ವ್ಯಕ್ತಿಗೆ ಬೇರೆಯವರ ಮುಖ, 2 ಕೈ ಜೋಡಣೆ: ಅಮೆರಿಕದಲ್ಲಿ ವೈದ್ಯಲೋಕದ ಪವಾಡ

ವಾಶಿಂಗ್ಟನ್,: ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 22 ವರ್ಷದ ವ್ಯಕ್ತಿಯೊಬ್ಬರಿಗೆ ಯಶಸ್ವಿಯಾಗಿ ಮುಖ ಮತ್ತು ಎರಡು ಕೈಗಳನ್ನು ಕಸಿ ಮಾಡಲಾಗಿದೆ ಎಂದು ಅವರ ವೈದ್ಯಕೀಯ ತಂಡ ಬುಧವಾರ ತಿಳಿಸಿದೆ. ಅವರು ಈ ರೀತಿಯ ಶಸ್ತ್ರಚಿಕಿತ್ಸೆಗೆ ಒಳಗಾದ ಜಗತ್ತಿನ ಮೊದಲ ವ್ಯಕ್ತಿಯಾಗಿದ್ದಾರೆ.

ಜೋ ಡಿಮಿಯೊ 2018 ಜುಲೈ ತಿಂಗಳಲ್ಲಿ ರಾತ್ರಿ ಪಾಳಿಯ ಕೆಲಸ ಮುಗಿಸಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ನಿದ್ದೆಗೆ ಜಾರಿದರು. ಅವರ ಕಾರು ಪಲ್ಟಿಯಾಗಿ ಸ್ಫೋಟಿಸಿತು ಹಾಗೂ ಅವರ ದೇಹದ 80 ಶೇಕಡಕ್ಕೂ ಹೆಚ್ಚಿನ ಭಾಗಕ್ಕೆ ಗಂಭೀರ ಗಾಯವಾಯಿತು. ಅವರ ಬೆರಳಿನ ತುದಿಗಳು ಮುರಿದಿದ್ದವು, ಮುಖದ ಮೇಲೆ ಆಳವಾದ ಗಾಯಗಳಾಗಿದ್ದವು ಹಾಗೂ ಅವರ ತುಟಿಗಳು ಮತ್ತು ಕಣ್ಣು ರೆಪ್ಪೆಗಳನ್ನು ಕಳೆದುಕೊಂಡಿದ್ದರು. ಅದು ಅವರ ಕಣ್ಣ ದೃಷ್ಟಿಯ ಮೇಲೆ ಪರಿಣಾಮ ಬೀರಿತು ಹಾಗೂ ಅವರು ಸಾಮಾನ್ಯ ಹಾಗೂ ಸ್ವತಂತ್ರ ಜೀವನ ನಡೆಸುವುದು ಅಸಾಧ್ಯವಾಯಿತು.

ಅವರಿಗೆ ಸರಿ ಹೊಂದುವ ಓರ್ವ ದೇಹ ದಾನಿಯನ್ನು ತೀವ್ರ ಶೋಧದ ಬಳಿಕ ಪತ್ತೆಹಚ್ಚಲಾಯಿತು. ಆ ವ್ಯಕ್ತಿಯ ಎರಡೂ ಕೈಗಳು ಮತ್ತು ಹಣೆ, ಹುಬ್ಬು, ಎರಡೂ ಕಿವಿಗಳು, ಮೂಗು, ಕಣ್ಣು ರೆಪ್ಪೆಗಳು, ತುಟಿಗಳು ಮತ್ತು ಅದರ ಜೊತೆಗಿನ ಬುರುಡೆ ಸೇರಿದಂತೆ ಸಂಪೂರ್ಣ ಮುಖವನ್ನು ಜೋ ಡಿಮಿಯೊಗೆ ಜೋಡಿಸಲಾಯಿತು.

2020 ಆಗಸ್ಟ್ 12ರಂದು 23 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಯಿತು. ವೈದ್ಯರು, ನರ್ಸ್‌ಗಳು ಸೇರಿದಂತೆ 96 ಆರೋಗ್ಯ ಸಿಬ್ಬಂದಿ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡರು.

Leave a Reply

Your email address will not be published.