿ ನಿರ್ಮಾಣ ಆಗುತ್ತಿರುವ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ ವೀಕ್ಷಣೆ ಮಾಡಿ ಕಾಮಗಾರಿ ಪರಿಶೀಲನೆ ನಡೆಸಿದರು.
ಬಳಿಕ ಅರೇಹಳ್ಳಿ ಗ್ರಾಮ ಪಂಚಾಯಿತಿ ಭಾಗದ ಸಂಖ್ಯೆ 202 ಮತಗಟ್ಟೆಯಲ್ಲಿ ಮತದಾರರ ಪಟ್ಟಿಗಳ ಪರಿಷ್ಕರಣೆ ಮತ್ತು ಲಿಂಗತ್ವ ಅನುಪಾತದ ಬಗ್ಗೆ ದೀರ್ಘ ಕಾಲ ಸಭೆ ನಡೆಸಿ ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಂದ ಮಾಹಿತಿ ಪಡೆದು ಮರಣ, ಸ್ಥಳಾಂತರ, ಪುನರಾವರ್ತನೆಯಾಗಿರುವ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಕೈಬಿಡಲು ನಿರ್ದೇಶನ ನೀಡಿದರು. ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ಯುವ ಮತದಾರರಿಗೆ ಕರೆ ನೀಡಿದರು.
ತದನಂತರ ಮಲ್ಲಾಡಿಹಳ್ಳಿ ಆಶ್ರಮಕ್ಕೆ ಭೇಟಿ ನೀಡಿ, ಆಶ್ರಮದ ವಿದ್ಯಾರ್ಥಿಗಳೊಂದಿಗೆ ಬಿಸಿಯೂಟ ಮಾಡಿ ವಿದ್ಯಾರ್ಥಿಗಳೊಟ್ಟಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಹೊಳಲ್ಕೆರೆ ಪುರಸಭೆ ಮುಖ್ಯಾಧಿಕಾರಿ ಶ್ರೀ ಎ ವಾಸಿಂ ಹಾಗೂ ಪುರಸಭಾ ಸಿಬ್ಬಂದಿಗಳು, ತಾಲ್ಲೂಕು ಕಛೇರಿ ನೌಕರರುಗಳಾದ ಶ್ರೀ ಸನಾವುಲ್ಲಾ, ಶ್ರೀ ಹರೀಶ್, ಹೊಳಲ್ಕೆರೆ ಪುರಸಭೆ ಉಪಾಧ್ಯಕ್ಷರಾದ ಶ್ರೀ ಕೆ ಸಿ ರಮೇಶ್ ಮತ್ತು ಸದಸ್ಯರಾದ ಶ್ರೀ ಎಲ್ ವಿಜಯಸಿಂಹ ಖಾಟ್ರೋತ್ ಉಪಸ್ಥಿತರಿದ್ದರು.