ಚಿತ್ರದುರ್ಗ, : ಸಾರ್ವಜನಿಕರ ಅಹವಾಲು ಮತ್ತು ಬೇಡಿಕೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವ ನಿಟ್ಟಿನಲ್ಲಿ ಇದೇ ಫೆಬ್ರವರಿ 20ರ ಮೂರನೇ ಶನಿವಾರ ಕಂದಾಯ ಅಧಿಕಾರಿಗಳು ಹಾಗೂ ಇತರೆ ಇಲಾಖಾ ಅಧಿಕಾರಿಗಳ ಗ್ರಾಮ ವಾಸ್ತವ್ಯ ಆರಂಭಗೊಳ್ಳಲಿದ್ದು, ಮೊಳಕಾಲ್ಮುರು ತಾಲ್ಲೂಕಿನ ಕಣಕುಪ್ಪೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ವಾಸ್ತವ್ಯ ಮಾಡಲಿದ್ದಾರೆ.
ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಇತರೆ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಜಿಲ್ಲೆಯಲ್ಲಿ ಫೆಬ್ರುವರಿ 20ರಿಂದ ಅನುಷ್ಠಾನಗೊಳ್ಳಲಿದೆ. ಜಿಲ್ಲಾಧಿಕಾರಿಯವರು ಗ್ರಾಮ ವಾಸ್ತವ್ಯ ಮಾಡಲಿರುವ ಮೊಳಕಾಲ್ಮುರು ತಾಲ್ಲೂಕಿನ ಕಣಕುಪ್ಪೆ ಗ್ರಾಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು.
ಅಧಿಕಾರಿಗಳು ಬೆಳಗ್ಗೆ 9.30 ರಿಂದ ಗ್ರಾಮದಲ್ಲಿ ಉಪಸ್ಥಿತರಿರಲಿದ್ದಾರೆ. ಎಲ್ಲಾ ತಾಲ್ಲೂಕುಗಳಲ್ಲಿ ಆಯಾ ತಹಶೀಲ್ದಾರರು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮ ವಾಸ್ತವ್ಯ ಮಾಡಲಿರುವ ಗ್ರಾಮಗಳಿಗೆ ಭೇಟಿ ನೀಡಿ ಅಹವಾಲು ಸ್ವೀಕರಿಸಿ ವಾಸ್ತವ್ಯ ಹೂಡಲಿದ್ದಾರೆ. ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.
ಪ್ರಮುಖವಾಗಿ ಜಿಲ್ಲಾಧಿಕಾರಿಗಳು, ಭೂದಾಖಲೆಗಳ ಉಪನಿರ್ದೇಶಕರು, ಭೂದಾಖಲೆಗಳ ಸಹಾಯಕ ನಿರ್ದೇಶಕರು ಪ್ರತಿ ತಿಂಗಳು 3ನೇ ಶನಿವಾರದಂದು ಉಪವಿಭಾಗ ಮಟ್ಟದ ಸಹಾಯಕ ಆಯುಕ್ತರು, ಸಂಬಂಧಪಟ್ಟ ತಹಶೀಲ್ದಾರರು, ಕಂದಾಯ ನಿರೀಕ್ಷಕರು ಮತ್ತು ಗ್ರಾಮಲೆಕ್ಕಿಗರೊಂದಿಗೆ ಗ್ರಾಮಗಳಿಗೆ ಭೇಟಿ ನೀಡುವುದು ಹಾಗೂ ಹಳ್ಳಿ ವಾಸ್ತವ್ಯ ಮಾಡಲು ಸೂಚಿಸಲಾಗಿದೆ.
ಜಿಲ್ಲಾಧಿಕಾರಿಗಳು ಯಾವ ತಾಲ್ಲೂಕಿಗೆ ಭೇಟಿ ನೀಡುತ್ತಾರೋ ಆ ತಾಲ್ಲೂಕಿನ ತಹಶೀಲ್ದಾರರನ್ನು ಹೊರತುಪಡಿಸಿ, ಉಳಿತ ತಾಲ್ಲೂಕು ತಹಶೀಲ್ದಾರರು ತಮ್ಮ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಪ್ರತಿ ತಿಂಗಳು 3ನೇ ಶನಿವಾರದಂದು ಭೇಟಿ ನೀಡಿ ವಾಸ್ತವ್ಯ ಮಾಡಲು ತಿಳಿಸಲಾಗಿದೆ.