ನಂಜುಂಡೇಶ್ವರನ ರಥೋತ್ಸವ ಬಲಭಾಗದ ದೊಡ್ಡ ಚಕ್ರ ಮುರಿದು ಅವಘಡ

ನಂಜನಗೂಡು – ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಇತಿಹಾಸ ಪ್ರಸಿದ್ಧ ಶ್ರೀ ಶ್ರೀಕಂಠೇಶ್ವರ ಪಂಚ ಮಹಾ ರಥೋತ್ಸವದ ಬದಲು ಐದು ಚಿಕ್ಕ ರಥಗಳನ್ನು ಸಾಂಪ್ರದಾಯಿಕವಾಗಿ ಹಾಗೂ ಸರಳವಾಗಿ ಇಂದು ಆಚರಿಸಲಾಯಿತು. ಪ್ರತಿ ವರ್ಷ ಮಹಾರಥೋತ್ಸವದ ಸಂದರ್ಭದಲ್ಲಿ ಏನಾದರೊಂದು ಅವಘಡ ನಡೆಯುತ್ತಲೇ
ಇರುತ್ತದೆ.

ಇಂದೂ ಕೂಡ ಪಾರ್ವತಮ್ಮನವರನ್ನು ಪ್ರತಿಷ್ಠಾಪಿಸಿದ್ದ ರಥವನ್ನು ಎಳೆಯಲು ಮುಂದಾದಾಗ ಬಲಭಾಗದ ದೊಡ್ಡ ಚಕ್ರ ಮುರಿದು ಪುಡಿ ಪುಡಿಯಾಯಿತು. ಇದರಿಂದ ಕೆಲಕಾಲ ಆತಂಕ ಉಂಟಾಯಿತು. ನಂತರ ಬೇರೆ ರಥಕ್ಕೆ ದೇವಿಯನ್ನು ಕುಳ್ಳಿರಿಸಿ ರಥ ಹೊರಡಿಸಲಾಯಿತು. ಬೆಳಗ್ಗೆ 6.30ಕ್ಕೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಶ್ರೀ ಶ್ರೀಕಂಠೇಶ್ವರ ದೇವಾಲಯದ ಅರ್ಚಕರಾದ ನಾಗಚಂದ್ರ ದೀಕ್ಷಿತ್ ಅವರ ನೇತೃತ್ವದ ತಂಡ ರಥಗಳಿಗೆ ಪೂಜಾಕಾರ್ಯ ನೆರವೇರಿಸಿದರು.

ಮೊದಲು ಶ್ರೀ ಗಣಪತಿಗೆ ಪೂಜೆ ಸಲ್ಲಿಸಿ ಗಣಪತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಿ ಹೊರಡಿಸಲಾಯಿತು. ನಂತರ ಶ್ರೀ ಶ್ರೀಕಂಠೇಶ್ವರ ಸ್ವಾಮಿ, ಪಾರ್ವತಮ್ಮ, ಸುಬ್ರಹ್ಮಣ್ಯ ರಥಗಳು ಹೊರಟವು. ಕೊನೆಯಲ್ಲಿ ಚಂಡಿಕೇಶ್ವರಸ್ವಾಮಿ ರಥ ಹೊರಟಿತು. 6.30ಕ್ಕೆ ಹೊರಟ ರಥಗಳು ಪಟ್ಟಣದ ರಥ ಬೀದಿಗಳಲ್ಲಿ ಸಂಚರಿಸಿ 8.30ಕ್ಕೆ ಸ್ವಸ್ಥಾನ ತಲುಪಿದವು.

ಹೊರಭಾಗದ ಜನರಿಗೆ ಈ ಬಾರಿ ಅವಕಾಶ ನಿರಾಕರಿಸಲಾಗಿತ್ತು. ಸ್ಥಳೀಯ ಭಕ್ತರು ಬೆಳಗ್ಗೆ 5.30ರಿಂದಲೇ ದೇವಾಲಯದ ಬಳಿ ಜಮಾಯಿಸಿ ಪಂಚ ಚಿಕ್ಕ ರಥಗಳನ್ನು ಕಣ್ತುಂಬಿಕೊಂಡು ಭಕ್ತಿ ಸಮರ್ಪಿಸಿದರು. ಡಿವೈಎಸ್‍ಪಿ, ಸರ್ಕಲ್ ಇನ್ಸ್‍ಪೆಕ್ಟರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ, ಉಪವಿಭಾಗಾಧಿಕಾರಿ ವೆಂಕಟರಾಜು, ತಹಸೀಲ್ದಾರ್ ಮೋಹನ್‍ಕುಮಾರ್ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ನೋಟಿಸ್: ಪಾರ್ವತಮ್ಮನವರ ರಥದ ಚಕ್ರ ಪುಡಿಯಾದ ಹಿನ್ನೆಲೆಯಲ್ಲಿ ಇಂಜಿನಿಯರ್‍ಗೆ ಉಪವಿಭಾಗಾಧಿಕಾರಿ ವೆಂಕಟರಾಜು ಅವರು ನೋಟಿಸ್ ನೀಡಿದ್ದಾರೆ. ರಥೋತ್ಸವ ಒಂದು ವಾರ ಇರುವಂತೆಯೇ ರಥಗಳನ್ನು ಪರೀಕ್ಷಿಸಿ ತೊಂದರೆ ಇದ್ದರೆ ಸರಿಪಡಿಸಬೇಕಿತ್ತು. ಆದರೆ, ಇದ್ಯಾವುದನ್ನೂ ಮಾಡದೆ ಇಂದು ದಿಢೀರನೆ ರಥ ಹೊರಡಿಸಿದ್ದರಿಂದ ಚಕ್ರ ಮುರಿದಿದೆ ಎಂದು ಉಪವಿಭಾಗಾಧಿಕಾರಿ ಹೇಳಿದ್ದಾರೆ.

Leave a Reply

Your email address will not be published.