ಕೋಲ್ಕತಾ: ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಅರಂಭವಾಗುವ ಒಂದು ದಿನ ಮೊದಲು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇಂದು ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಎಲ್ಲದಕ್ಕೂ ತನ್ನ ಹೆಸರನ್ನು ಇಡುವ ಪ್ರಧಾನಿ ನರೇಂದ್ರ ಮೋದಿ ಮುಂದೊಂದು ದಿನ ದೇಶಕ್ಕೆ ಕೂಡ ತನ್ನ ಹೆಸರಿಡುವ ದಿನ ದೂರವಿಲ್ಲ ಎಂದರು.
ಪಶ್ಚಿಮ ಮೇದಿನಿಪುರ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು ಭಾರತದ ಆರ್ಥಿಕತೆ ಕುಸಿತದತ್ತ ಸಾಗಿದೆ. ಇಲ್ಲಿ ಕೈಗಾರಿಕೆಗಳ ಬೆಳವಣಿಗೆಯಾಗುತ್ತಿಲ್ಲ. ನರೇಂದ್ರ ಮೋದಿಜಿಯ ಗಡ್ಡ ಹೊರತುಪಡಿಸಿ ಬೇರೆ ಯಾವುದೇ ರೀತಿಯ ಬೆಳವಣಿಗೆಯಾಗುತ್ತಿಲ್ಲ ಎಂದರು.
ಕೆಲವೊಮ್ಮೆ ಅವರು ರವೀಂದ್ರ ನಾಥ್ ಟ್ಯಾಗೋರ್ ಅವರಂತೆ ಉಡುಪನ್ನು ಧರಿಸುತ್ತಾರೆ. .ಕೆಲವೊಮ್ಮೆ ತನ್ನನ್ನು ತಾನು ಸ್ವಾಮಿ ವಿವೇಕಾನಂದ ಎಂದು ಕರೆದುಕೊಳ್ಲುತ್ತಾರೆ. ತಮ್ಮ ರಾಜ್ಯದ ಕ್ರೀಡಾಂಗಣಕ್ಕೆ ತನ್ನ ಹೆಸರನ್ನು ಮರುನಾಮಕರಣ ಮಾಡುತ್ತಾರೆ ಹಾಗೂ ಕೊರೋನವೈರಸ್ ಲಸಿಕೆಯ ಪ್ರಮಾಣಪತ್ರಗಳಲ್ಲಿ ತಮ್ಮ ಭಾವಚಿತ್ರಗಳನ್ನು ಮುದ್ರಿಸಿದ್ದಾರೆ, ಇಸ್ರೋ ತನ್ನ ಫೋಟೊವನ್ನು ಬಾಹ್ಯಾಕಾಶಕ್ಕೆ ಕಳುಹಿಸುವಂತೆ ನೋಡಿಕೊಳ್ಳುತ್ತಾರೆ ಎಂದು ಬ್ಯಾನರ್ಜಿ ತಿಳಿಸಿದ್ದಾರೆ.