ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮದಿಂದ ಸ್ಪರ್ಧಿಸುತ್ತೇನೆಂದು ಸೋಮವಾರ ಘೋಷಿಸಿದ್ದಾರೆ. ಇತ್ತೀಚೆಗೆ ಬಿಜೆಪಿಗೆ ಸೇರಿರುವ ಮಾಜಿ ಟಿಎಂಸಿ ಮುಖಂಡ ಸುವೇಂದು ಅಧಿಕಾರಿ 2016ರಲ್ಲಿ ನಂದಿಗ್ರಾಮ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು ಈ ಭಾಗದಲ್ಲಿ ಪ್ರಭಾವಿ ನಾಯಕನಾಗಿದ್ದಾರೆ.
‘ನಾನು ನಂದಿಗ್ರಾಮದಿಂದ ಸ್ಪರ್ಧಿಸುತ್ತೇನೆ. ನಂದಿಗ್ರಾಮ ನಿನ್ನ ಅದೃಷ್ಟದ ತಾಣ, ನಿನ್ನ ಪವಿತ್ರ ತಾಣ ಎಂದು ನನ್ನ ಅಂತರಾತ್ಮ ಹೇಳುತ್ತಿದೆ. ಹೀಗಾಗಿ ನಾನು ಇಲ್ಲಿಯೇ ಸ್ಪರ್ಧಿಸುವೆ” ಎಂದು ನಂದಿಗ್ರಾಮದಲ್ಲಿ ನಡೆದ ರ್ಯಾಲಿಯಲ್ಲಿ ಮಮತಾ ಹೇಳಿದರು.
ಮಮತಾ ಘೋಷಣೆಯ ಕೆಲವೇ ಗಂಟೆಗಳ ಬಳಿಕ ಪ್ರತಿಕ್ರಿಯಿಸಿದ ಅಧಿಕಾರಿ, ”ನಾನು ಸಿಎಂ ಮಮತಾ ಅವರ ಸವಾಲು ಸ್ವೀಕರಿಸುತ್ತೇನೆ. ಒಂದೋ ಸಿಎಂ ಅನ್ನು ಸೋಲಿಸುತ್ತೇನೆ, ಇಲ್ಲವೇ ರಾಜಕೀಯ ತ್ಯಜಿಸುತ್ತೇನೆ” ಎಂದಿದ್ದಾರೆ.
‘ನನ್ನ ಪಕ್ಷವು ನನ್ನನ್ನು ನಂದಿಗ್ರಾಮ ಕ್ಷೇತ್ರದಿಂದ ಕಣಕ್ಕಿಳಿಸಿದರೆ, ನಾನು ಅವರನ್ನು ಕನಿಷ್ಠ 50,000 ಮತಗಳ ಅಂತರದಿಂದ ಸೋಲಿಸುವೆ ಇಲ್ಲವೇ ರಾಜಕೀಯವನ್ನು ತ್ಯಜಿಸುವೆ” ಎಂದು ಸವಾಲು ಹಾಕಿದರು.
ಸುವೇಂಧು ಅಧಿಕಾರಿಯ ಕುಟುಂಬ ಪೂರ್ವ ಹಾಗೂ ಪಶ್ಚಿಮ ಮಿಡ್ನಾಪುರ ಜಿಲ್ಲೆಗಳಲ್ಲಿ ಭಾರೀ ಪ್ರಭಾವ ಹೊಂದಿದ್ದು, ಸುವೇಂದು ತಂದೆ ಹಾಲಿ ಸಂಸದರಾಗಿದ್ದಾರೆ. ಅವರ ಕಿರಿಯ ಸಹೋದರ ದಿಬ್ಯೇಂದು ಹಾಗೂ ಇನ್ನೊಬ್ಬ ಸಹೋದರ ಕೂಡ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಮತಾ ಅವರು ನಂದಿಗ್ರಾಮದಲ್ಲಿ ಸ್ಪರ್ಧಿಸಲು ನಿರ್ಧರಿಸಿರುವುದು ಟಿಎಂಸಿಯ ತಳಮಟ್ಟದ ಕಾರ್ಯಕರ್ತರಿಗೆ ಚೈತನ್ಯ ತಂದಿದೆಯಲ್ಲದೆ, ಎದುರಾಳಿ ಬಿಜೆಪಿಗೆ ದೊಡ್ಡ ಸವಾಲು ಎದುರಾಗಿದೆ ಎನ್ನಲಾಗಿದೆ.