ಮಂಗಳೂರು : ಭಾನುವಾರ ಮದುವೆಯಾಗಿ ಸೋಮವಾರ ಗಂಡನ ಜೊತೆ ಇದ್ದ ಮದುಮಗಳು ಸಾವನ್ನಪ್ಪಿದ ಘಟನೆ ನಗರದ ಅಡ್ಯಾರ್ ನಲ್ಲಿ ಮಾ.1 ರ ಸೋಮವಾರ ಮುಂಜಾನೆ ನಡೆದಿದೆ.
ಮೃತ ನವವಿವಾಹಿತೆಯನ್ನು ಅಡ್ಯಾರ್ ಕಣ್ಣೂರು ಸಮೀಪದ ಬೀರ್ಪುಗುಡ್ಡೆ ಜಮಾಅತ್ ಅಧ್ಯಕ್ಷ ಕೆಎಚ್‌ಕೆ ಅಬ್ದುಲ್ ಕರೀಂ ಹಾಜಿ ಎಂಬವರ ಪುತ್ರಿ ಲೈಲಾ ಆಫಿಯಾ(23) ಎಂದು ಗುರುತಿಸಲಾಗಿದೆ.
ದಾಂಪತ್ಯ ಜೀವನ ಪ್ರವೇಶಿಸಿ ಕೆಲ ಗಂಟೆಗಳೇ ಕಳೆಯುವ ಮುಂಚೆಯೇ ಮದುಮಗಳು ಮೃತಪಪಟ್ಟಿದ್ದಾರೆ.
ಆಫಿಯಾ ಅವರ ವಿವಾಹವೂ ಭಾನುವಾರ ಕಣ್ಣೂರಿನ ಯುವಕ ಮುಬಾರಕ್ ಎಂಬವರೊಂದಿಗೆ ಅಡ್ಯಾರ್ ಕಣ್ಣೂರು ಜುಮಾ ಮಸೀದಿಯಲ್ಲಿ ನೆರವೇರಿತ್ತು. ಆ ಬಳಿಕ ವಿವಾಹದ ಔತಣಕೂಟವೂ ಅಡ್ಯಾರ್ ಗಾರ್ಡನ್‌ನಲ್ಲಿ ಅದ್ದೂರಿಯಾಗಿ ನಡೆದಿತ್ತು.
ಮರುದಿನ ಮದುಮಗ ಮುಬಾರಕ್ ಅತ್ತೆಯ ಮನೆಗೆ ಬಂದಿದ್ದರು. ನವಜೋಡಿಯು ವಿವಾಹದ ಸಂಭ್ರಮದಲ್ಲಿದ್ದು, ಸೋಮವಾರ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಲೈಲಾ ಆಫಿಯಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.