ಪ್ರೀತಿಸುತ್ತಿದ್ದ ಯುವತಿ ಬೇರೆಯವನೊಂದಿಗೆ ಮದುವೆಯಾದ ವಿಚಾರವಾಗಿ ರೇಗಿಸುತ್ತಿದ್ದ ಯುವಕನ ಹತ್ಯೆಗೆ ಹಾಕಿದ್ದ ಸ್ಕೆಚ್‍ಗೆ ಆತನ ತಾಯಿ ಬಲಿಯಾಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗ ನಗರ ಪೆÇಲೀಸ್ ಠಾಣೆ ವ್ಯಾಪ್ಯಿಯ ಹೊರಪೇಟೆ ಬಡಾಮಕಾನ್‍ನಲ್ಲಿ ಭೀಕರ ಹತ್ಯೆ ನಡೆದಿದ್ದು, ಮೃತಳ ಮಗ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ಆರೋಪಿ ಇಮ್ತಿಯಾಜ್ ಎಂಬಾತ ಹೊಸದುರ್ಗ ಮೂಲದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ, ಆದರೆ ಆತನ ಪ್ರಿಯತಮೆ ಇಮ್ತಿಯಾಜ್ ಬಿಟ್ಟು ಬೇರೆ ಮದುವೆಯಾಗಿದ್ದಳು. ಈ ವಿಚಾರವಾಗಿ ಕೊಲೆಯಾಗಿರುವ 43 ವರ್ಷದ ಫರ್ಹಾನಾ ಬಾಬು ಮಗ ಮೆಹಫೂಸ್ ಇಲಾಹಿ ಎಂಬಾತ ರೇಗಿಸುತ್ತಿದ್ದ ಎಂಬ ಕಾರಣಕ್ಕೆ ಇಮ್ತಿಯಾಜ್ ಕೊಲೆ ಮಾಡಲು ಸ್ಕೆಚ್ ಹಾಕಿದ್ದ.
ನಿನ್ನೆ ರಾತ್ರಿ 10:30ರ ಸುಮಾರಿಗೆ ಫರ್ಹಾನಾ ಬಾನು ಮನೆ ಮೇಲೆರಿದ ಇಮ್ತಿಯಾಜ್ ಮನೆ ಮೇಲೆ ಇದ್ದ ನೀರಿನ ಟ್ಯಾಂಕ್‍ನ ಗೇಟ್ ಬಂದ್ ಮಾಡಿದ್ದಾನೆ. ನೆಲ್ಲಿಯಲ್ಲಿ ನೀರು ಯಾಕೆ ಬರುತ್ತಿಲ್ಲ ಎಂದು ತಾಯಿ ಜೊತೆ ಮೆಹಫೂಸ್ ಇಲಾಹಿ ಮೆಟ್ಟಿಲೇರುತ್ತಿದ್ದಂತೆ ಹೊಂಚು ಹಾಕಿ ಕುಳಿತಿದ್ದ ಆರೋಪಿ ಇಮ್ತಿಯಾಜ್ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಈ ವೇಳೆ ಮಗನನ್ನು ರಕ್ಷಿಸಲು ಮುಂದಾದ ಫರ್ಹಾನ ಬಾನುವಿಗೆ ಹಲವಾರು ಬಾರಿ ಚಾಕುವಿನಿಂದ ಇರಿದು ಮೆಟ್ಟಿಲಿನಿಂದ ಕೆಳಗೆ ನೂಕಿದ ಬಳಿಕ ಇಲಾಹಿಯ ಮೇಲು ದಾಳಿ ಮಾಡಿದ್ದಾನೆ. ಅರಚಾಟ ಕಿರುಚಾಟದ ಶಬ್ದ ಕೇಳಿ ಅಕ್ಕಪಕ್ಕದ ಮನೆಯವರು ಜಮಾಯಿಸುತ್ತಿದ್ದಂತೇ ಆರೋಪಿ ಇಮ್ತಿಯಾಜ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ತಾಯಿ ಮಗನನ್ನು ನೋಡಿದ ಅಕ್ಕಪಕ್ಕದ ಮನೆಯವರು ಕೂಡಲೇ ಜಿಲ್ಲಾಸ್ಪತ್ರೆ ಸಾಗಿಸಿದ್ದಾರೆ, ಆದರೆ ಮಾರ್ಗ ಮಧ್ಯೆಯೇ ಫರ್ಹಾನಾ ಬಾನು ಮೃತಪಟ್ಟಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಮೃತಳ ಮಗ ಮೆಹಫೂಸ್ ಇಲಾಹಿಗೆ ಜಿಲ್ಲಾಸ್ಪತ್ರೆ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣೆ ಪೆÇಲೀಸರು ಈಗಾಗಲೇ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ನಡೆದ ಸ್ಥಳಕ್ಕೆ ಚಿತ್ರದುರ್ಗ ಎಸ್ಪಿ ಜಿ.ರಾಧಿಕಾ, ಅಡಿಷನಲ್ ಎಸ್ಪಿ ಮಹಾನಿಂಗ ಎಂ.ನಂದಗಾವಿ, ಡಿವೈಎಸ್ಪಿ ಪಾಂಡುರಂಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.