ಹುಲಿಗೆ ಇಬ್ಬರು ಬಲಿ; ಶಾಲಾ-ಕಾಲೇಜುಗಳಿಗೆ 2 ದಿನ ರಜೆ

ಕೊಡಗು: ಕೊಡಗು ಜಿಲ್ಲೆಯಲ್ಲಿ ಇಬ್ಬರನ್ನು ಹುಲಿ ಸಾಯಿಸಿ 2 ದಿನಗಳಿಂದ ಉಂಟಾಗಿರುವ ಆತಂಕ ಇಂದು ಒಂದು ಹುಲಿಯನ್ನು ಸೆರೆ ಹಿಡಿಯುವುದರೊಂದಿಗೆ ನಿವಾರಣೆಯಾಗಿದ್ದರೂ, ಇದೀಗ ಮತ್ತೊಮ್ಮೆ ಅದೇ ಆತಂಕ ಧುತ್ತೆಂದು ಎದುರಾಗಿದೆ. ಏಕೆಂದರೆ ಇಂದು ಸೆರೆ ಹಿಡಿಯಲಾಗಿರುವ ಹುಲಿ ಮನುಷ್ಯರನ್ನು ಸಾಯಿಸಿರುವ ಹುಲಿಯಲ್ಲ ಎನ್ನಲಾಗಿದೆ. ಜತೆಗೆ ಇನ್ನಷ್ಟು ಹುಲಿಗಳಿರುವ ಶಂಕೆ ವ್ಯಕ್ತವಾಗಿರುವುದರಿಂದ ಹುಲಿ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ.

ಶನಿವಾರ ರಾತ್ರಿ ಬಾಲಕನೊಬ್ಬನನ್ನು ಕೊಂದಿದ್ದ ವ್ಯಾಘ್ರ, ಇಂದು ಬೆಳ್ಳಂಬೆಳಗ್ಗೆ ವೃದ್ಧೆಯೊಬ್ಬರ ಮೇಲೂ ದಾಳಿ ಮಾಡಿ ಕೊಂದು ಹಾಕಿದೆ. ಪೊನ್ನಂಪೇಟೆ ತಾಲೂಕಿನ ಕುಮತೂರು ಗ್ರಾಮ ಬಾಲಕ ಅಯ್ಯಪ್ಪ (14) ಮತ್ತು ಟಿ.ಶೆಟ್ಟಿಗೇರಿ ಗ್ರಾಮದ ಕಾರ್ಮಿಕ ಮಹಿಳೆ ಚಿಣ್ಣಿ (60) ಹುಲಿ ದಾಳಿಯಿಂದ ಮೃತಪಟ್ಟ ದುರ್ದೈವಿಗಳು. ಹೀಗಾಗಿ ದಾಳಿ ನಡೆಸಿದ್ದ ಹುಲಿಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಪರಿಣಾಮವಾಗಿ ಇಂದು ಮಧ್ಯಾಹ್ನ ಹುಲಿಯೊಂದು ಪತ್ತೆಯಾಗಿದ್ದು, ಅದಕ್ಕೆ ಅರಿವಳಿಕೆ ಮದ್ದನ್ನು ಸಿಡಿಸಿ ಸೆರೆ ಹಿಡಿಯಲಾಗಿತ್ತು.

ಇಂದು ಸೆರೆ ಸಿಕ್ಕಿರುವ ಹುಲಿಯ ಮುಂದಿನ ಒಂದು ಕಾಲಿಗೆ ಗಾಯವಾಗಿ ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ. ಅದೇ ಕಾರಣಕ್ಕೆ ಆಹಾರ ಕಂಡುಕೊಳ್ಳಲು ಆಗದೆ ನಿತ್ರಾಣಗೊಂಡಿತ್ತು. ಇಂದು ವೃದ್ಧೆಯ ಸಾವಿನ ಕೆಲವೇ ಹೊತ್ತಿನಲ್ಲಿ ಈ ಹುಲಿ ಪತ್ತೆಯಾಗಿ ಸೆರೆ ಹಿಡಿಯಲಾಗಿತ್ತು. ಆದರೆ ಇಬ್ಬರನ್ನು ಸಾಯಿಸಿರುವ ಹುಲಿ ಇದಲ್ಲ ಎಂಬ ಶಂಕೆ ಮೂಡಿದೆ.

ಈ ಹುಲಿಯಲ್ಲದೆ ಇನ್ನೂ ಬೇರೆ ಹುಲಿಗಳಿರುವ ಶಂಕೆ ಮೂಡಿರುವ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ನಾಳೆಯೂ ಹುಲಿ ಪತ್ತೆ ಹಾಗೂ ಸೆರೆ ಕಾರ್ಯಾಚರಣೆ ಮುಂದುವರಿಸಲಿದ್ದಾರೆ. ಪೊನ್ನಂಪೇಟೆಯ ಟಿ.ಶೆಟ್ಟಿಗೇರಿ, ಕುಮಟೂರು ಭಾಗದಲ್ಲಿ ಕೂಂಬಿಂಗ್ ನಡೆಯಲಿದೆ. ಅಲ್ಲದೆ ಶ್ರೀಮಂಗಲ ಹೋಬಳಿಯ ಶಾಲಾ-ಕಾಲೇಜುಗಳಿಗೆ ಫೆ.22, 23ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಹೊರಡಿಸಿದ್ದಾರೆ.

 

 

Leave a Reply

Your email address will not be published.