ಚಿತ್ರದುರ್ಗ ಜ. 13
ಪೊಲೀಸರ ವಶದಲ್ಲಿದ್ದ ಆರೋಪಿ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ.ಅಗಳೇರಿ ಬಡಾವಣೆಯ ಶಿವಾಜಿರಾವ್(47) ಮೃತ ವ್ಯಕ್ತಿ.
ಚಿತ್ರದುರ್ಗ ನಗರದ ಅಗಳೇರಿ ಬಡಾವಣೆಯ ನಿವಾಸಿಯಾಗಿರವ ಶಿವಾಜಿರಾವ್ ಅವರನ್ನು ಗಾಂಜಾ ಮಾರಾಟ ಆರೋಪದಲ್ಲಿ ನಿನ್ನೆ ಸಂಜೆ ಐಎಸ್ ಡಿ ಪೊಲೀಸರು ಕರೆದೊಯ್ದಿದು, ವಿಚಾರಣೆ ನಡೆಸಿ ನಂತರ ನಗರ ಪೊಲೀಸ್ ಠಾಣೆಯ ಲಾಕಫ್‍ನಲ್ಲಿ ಇರಿಸಿದ್ದರು. ಆದರೆ ರಾತ್ರಿ ಶಿವಾಜಿರಾವ್ ತೀವ್ರ ನರಳಾಟದಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.
ಆದರೆ ಮೃತ ಆರೋಪಿ ಶಿವಾಜಿರಾವ್ ಪತ್ನಿ ಗೀತಾಬಾಯಿ ಹೇಳುವ ಪ್ರಕಾರ, ಇಬ್ಬರು ಪೊಲೀಸರು ಮನೆಗೆ ಬಂದು ನಿನ್ನೆ ಸಂಜೆ ಶಿವಾಜಿರಾವ್ ಅವರನ್ನು ಕರೆದೊಯ್ದಿದ್ದರು. ಆದರೆ ರಾತ್ರಿ ವೇಳೆಗೆ ಶಿವಾಜಿರಾವ್ ಸಾವಿನ ಮಾಹಿತಿ ನೀಡಿದ್ದಾರೆ. ಶಿವಾಜಿರಾವ್ ಅವರಿಗೆ ಯಾವುದೇ ರೀತಿಯ ಖಾಯಿಲೆ ಇರಲಿಲ್ಲ. ಬದಲಾಗಿ ಪೊಲೀಸರೇ ಶಿವಾಜಿರಾವ್ ಅವರ ಮೇಲೆ ಹಲ್ಲೆ ಮಾಡಿ ಲಾಕಪ್ ಡೆತ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಷಯ ತಿಳಿದ ಕೂಡಲೇ ನಗರ ಪೊಲೀಸ್ ಠಾಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಜಿ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾನಿಂಗ ಎಂ.ನಂದಗಾವಿಂ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.